ದ್ರಾಕ್ಷಿ

ಎಲೆಯ ವಕ್ರ ಸುಡುಗಾಯ ( ಆಂಗ್ಯುಲಾರ್ ಲೀಫ್ ಸ್ಕಾರ್ಚ್)

Pseudopezicula tetraspora

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಮಸುಕಾದ ಹಳದಿ ಕಲೆಗಳು ಕಾಣಿಸಿಕೊಂಡು ನಂತರ ಕೆಂಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತವೆ.
  • ನಂತರ ಒಣ ಪ್ರದೇಶಗಳ ಸುತ್ತ ಹಳದಿ ಅಂಚುಗಳು ಬೆಳೆಯುತ್ತವೆ.
  • ಋತುವಿನ ಅಂತ್ಯದಲ್ಲಿ ಸೋಂಕು ತಗುಲಿದರೆ ಸುಕ್ಕುಗಟ್ಟಿದ ಭಾಗಗಳು ಕಾಣಿಸಿಕೊಳ್ಳುತ್ತವೆ ಮತ್ತು ಎಲೆ ಉದುರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಆರಂಭದಲ್ಲಿ, ಗಾಯಗಳು ಎಲೆಗಳ ಮೇಲೆ ಮಸುಕಾದ, ಹಳದಿ ಬಣ್ಣದ ಚುಕ್ಕೆಗಳಾಗಿ ಕಂಡುಬರುತ್ತವೆ ಮತ್ತು ಸೂರ್ಯನ ಬೆಳಕಿಗೆ ಎಲೆಯನ್ನು ಹಿಡಿದು ನೋಡಿದಾಗ ಚೆನ್ನಾಗಿ ಕಂಡುಬರುತ್ತದೆ. ಈ ಸೋಂಕಿತ ಭಾಗಗಳಲ್ಲಿ ದ್ವಿತೀಯ ನಾಳಗಳು ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಕಲೆಗಳು ದೊಡ್ಡದಾದಂತೆ ಅವು ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ಅಥವಾ ಕೆಂಪು ಬಣ್ಣಕ್ಕೆ ತಿರುಗಿ ವಕ್ರವಾಗುತ್ತವೆ. ಏಕೆಂದರೆ, ಇವು ಮುಖ್ಯ ನಾಳಗಳಿಂದ ಬೇರೆಯಾಗಿರುತ್ತವೆ (ಇದರಿಂದ ಈ ರೋಗಕ್ಕೆ ಈ ಹೆಸರು ಬಂದಿದೆ). ಎಲೆಯ ಅಂಗಾಂಶವು ಒಣಗಿದಾಗ ಸಾಮಾನ್ಯವಾಗಿ ಗಾಯಗಳಲ್ಲಿ ಆರೋಗ್ಯಕರ ಮತ್ತು ರೋಗಗ್ರಸ್ತ ಅಂಗಾಂಶಗಳ ನಡುವೆ ಹಳದಿ ಅಂಚು ಬೆಳೆಯುತ್ತದೆ. ಕೆಂಪು ದ್ರಾಕ್ಷಿಯ ಪ್ರಭೇದಗಳಲ್ಲಿ, ಈ ಅಂಚು ಕೆಂಪು ಬಣ್ಣದ್ದಾಗಿರುತ್ತದೆ. ಋತುವಿನಲ್ಲಿ ತಡವಾಗಿ ಆಗುವ ಸೋಂಕುಗಳು ಎಲೆಗಳ ಮೇಲೆ ಚಿಮುಕಿಸಲ್ಪಟ್ಟಿರುವ ಕಲೆಗಳಂತಹ ಬೆಳವಣಿಗೆಯಿಂದ ಗೊತ್ತಾಗುತ್ತದೆ ಮತ್ತು ಎಲೆ ಅಕಾಲಿಕವಾಗಿ ಉದುರುತ್ತವೆ ಮತ್ತು ಸೋಂಕಿತ ಹೂವಿನ ಗೊಂಚಲುಗಳು ಒಣಗಿ ಉದುರುತ್ತವೆ. ಬಾಟ್ರಿಟಿಸ್ ರೋಗಕ್ಕೆ ವ್ಯತಿರಿಕ್ತವಾಗಿ, ಈ ರೋಗವು ಹಣ್ಣಿನ ಕಾಂಡವನ್ನು ಮಾತ್ರ ಪ್ರಭಾವಿಸುತ್ತದೆ, ಅದರ ಉಪಶಾಖೆಗಳನ್ನಲ್ಲ.

Recommendations

ಜೈವಿಕ ನಿಯಂತ್ರಣ

ಈ ರೋಗದ ವಿರುದ್ಧ ಜೈವಿಕ ಚಿಕಿತ್ಸೆಗಳು ಲಭ್ಯವಿಲ್ಲ. ತೀವ್ರವಾಗಿ ಸೋಂಕಿಗೆ ಒಳಗಾದ ಕೊಂಬೆಗಳನ್ನು ಅಥವಾ ಇಡೀ ಸಸ್ಯಗಳನ್ನು ತೆಗೆದುಹಾಕುವುದು ಮತ್ತು ತೋಟದಿಂದ ದೂರದಲ್ಲಿ ಸುಡುವುದು ಅಥವಾ ಹೂತುಹಾಕುವ ಮೂಲಕ ಅವುಗಳನ್ನು ನಾಶ ಮಾಡುವುದು ಭಾರೀ ನಷ್ಟ ತಪ್ಪಿಸುವ ಉತ್ತಮ ಮಾರ್ಗವಾಗಿದೆ. ಉತ್ತಮ ಕಳೆ ಕೀಳುವ ವ್ಯವಸ್ಥೆ ಮತ್ತು ನೈರ್ಮಲ್ಯ ಕಾರ್ಯಕ್ರಮಗಳನ್ನು ಸಹ ಶಿಫಾರಸು ಮಾಡಲಾಗಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ಮಳೆಗಾಲಕ್ಕೆ ಮೊದಲು ಮಾಂಕೋಜೆಬ್ ಇರುವ ಶಿಲೀಂಧ್ರನಾಶಕಗಳನ್ನು ಬಳಸುವ ಮೂಲಕ ರೋಗವನ್ನು ನಿಯಂತ್ರಿಸಬಹುದು. ಆರಂಭಿಕ ಚಿಗುರಿನ ಬೆಳವಣಿಗೆಯ ಸಂದರ್ಭದಲ್ಲೇ ಸಿಂಪಡಣೆ ಮಾಡಬೇಕು ಮತ್ತು ಹಣ್ಣು ಮೂಡುವ ಪೂರ್ಣ ಅವಧಿಯವರೆಗೂ ಈ ರಕ್ಷಣೆ ಒದಗಿಸಬೇಕು. ಮಳೆಯ ವಾತಾವರಣವಿದ್ದರಂತೂ ಇದರ ಅಗತ್ಯ ಇನ್ನೂ ಹೆಚ್ಚು.

ಅದಕ್ಕೆ ಏನು ಕಾರಣ

ಎಲೆ ವಕ್ರ ಸುಡುರೋಗ ಉಂಟುಮಾಡುವ ಶಿಲೀಂಧ್ರವಾದ ಪಿ. ಟೆಟ್ರಾಸ್ಪೋರಾವು ದ್ರಾಕ್ಷಿತೋಟದ ನೆಲದ ಮೇಲೆ ಉಳಿದಿರುವ ಸೋಂಕಿತ ಎಲೆಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ. ಆದ್ದರಿಂದ, ಎಲೆಗಳಿಲ್ಲದ ಕತ್ತರಿಸಿದ ಕಾಂಡಗಳು ಈ ಶಿಲೀಂಧ್ರಗಳ ಹರಡುವಿಕೆಗೆ ಮಾರ್ಗವನ್ನು ಒದಗಿಸುವುದಿಲ್ಲ. ವಸಂತ ಋತುವಿನಲ್ಲಿ, ಆರ್ದ್ರ ವಾತಾವರಣದಲ್ಲಿ, ಶಿಲೀಂಧ್ರಗಳ ಬೀಜಕಗಳು ಈ ಬಿದ್ದ ಎಲೆಗಳಿಂದ ಬಿಡುಗಡೆ ಹೊಂದುತ್ತವೆ ಮತ್ತು ಗಾಳಿ ಮತ್ತು ನೀರಿನ ಹನಿಗಳಿಂದ ಹೊಸ ಎಲೆಗಳು ಮತ್ತು ಹೂವಿನ ಕಾಂಡಗಳಿಗೆ ಹರಡುತ್ತದೆ. ಕೊಳೆತ ಎಲೆಗಳ ಮೇಲೆ ಚಳಿಗಾಲ ಕಳೆಯುತ್ತಿರುವ ಶಿಲೀಂಧ್ರದಿಂದ ವಸಂತ ಕಾಲದಲ್ಲಿ ಕೇವಲ ಒಂದೇ ಒಂದು ಸೋಂಕಿನ ಜೀವನಚಕ್ರ ಕಂಡುಬರುತ್ತದೆ. ಕೆಲವೊಮ್ಮೆ ಹಲವಾರು ದಿನಗಳ ಸತತ ಮಳೆಯ ನಂತರ, ಇನ್ನೂ ಬಳ್ಳಿಗೆ ಅಂಟಿರುವ ಸೋಂಕಿತ ಎಲೆಗಳ ಸತ್ತ ಅಂಗಾಂಶದ ಮೇಲೆ ಬೀಜಕಗಳು ಉತ್ಪಾದನೆಯಾಗಬಹುದು. ತೇವಾಂಶವುಳ್ಳ ಪರಿಸ್ಥಿತಿಗಳು ಮುಂದುವರಿದರೆ ಈ ಬೀಜಕಗಳು ಬೆಳವಣಿಗೆಯ ಸಮಯದಲ್ಲಿ ಋತುವಿನ ಯಾವುದೇ ಅವಧಿಯಲ್ಲಿ ದ್ವಿತೀಯ ಸೋಂಕಿಗೆ ಕಾರಣವಾಗಬಹುದು. ಈ ರೋಗವು ಹಲವು ವರ್ಷಗಳ ಕಾಲ ಕಾಣಿಸಿಕೊಳ್ಳದೆ, ದೀರ್ಘ ಮಳೆಗಾಲದ ಹವಾಮಾನವಿದ್ದ ವರ್ಷದಲ್ಲಿ ತೀವ್ರವಾಗಿ ಹರಡುವುದಕ್ಕೆ ಕಾರಣ ಇದೇ ಆಗಿದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಮಾತ್ರವೇ ನಾಟಿ ಸಸಿಗಳನ್ನು ಪಡೆಯಿರಿ.
  • ಬಳ್ಳಿಗಳ ನಡುವೆ ಸಾಕಷ್ಟು ಜಾಗವಿರುವುದನ್ನು ಖಚಿತಪಡಿಸಿಕೊಳ್ಳಿ.
  • ಸಸ್ಯಗಳ ನಡುವೆ ಗಾಳಿಯ ಪ್ರಸರಣ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಿ.
  • ಉದಾಹರಣೆಗೆ ಸಮರುವಿಕೆಯ ಮೂಲಕ.
  • ರೋಗದ ಲಕ್ಷಣಗಳಿಗಾಗಿ ದ್ರಾಕ್ಷಿತೋಟವನ್ನು ನಿಯಮಿತವಾಗಿ ಪರಿಶೀಲಿಸಿ.
  • ಅತ್ಯುತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
  • ಉದಾಹರಣೆಗೆ ದ್ರಾಕ್ಷಿತೋಟದಿಂದ ಕಳೆ ಮತ್ತು ಸಸ್ಯದ ಉಳಿಕೆಗಳನ್ನು ತೆಗೆಯುವ ಮೂಲಕ.
  • ಒಣಗಿದ ಅಥವಾ ಸೋಂಕಿತ ಬಳ್ಳಿಗಳನ್ನು ದ್ರಾಕ್ಷಿತೋಟದಿಂದ ದೂರದಲ್ಲಿ ಸುಡುವ ಅಥವಾ ಆಳವಾಗಿ ಹೂಳುವ ಮೂಲಕ ನಾಶಮಾಡಿ.
  • ಕೊಯ್ಲು ಮಾಡಿದ ಹಣ್ಣು ಅಥವಾ ಯಂತ್ರಗಳು ಅಥವಾ ಕಸವನ್ನು ದ್ರಾಕ್ಷಿತೋಟಗಳ ನಡುವೆ ಸಾಗಿಸದಂತೆ ಎಚ್ಚರಿಕೆವಹಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ