ಬ್ಲ್ಯಾಕ್ ಲೂಪರ್ (ಕಪ್ಪು ಕೀಟ)

TEA

ಬ್ಲ್ಯಾಕ್ ಲೂಪರ್ (ಕಪ್ಪು ಕೀಟ)

Hyposidra talaca

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳು ತೆಳುವಾಗಿ, ಪಾರದರ್ಶಕವಾಗಿ ಹಾನಿಗೊಳಗಾಗುವುದು.
  • ಕೀಟವು ಪೊದೆಯ ಹೊರಭಾಗದಿಂದ ತಿನ್ನಲು ಪ್ರಾರಂಭಿಸಿ ಒಳಗಿನ ಕಡೆಗೆ ಸಾಗುವುದು.
  • ಗಿಡದ ಎಲ್ಲಾ ಎಲೆಗಳನ್ನು ತಿಂದು ಮುಗಿಸುವುದರಿಂದ, ಪೊದೆಗಳು ಎಲೆಗಳಿಲ್ಲದೆ ಬೋಳಾಗಿ ಮತ್ತು ಸುಟ್ಟಂತೆ ಕಾಣಿಸುವುದು.
  • ಕಪ್ಪು ಬಣ್ಣದ ಲಾರ್ವಾಗಳ ಮೇಲೆ ಬಿಳಿ ಚುಕ್ಕೆಗಳಿದ್ದು, ಅವು ಪಟ್ಟೆಗಳಂತೆ ಕಾಣಿಸುವುದು.

ಇವುಗಳಲ್ಲಿ ಸಹ ಕಾಣಬಹುದು


ಬ್ಲ್ಯಾಕ್ ಲೂಪರ್ (ಕಪ್ಪು ಕೀಟ)

TEA

ರೋಗಲಕ್ಷಣಗಳು

ಮೊದಲು, ಸಣ್ಣ ಲಾರ್ವಾಗಳು ಎಲೆಗಳ ಮೃದುವಾದ ಭಾಗವನ್ನು ತಿನ್ನುತ್ತವೆ. ಇದರಿಂದ ಎಲೆಗಳು ತೆಳುವಾಗಿ, ಪಾರದರ್ಶಕವಾಗಿ ಬದಲಾಗುತ್ತವೆ. ಇವು ಬೆಳೆದಂತೆಲ್ಲಾ, ಇಡೀ ಎಲೆಯನ್ನು ತಿಂದು ಮುಗಿಸುತ್ತವೆ. ಚಹಾ ಪೊದೆಯ ಹೊರಭಾಗದಿಂದ ತಿನ್ನಲು ಪ್ರಾರಂಭಿಸಿ ಒಳಗಿನ ಕಡೆಗೆ ಸಾಗುತ್ತವೆ. ಇವುಗಳ ಸಂಖ್ಯೆ ಹೆಚ್ಚಾದಾಗ, ಚಹಾ ಪೊದೆಯ ಎಲ್ಲಾ ಎಲೆಗಳನ್ನು ಸಂಪೂರ್ಣವಾಗಿ ತಿಂದುಹಾಕಬಹುದು. ಇದರಿಂದ ಪೊದೆಗಳು ಎಲೆಗಳಿಲ್ಲದೆ ಬೋಳಾಗಿ ಮತ್ತು ಸುಟ್ಟಂತೆ ಕಾಣಿಸುತ್ತವೆ. ಎಲೆಗಳನ್ನು ಪದೇ ಪದೇ ತಿಂದಾಗ ಚಹಾ ಗಿಡಗಳು ದುರ್ಬಲಗೊಳ್ಳುತ್ತವೆ, ಇಳುವರಿಯ ಗುಣಮಟ್ಟ ಕಡಿಮೆಯಾಗುತ್ತದೆ ಮತ್ತು ಗಿಡಗಳಿಗೆ ಸುಲಭವಾಗಿ ಇತರ ಕೀಟ ಹಾಗೂ ರೋಗಗಳು ತಗುಲುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬ್ಲ್ಯಾಕ್ ಲೂಪರ್ ಕೀಟವನ್ನು ತಿನ್ನುವ ಹಲವು ನೈಸರ್ಗಿಕ ಶತ್ರು ಜೀವಿಗಳನ್ನು ಪತ್ತೆಹಚ್ಚಲಾಗಿದ್ದು, ಇವುಗಳನ್ನು ಸಮಗ್ರ ಕೀಟ ನಿರ್ವಹಣಾ (IPM) ಯೋಜನೆಯಲ್ಲಿ ಬಳಸಬಹುದು. ಪರಾವಲಂಬಿ ಕಣಜಗಳು (ಉದಾಹರಣೆಗೆ: ಕೋಟೇಸಿಯಾ ರುಫಿಕ್ರಸ್) ಲೂಪರ್ ಕೀಟಗಳ ದೇಹದ ಒಳಗೆ ಮೊಟ್ಟೆ ಇಡುತ್ತವೆ. ಶರತ್ಕಾಲದ ಕೊನೆಯಲ್ಲಿ ಮತ್ತು ವಸಂತಕಾಲದಲ್ಲಿ ಇವುಗಳ ಸಂಖ್ಯೆ ಹೆಚ್ಚಾಗಿರುತ್ತದೆ, ಇದೇ ಸಮಯದಲ್ಲಿ ಲೂಪರ್ ಕೀಟಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಪರಭಕ್ಷಕ ದುರ್ವಾಸನೆ ತಿಗಣೆಗಳು (ಉದಾಹರಣೆಗೆ: ಇಯೋಕಾಂಥೆಕೋನಾ ಫುರ್ಸೆಲ್ಲಾಟಾ) ಲೂಪರ್ ಕೀಟದ ಮರಿಗಳನ್ನು ತಿನ್ನುತ್ತವೆ. ಇವು ಇಡೀ ವರ್ಷ ಸಕ್ರಿಯವಾಗಿದ್ದರೂ, ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ನೈಸರ್ಗಿಕ ಶತ್ರು ಜೀವಿಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಿ ತೋಟಗಳಿಗೆ ಬಿಡಬಹುದು. ಇದಲ್ಲದೆ, 'ಹೈಪೋಸಿಡ್ರಾ ತಲಾಕಾ ನ್ಯೂಕ್ಲಿಯೊಪೊಲಿಹೆಡ್ರೊವೈರಸ್' (HytaNPV) ಎಂಬ ವೈರಸ್ ಒಂದು ಉತ್ತಮ ನೈಸರ್ಗಿಕ ಕೀಟನಾಶಕವಾಗಿದೆ. ಪ್ರತಿ ಹೆಕ್ಟೇರ್‌ಗೆ 800–1000 ಮಿಲಿ ಲೀಟರ್‌ನಷ್ಟು ಬಳಸುವುದರಿಂದ ಲೂಪರ್ ಕೀಟಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಪ್ರಯೋಗಗಳು ತೋರಿಸಿವೆ. ಸಮಗ್ರ ಕೀಟ ನಿರ್ವಹಣಾ (IPM) ಕಾರ್ಯಕ್ರಮದಲ್ಲಿ ರಾಸಾಯನಿಕ ಕೀಟನಾಶಕಗಳಿಗೆ ಬದಲಾಗಿ 'HytaNPV' ಅನ್ನು ಒಂದು ಸುರಕ್ಷಿತ ಮತ್ತು ಪರಿಣಾಮಕಾರಿ ಪರ್ಯಾಯವೆಂದು ಪರಿಗಣಿಸಲಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳನ್ನು ಒಳಗೊಂಡ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಐತಿಹಾಸಿಕವಾಗಿ ಬ್ಲ್ಯಾಕ್ ಲೂಪರ್ ನಿಯಂತ್ರಣಕ್ಕಾಗಿ ರಾಸಾಯನಿಕ ಕೀಟನಾಶಕಗಳನ್ನೇ ಹೆಚ್ಚಾಗಿ ಅವಲಂಬಿಸಲಾಗಿತ್ತು; ಆದರೆ, ಪ್ರಮುಖ ಚಹಾ ಬೆಳೆಯುವ ಪ್ರದೇಶಗಳಲ್ಲಿ ಈ ಕೀಟವು ವಿವಿಧ ರಾಸಾಯನಿಕ ವರ್ಗಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿರುವುದು ಒಂದು ಗಂಭೀರ ಮತ್ತು ಹೆಚ್ಚುತ್ತಿರುವ ಚಿಂತೆಯಾಗಿದೆ. ಕೀಟವು ಮತ್ತಷ್ಟು ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದನ್ನು ನಿಧಾನಿಸಲು ಕೀಟನಾಶಕಗಳ ವರ್ಗಗಳನ್ನು ಬದಲಾಯಿಸುತ್ತಾ ಇರಿ ಮತ್ತು ಯಾವಾಗಲೂ ಲೇಬಲ್‌ನಲ್ಲಿರುವ ಸೂಚನೆಗಳ ಪ್ರಕಾರವೇ ಅವುಗಳನ್ನು ಬಳಸಿ.

ಅದಕ್ಕೆ ಏನು ಕಾರಣ

ಈ ಹಾನಿಯು 'ಹೈಪೋಸಿಡ್ರಾ ತಲಾಕಾ' ಎಂಬ ಬ್ಲ್ಯಾಕ್ ಲೂಪರ್ ಪತಂಗದ ಲಾರ್ವಾಗಳಿಂದ ಉಂಟಾಗುತ್ತದೆ. ಇದನ್ನು 'ಬ್ಲ್ಯಾಕ್ ಇಂಚ್ ವರ್ಮ್' ಎಂದೂ ಕರೆಯುತ್ತಾರೆ. ವಯಸ್ಕ ಪತಂಗವು ಒಣಗಿದ ಎಲೆಯಂತೆ ಕಾಣಿಸುವುದರಿಂದ, ಅದು ಸುಲಭವಾಗಿ ಅಡಗಿಕೊಳ್ಳುತ್ತದೆ. ಹೆಣ್ಣು ಪತಂಗಗಳು ಚಹಾ ತೋಟದಲ್ಲಿರುವ ನೆರಳು ನೀಡುವ ಮರಗಳ ಸಡಿಲವಾದ ತೊಗಟೆ, ಪಾಚಿ ಅಥವಾ ಬೇರುಗಳ ಕೆಳಗೆ ದೊಡ್ಡ ಗುಂಪುಗಳಲ್ಲಿ (ಸುಮಾರು 250) ಮೊಟ್ಟೆಗಳನ್ನು ಇಡುತ್ತವೆ. ಅವು ಚಹಾ ಗಿಡಗಳ ಮೇಲೆ ನೇರವಾಗಿ ಮೊಟ್ಟೆಗಳನ್ನು ಇಡುವುದಿಲ್ಲ. ಮೊಟ್ಟೆಯೊಡೆದು ಹೊರಬಂದ ಬಿಳಿ ಚುಕ್ಕೆಗಳಿರುವ ಸಣ್ಣ ಕಪ್ಪು ಲಾರ್ವಾಗಳು, ನೆರಳು ನೀಡುವ ಮರಗಳಿಂದ ಕೆಳಗೆ ಬಿದ್ದು ಚಹಾ ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಈ ಕೀಟವು ವರ್ಷಕ್ಕೆ ಹಲವು ತಲೆಮಾರುಗಳನ್ನು (6 ರಿಂದ 8 ಬಾರಿ) ಹೊಂದುವುದರಿಂದ, ಇದು ಯಾವಾಗಲೂ ಚಹಾ ಗಿಡಗಳ ಮೇಲೆ ಕಂಡುಬರುತ್ತದೆ. ಹವಾಮಾನವು ಬೆಚ್ಚಗಿದ್ದಾಗ, ನೆರಳು ನೀಡುವ ಮರಗಳು ಇದ್ದಾಗ ಮತ್ತು ಅತಿಯಾಗಿ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸಿದಾಗ ಇವುಗಳ ಕಾಟ ಹೆಚ್ಚಾಗುತ್ತದೆ. ಏಕೆಂದರೆ ಕೀಟನಾಶಕಗಳು ಇವುಗಳನ್ನು ತಿನ್ನುವ ನೈಸರ್ಗಿಕ ಶತ್ರು ಜೀವಿಗಳನ್ನು ಕೊಲ್ಲುತ್ತವೆ. ಹವಾಮಾನ ವೈಪರೀತ್ಯದ ಕಾರಣದಿಂದಾಗಿಯೂ ಹಿಮಾಲಯದ ಸಮೀಪವಿರುವ ಚಹಾ ಬೆಳೆಯುವ ಪ್ರದೇಶಗಳಲ್ಲಿ ಈ ಕೀಟಗಳ ಹಾವಳಿ ಹೆಚ್ಚಾಗುತ್ತಿದೆ.


ಮುಂಜಾಗ್ರತಾ ಕ್ರಮಗಳು

  • ಚಹಾ ಪೊದೆಗಳನ್ನು ಮತ್ತು ನೆರಳು ನೀಡುವ ಮರಗಳನ್ನು ನಿಯಮಿತವಾಗಿ ಪರಿಶೀಲಿಸಿ.
  • ಆರಂಭದಲ್ಲೇ ಕೀಟಗಳು ಎಲೆ ತಿನ್ನುತ್ತಿರುವುದು ಅಥವಾ ಮರದ ತೊಗಟೆಯ ಮೇಲೆ ಮೊಟ್ಟೆ ಇಟ್ಟಿರುವುದು ಕಂಡುಬಂದರೆ ಜಾಗ್ರತೆ ವಹಿಸಿ.
  • ನೆರಳು ನೀಡುವ ಮರಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ಇರಲಿ.
  • ಅತಿ ಎತ್ತರವಿರುವ ಮರಗಳನ್ನು ಬೆಳೆಸಬೇಡಿ, ಏಕೆಂದರೆ ಮರ ಎಷ್ಟು ಎತ್ತರವಿದ್ದರೆ ಕೀಟಗಳು ಅಷ್ಟು ಹೆಚ್ಚು ಮೊಟ್ಟೆ ಇಡುತ್ತವೆ ಎಂದು ಕಂಡುಬಂದಿದೆ.
  • ಕೀಟಗಳನ್ನು ನಿಯಂತ್ರಿಸಲು ಕೃಷಿ, ಯಾಂತ್ರಿಕ, ಜೈವಿಕ ಮತ್ತು ರಾಸಾಯನಿಕ ವಿಧಾನಗಳನ್ನು ಒಳಗೊಂಡ ಸಮಗ್ರ ಕೀಟ ನಿರ್ವಹಣೆಯನ್ನು ಅಳವಡಿಸಿಕೊಳ್ಳಿ.
  • ತೋಟದ ಪರಿಸರದಲ್ಲಿ ಕೀಟಗಳನ್ನು ತಿನ್ನುವ ನೈಸರ್ಗಿಕ ಶತ್ರು ಜೀವಿಗಳನ್ನು ರಕ್ಷಿಸಲು, ಅನಗತ್ಯವಾದ ವಿಶಾಲ ಶ್ರೇಣಿಯ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ