ಕಪ್ಪು ಕಾಯಿ ರೋಗ

ಕೋಕೋ ಬೀಜ

ಕಪ್ಪು ಕಾಯಿ ರೋಗ

Phytophthora palmivora

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕಾಯಿಗಳ ಮೇಲೆ ವೇಗವಾಗಿ ಹರಡುವ ದುಂಡಗಿನ ಕಂದು ಕಲೆಗಳು ಕಾಣಿಸಿಕೊಳ್ಳುತ್ತವೆ.
  • ಸೋಂಕಿತ ಕಾಯಿಗಳು ಸಂಪೂರ್ಣ ಕಪ್ಪಾಗಿ ಒಣಗಿಹೋಗುತ್ತವೆ.
  • ಕಾಯಿಗಳ ಮೇಲೆ ಬಿಳಿ ಬಣ್ಣದ ಶಿಲೀಂಧ್ರ ಬೀಜಕಗಳು (ಸ್ಪೋರ್ಸ್‌) ಕಾಣಿಸಿಕೊಳ್ಳುತ್ತವೆ ಮತ್ತು ಕೆಟ್ಟ ಮೀನಿನ ವಾಸನೆ ಬರುತ್ತದೆ.
  • ಇದು ಸಂಪೂರ್ಣ ಗಿಡಕ್ಕೆ ಹಾನಿ ಮಾಡುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

0 ಬೆಳೆಗಳು

ಕಪ್ಪು ಕಾಯಿ ರೋಗ

ಕೋಕೋ ಬೀಜ

ರೋಗಲಕ್ಷಣಗಳು

ದುಂಡಗಿನ ಕಂದು ಕಲೆಗಳು ಸಾಮಾನ್ಯವಾಗಿ ಕಾಯಿಯ ಮೇಲ್ಭಾಗ ಅಥವಾ ಕೆಳಭಾಗದಲ್ಲಿ ಪ್ರಾರಂಭವಾಗಿ ಕೇವಲ ಒಂದರಿಂದ ಎರಡು ವಾರಗಳಲ್ಲಿ ಇಡೀ ಕಾಯಿಯನ್ನು ಆವರಿಸುವಷ್ಟು ವೇಗವಾಗಿ ಹರಡುತ್ತವೆ. ತೇವಾಂಶದ ಹವಾಮಾನದಲ್ಲಿ ಈ ಕಂದು ಕಲೆಗಳ ಮೇಲೆ ಬಿಳಿ ಬಣ್ಣದ ಬೀಜಕಗಳು ಕಾಣಿಸಿಕೊಳ್ಳುತ್ತವೆ ಮತ್ತು ಸೋಂಕಿತ ಕೋಕೋ ಕಾಯಿಗಳಿಂದ ಬಲವಾದ ಮೀನಿನ ವಾಸನೆ ಬರುತ್ತದೆ. ಅಂತಹ ಕಾಯಿಗಳು ಕಪ್ಪಾಗಿ ಒಣಗುತ್ತವೆ ಮತ್ತು ಗಿಡಕ್ಕೆ ಅಂಟಿಕೊಂಡೇ ಒಣಗುತ್ತವೆ. ಎಳೆಯ ಕಾಯಿಗಳಲ್ಲಿ ಒಳಗಿನ ಬೀಜಗಳು ಕೊಳೆಯುತ್ತವೆ ಆದರೆ ಬಲಿತ ಕಾಯಿಗಳಲ್ಲಿ ಬೀಜಗಳು ಆರೋಗ್ಯಕರವಾಗಿರುವ ಸಾಧ್ಯತೆ ಇದೆ. ಎಳೆಯ ಚಿಗುರುಗಳು ವೇಗವಾಗಿ ಕಂದು ಬಣ್ಣಕ್ಕೆ ತಿರುಗಿ ಸಂಪೂರ್ಣವಾಗಿ ಸತ್ತುಹೋಗಬಹುದು. ಕಾಂಡಗಳ ಮೇಲೆ ತೊಗಟೆಯ ಕೆಳಗೆ ಹೊಳೆವ ಗುಲಾಬಿ ಅಥವಾ ವೈನ್ ಬಣ್ಣವಿರುವ ಅಂಡಾಕಾರದ ತುಕ್ಕು-ಕಂದು ಬಣ್ಣದ ಚುಕ್ಕೆಗಳನ್ನು ಗಮನಿಸಬಹುದು. ಎಲೆಗಳು ಎಲೆಯ ನಾಳಗಳ ಉದ್ದಕ್ಕೂ ಬಣ್ಣ ಕಳೆದುಕೊಳ್ಳಬಹುದು. ಬುಡ ಮತ್ತು ಕಾಂಡದ ಮೇಲೆ ಕೆಂಪು-ಕಂದು ಅಂಟಂಟಾದ ಸ್ರಾವದೊಂದಿಗೆ ಕಪ್ಪು ಕಂದು ಬಣ್ಣದ ನೀರಿನಿಂದ ಕೂಡಿದ ಗಾಯಗಳನ್ನು ಗಮನಿಸಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ರಾಸಾಯನಿಕಗಳಂತೆಯೇ ಜೈವಿಕ ನಿಯಂತ್ರಣವು ಕೂಡ ಕಾಯಿಗಳಿಗೆ ಸೋಂಕು ತಗುಲುವ ಮೊದಲು ಬಳಸಿದಾಗ ಹೆಚ್ಚು ಫಲ ನೀಡುತ್ತದೆ. ಕೆಲವು ಟ್ರೈಕೋಡರ್ಮಾ ಪ್ರಭೇದಗಳನ್ನು ನಿಯಮಿತವಾಗಿ ಮತ್ತು ಮುನ್ನೆಚ್ಚರಿಕೆಯಾಗಿ ಬಳಸುವ ಮೂಲಕ ಈ ಶಿಲೀಂಧ್ರವನ್ನು ಹತೋಟಿಯಲ್ಲಿಡಲು ಸಾಧ್ಯವಿದೆ ಎಂದು ಕಂಡುಬಂದಿದೆ.

ರಾಸಾಯನಿಕ ನಿಯಂತ್ರಣ

ರಾಸಾಯನಿಕ ಶಿಲೀಂಧ್ರನಾಶಕಗಳು ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ಆದರೆ ಅವುಗಳನ್ನು ಉತ್ತಮ ಕೃಷಿ ಪದ್ಧತಿಗಳ ಜೊತೆಗೆ ಬಳಸಿದಾಗ ಮಾತ್ರ ಹೆಚ್ಚು ಪರಿಣಾಮಕಾರಿ. ಸೋಂಕಿತ ಮರಗಳನ್ನು ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಯಾವಾಗಲೂ ಉತ್ತಮ ಮತ್ತು ಲಾಭದಾಯಕವಾಗಿದೆ. ಮಳೆಗಾಲ ಪ್ರಾರಂಭವಾಗುವ ಮೊದಲು, ಹೂವು ಬಿಡುವ ಮತ್ತು ಕಾಯಿ ಕಟ್ಟುವ ಹಂತದ ನಡುವೆ ಇವುಗಳನ್ನು ಬಳಸಬೇಕು. ಮಳೆಗಾಲದಲ್ಲಿ ಪ್ರತಿ 3-4 ವಾರಗಳಿಗೊಮ್ಮೆ ಸಿಂಪಡಿಸಬೇಕು ಮತ್ತು ರೋಗದ ತೀವ್ರತೆ ಹೆಚ್ಚಿದ್ದಲ್ಲಿ ಪ್ರತಿ ಹಂಗಾಮಿಗೆ 6-8 ಬಾರಿ ಸಿಂಪಡಣೆ ಮಾಡುವುದು ಅಗತ್ಯವಾಗಿದೆ. ಮಳೆಗಾಲಕ್ಕೆ ಮುಂಚಿತವಾಗಿ ಕಾಂಡ ಮತ್ತು ಮುಖ್ಯ ಕೊಂಬೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ಅನ್ವಯಿಸಬೇಕು. ಪ್ರತಿ ಹಂಗಾಮಿಗೆ ಒಂದು ಬಾರಿ ಕಾಂಡಕ್ಕೆ ಚುಚ್ಚುಮದ್ದು ನೀಡುವುದು ಕೂಡ ಹಲವು ಬಾರಿ ಸಿಂಪಡಿಸಿದಷ್ಚೇ ಪರಿಣಾಮಕಾರಿಯಾಗಿರುತ್ತದೆ.

ಅದಕ್ಕೆ ಏನು ಕಾರಣ

ಕಪ್ಪು ಕಾಯಿ ರೋಗವು ಫೈಟೊಫ್ಥೊರಾ ಪಾಲ್ಮಿವೋರಾ ಎಂಬ ಮಣ್ಣಿನ ಮೂಲಕ ಹರಡುವ, ಇಡೀ ಸಸ್ಯವನ್ನು ಆಕ್ರಮಿಸುವ ರೋಗಕಾರಕದಿಂದ ಉಂಟಾಗುತ್ತದೆ. ಇದು ಎಲ್ಲಾ ವಯಸ್ಸಿನ ಕಾಯಿಗಳು, ಕಾಂಡಗಳು, ಚಿಗುರುಗಳು, ಎಲೆಗಳು ಮತ್ತು ಬೇರುಗಳ ಮೇಲೆ ದಾಳಿ ಮಾಡುತ್ತದೆ. ಶಿಲೀಂಧ್ರದ ಬೀಜಕಗಳು ಗಾಳಿ ಮತ್ತು ಮಳೆಯ ಹನಿಗಳ ಮೂಲಕ ಹರಡುವುದರಿಂದ ಹೆಚ್ಚಿನ ಆರ್ದ್ರತೆ ಇರುವ ಮಳೆಗಾಲದಲ್ಲಿ ಈ ರೋಗ ಪ್ರಮುಖವಾಗಿ ಹರಡುತ್ತದೆ. ಸೋಂಕಿತ ಮತ್ತು ಆರೋಗ್ಯಕರ ಗಿಡದ ಭಾಗಗಳ ನಡುವಿನ ನೇರ ಸಂಪರ್ಕ ಅಥವಾ ಕಲುಷಿತ ಮಣ್ಣು ಮತ್ತು ಉಪಕರಣಗಳಿಂದ ರೋಗವು ತೀವ್ರವಾಗಿ ಹರಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮಣ್ಣಲ್ಲಿ ನೀರು ನಿಲ್ಲುವುದನ್ನು ತಪ್ಪಿಸಲು ಚೆನ್ನಾಗಿ ನೀರು ಹರಿಯುವ ಸ್ಥಳಗಳಲ್ಲಿ ನೆಡಿ.
  • ಶಿಲೀಂಧ್ರ-ಸೋಂಕಿತ ಮಣ್ಣಿನಲ್ಲಿ ನೆಡಬೇಡಿ.
  • ಲಭ್ಯವಿದ್ದಲ್ಲಿ ರೋಗ ನಿರೋಧಕ ಅಥವಾ ಸಹಿಷ್ಣು ಶಕ್ತಿಯುಳ್ಳ ಕೋಕೋ ತಳಿಗಳನ್ನು ಬಳಸಿ.
  • ನೀರಿನ ಸಂಗ್ರಹವನ್ನು ತಡೆಯಲು ಚರಂಡಿ ವ್ಯವಸ್ಥೆಯನ್ನು ಸುಧಾರಿಸಿ.
  • ಉತ್ತಮ ಗಾಳಿಯ ಸಂಚಾರಕ್ಕಾಗಿ ಸರಿಯಾದ ಅಂತರದೊಂದಿಗೆ (3.1 x 3.1 ಮೀಟರ್) ಮರಗಳನ್ನು ನೆಡಿ.
  • ಗಾಳಿಯಾಡುವುದನ್ನು ಸುಧಾರಿಸಲು ಮತ್ತು ಮೇಲಾವರಣದಲ್ಲಿ ತೇವಾಂಶವನ್ನು ಕಡಿಮೆ ಮಾಡಲು ಮರಗಳ ಸವರುವಿಕೆ ಮಾಡಿ.
  • ರೋಗಕಾರಕಗಳಿಗೆ ಆಶ್ರಯ ನೀಡುವ ಕಳೆಗಳನ್ನು ನಿಯಂತ್ರಿಸಿ.
  • ಸೋಂಕಿತ ಮತ್ತು ಆರೋಗ್ಯಕರ ಪ್ರದೇಶಗಳ ನಡುವೆ ಚಲಿಸುವಾಗ ಉಪಕರಣಗಳು ಮತ್ತು ಬೂಟುಗಳನ್ನು ಸ್ವಚ್ಛಗೊಳಿಸಿ.
  • ಮಾಗಿದ ಕಾಯಿಗಳನ್ನು ನಿಯಮಿತವಾಗಿ ಕೊಯ್ಲು ಮಾಡಿ ಮತ್ತು ಎಲ್ಲಾ ರೋಗಪೀಡಿತ ಬೀಜಗಳನ್ನು ತಕ್ಷಣ ತೆಗೆದುಹಾಕಿ.
  • ಒಣಗಿದ ಕಾಯಿಗಳನ್ನು ಮತ್ತು ಸೋಂಕಿತ ಸಸ್ಯ ಅವಶೇಷಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ