ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ನ ಎಲೆ ಸುರಂಗ (ಲೀಫ್ ಮೈನರ್)

Phyllocnistis citrella

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆ ವಿರೂಪತೆ- ತಿರುಚಿದ ಅಥವಾ ಸುರುಳಿಯಾಗಿರುವ ಎಲೆಗಳು.
  • ಬಿಳಿ ಅಥವಾ ಬೂದು ಬಣ್ಣದ ಸುರಂಗಗಳು ಎಲೆಗಳ ಮೇಲೆ ಕಂಡುಬರುತ್ತವೆ.
  • ಕುಂಠಿತಗೊಂಡ ಬೆಳವಣಿಗೆ.
  • ಹಣ್ಣಿನ ಗಾತ್ರದಲ್ಲಿ ಕಡಿತ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಬೆಳವಣಿಗೆಯ ಯಾವುದೇ ಹಂತದಲ್ಲೂ ಸೋಂಕು ಉಂಟಾಗಬಹುದು ಮತ್ತು ಹೊಸ ಎಲೆಗಳಲ್ಲಿ ಇವು ಮುಖ್ಯವಾಗಿ ಗೋಚರಿಸುತ್ತವೆ. ಆರಂಭಿಕ ರೋಗಲಕ್ಷಣಗಳೆಂದರೆ ವಿರೂಪಗೊಂಡ, ತಿರುಚಿದ ಅಥವಾ ಸುರುಳಿಯಾಕಾರದ ಎಲೆಗಳು. ಆದರೆ, ಇವು ಹಸಿರು ಬಣ್ಣದಲ್ಲೇ ಉಳಿಯುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ ಎಲೆಯ ಎರಡು ಹೊರಮೈಗಳ ನಡುವೆ ಬಿಳಿಯಾದ ಸರ್ಪದ ಆಕಾರದ ಅಥವಾ ಬೂದು ಸುರಂಗದಂತಹ ಗುರುತುಗಳು ಕಾಣುತ್ತವೆ. ಲಾರ್ವಾದ ವಿಸರ್ಜನೆಗೆ ಅನುಸಾರವಾಗಿ ಒಂದು ತೆಳುವಾದ ಕಪ್ಪು ಗೆರೆ ಅಥವಾ ಚುಕ್ಕೆಗಳಿಂದಾದ ಕಪ್ಪು ರೇಖೆ ಈ ಸುರಂಗಗಳೊಳಗೆ ಗೋಚರಿಸುತ್ತದೆ. ಇದು ಕೆಳಗಿನಿಂದ ಹೆಚ್ಚು ಎದ್ದು ಕಾಣುತ್ತದೆ. ಲಾರ್ವಾಗಳು ಸಾಮಾನ್ಯವಾಗಿ ಈ ಸುರಂಗಗಳ ಕೊನೆಯಲ್ಲಿ ಕಂಡುಬರುತ್ತವೆ ಮತ್ತು ಒಂದು ಎಲೆಯಲ್ಲಿ ಹಲವು ಲಾರ್ವಾಗಳು ಇರಬಹುದು. ಎಲೆಗಳಿಗೆ ಆಗಿರುವ ಹಾನಿಗಳು ಅವಕಾಶವಾದಿ ಶಿಲೀಂಧ್ರಗಳು ಅಥವಾ ಬ್ಯಾಕ್ಟೀರಿಯಾಗಳ ಸೋಂಕಿಗೂ ಮೂಲವಾಗಬಹುದು. ಸೋಂಕು ತೀವ್ರಗೊಂಡಾಗ ದ್ಯುತಿಸಂಶ್ಲೇಷಣೆ ಕ್ರಿಯೆ ಇಳಿಮುಖವಾಗಿ, ಕುಂಠಿತ ಬೆಳವಣಿಗೆ, ಹಣ್ಣಿನ ಗಾತ್ರ ಮತ್ತು ಗುಣಮಟ್ಟದಲ್ಲಿ ಇಳಿಕೆಗೂ ಕಾರಣವಾಗಬಹುದು. ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ, ಸಿಟ್ರಸ್ ಎಲೆ ಸುರಂಗದ ಸೋಂಕು ಇಡೀ ಮರದ ಎಲೆಗಳು ಉದುರಲು ಮತ್ತು ಕೊನೆಗೆ ಹೊಸ ಮರಗಳ ಸಾವಿಗೆ ಕಾರಣವಾಗಬಹುದು.

Recommendations

ಜೈವಿಕ ನಿಯಂತ್ರಣ

ಇವುಗಳ ಪರಭಕ್ಷಕಗಳೆಂದರೆ ನ್ಯೋರೋಪ್ಟೋರಾ ಕುಲದ ಹಸಿರು ಲೇಸ್ವಿಂಗ್ ಕೀಟಗಳು. ಟೆಟ್ರಾಸ್ಟಿಕಸ್ ಪ್ರಭೇದಗಳು ಸೇರಿದಂತೆ ಹಲವು ರೀತಿಯ ಪರಾವಲಂಬಿ ಕಣಜಗಳು ಸಿಟ್ರಸ್ ಎಲೆ ಸುರಂಗದ ಲಾರ್ವಾಗಳ ಮೇಲೆ ಆಕ್ರಮಣ ಮಾಡಿ ಅವುಗಳನ್ನು ತಿನ್ನುತ್ತದೆ. ಸಿಟ್ರಸ್ ಎಲೆ ಸುರಂಗದ ಭಾದೆಯನ್ನು ನಿಯಂತ್ರಿಸಲು ಸ್ಪಿನೊಸ್ಯಾಡ್, ಮೀನೆಣ್ಣೆ ರಾಳ ಸಾಬೂನು ಮತ್ತು ಪೊಂಗಮಿಯ ತೈಲವನ್ನು ಹೊಂದಿರುವ ಜೈವಿಕ ಕೀಟನಾಶಕಗಳನ್ನು ಎಲೆಗಳ ಮೇಲೆ ಸಿಂಪಡಿಸಬಹುದು. ಪತಂಗಗಳು ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುವುದನ್ನು ತಡೆಯಲು ಬೇವಿನ ತೈಲವನ್ನು ಸಿಂಪಡಿಸಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆ ಮತ್ತು ತಡೆಗಟ್ಟುವ ಕ್ರಮಗಳನ್ನು ಹೊಂದಿರುವ ಸಮಗ್ರ ವಿಧಾನ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಕೀಟನಾಶಕಗಳು ಸಿಟ್ರಸ್ ಎಲೆ ಸುರಂಗ ಸೋಂಕಿನ ನಿವಾರಣೆಯಲ್ಲಿ ಸಂಪೂರ್ಣವಾಗಿ ಪರಿಣಾಮಕಾರಿಯಾಗುವುದಿಲ್ಲ ಏಕೆಂದರೆ ಲಾರ್ವಾಗಳು ಎಲೆಯ ಹೊರಪೊರೆಯಿಂದ ರಕ್ಷಿಸಲ್ಪಟ್ಟಿರುತ್ತವೆ. ಕೀಟನಾಶಕಗಳ ಅಗತ್ಯವಿದ್ದರೆ, ಪ್ರೌಢ ಕೀಟಗಳು ಸಕ್ರಿಯವಾಗಿದ್ದಾಗ ವ್ಯವಸ್ಥಿತ ಮತ್ತು ಸಂಪರ್ಕ ಉತ್ಪನ್ನಗಳನ್ನು ಸಿಂಪಡಿಸಬೇಕು. ಸಿಂಪಡಣೆಗಳಾಗಿ ಅನೇಕ ಉತ್ಪನ್ನಗಳು ಲಭ್ಯವಿದೆ. ಅಬಮೆಕ್ಟಿನ್, ಟೆಬುಫೆನೋಜೈಡ್, ಅಸೆಟಾಮಿಪ್ರಿಡ್, ಡಿಫ್ಲುಬೆನ್ಝುರಾನ್ ಅಥವಾ ಸ್ಪಿನೆಟೊರಾಮ್ ಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಸಬಹುದು. ಸಂಶ್ಲೇಷಿತ ಪೈರೆಥ್ರಾಯ್ಡ್ ಕುಟುಂಬದ ಕೀಟನಾಶಕಗಳನ್ನು ಈ ಕೀಟದ ವಿರುದ್ಧ ಬಳಸಲಾಗುತ್ತದೆ.

ಅದಕ್ಕೆ ಏನು ಕಾರಣ

ಸಿಟ್ರಸ್ ಎಲೆ ಸುರಂಗ ಕೀಟ - ಫಿಲೋಕ್ನಿಸ್ಟಿಸ್ ಸಿಟ್ರೆಲ್ಲಾದ ಲಾರ್ವಾಗಳ ಆಹಾರ ಚಟುವಟಿಕೆಗಳಿಂದಾಗಿ ಈ ರೋಗಲಕ್ಷಣಗಳು ಉಂಟಾಗುತ್ತವೆ. ಪ್ರೌಢ ಕೀಟಗಳು ಸಣ್ಣ, ಕಂದು ಅಥವಾ ಬೂದು ಬಣ್ಣದ, ಭಾರಿ ಅಂಚುಗಳಿರುವ ರೆಕ್ಕೆಯನ್ನು ಹೊಂದಿರುವ ಮತ್ತು ಮುಂಭಾಗದ ರೆಕ್ಕೆಗಳ ಮೇಲೆ ವಿಶಿಷ್ಟ ಕಪ್ಪು ಚುಕ್ಕೆ ಇರುವ ಪತಂಗಗಳು. ಮುಂಜಾನೆ ಮತ್ತು ರಾತ್ರಿಯ ತಂಪಾದ ಹವಾಮಾನದಲ್ಲಿ ಇವು ಹೆಚ್ಚಾಗಿ ಸಕ್ರಿಯವಾಗಿರುತ್ತವೆ. ವಸಂತಕಾಲದಲ್ಲಿ, ಹೆಣ್ಣುಗಳು ಎಲೆಗಳ ಕೆಳಭಾಗದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ಹೊರಬರುವ ಲಾರ್ವಾಗಳು ಅರೆಪಾರದರ್ಶಕವಾದ ಹಸಿರು ಅಥವಾ ಹಳದಿ ಬಣ್ಣದಲ್ಲಿರುತ್ತವೆ ಮತ್ತು ಮುಖ್ಯವಾಗಿ ಎಲೆಗಳನ್ನು ತಿನ್ನುತ್ತವೆ. ಕೆಲವೊಮ್ಮೆ ಹಣ್ಣುಗಳನ್ನು ಸಹ ಆಕ್ರಮಿಸಬಹುದು. ಇವು ಎಲೆಗಳ ಎರಡು ಹೊರಮೈ ನಡುವೆ ಸುರಂಗಗಳನ್ನು ಕೊರೆಯುತ್ತವೆ. ಇದರಿಂದಾಗಿ ವಿಶಿಷ್ಟವಾದ ಬೆಳ್ಳಿ ಬಣ್ಣ, ಸರ್ಪಾಕಾರದ ಸುರಂಗಗಳು ಕಂಡುಬರುತ್ತವೆ. ಲಾರ್ವಾ ಹಂತದ ಕೊನೆಯಲ್ಲಿ, ಎಲೆ ಸುರಂಗಗಳು ಸುರಂಗಗಳಿಂದ ಹೊರಬಂದು, ಎಲೆಗಳನ್ನು ತಮ್ಮ ಸುತ್ತ ಸುತ್ತಿಕೊಳ್ಳುವ ಮೂಲಕ ಕೋಶವಾಸ್ಥೆಯನ್ನು ಪ್ರವೇಶಿಸುತ್ತವೆ. ಇದು ಕಿತ್ತಳೆಯ ಪ್ರಮುಖ ಕೀಟವಾಗಿದ್ದು, ಕಿತ್ತಳೆ ಉತ್ಪಾದಿಸುವ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದಲ್ಲದೆ, ಬ್ಯಾಕ್ಟೀರಿಯಾ ಕ್ಯಾಂಕರ್ ನಂತಹ ಇತರ ರೋಗಗಳಿಗೆ ಸಸ್ಯ ಒಳಗಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಿಟ್ರಸ್ ಎಲೆ ಸುರಂಗಕ್ಕೆ ಸ್ವಲ್ಪ ಮಟ್ಟಿಗಾದರೂ ನಿರೋಧಕವಾಗಿರುವ ಸಸ್ಯ ಪ್ರಭೇದವನ್ನು ಆಯ್ಕೆ ಮಾಡಿ.
  • ಗಿಡಗಳ ನಡುವಿನ ನೆಲದ ಕವಚವಾಗಿ ಊರಳ ಗಿಡವನ್ನು (ಅಗೆರಾಟಮ್ ಕೋನಿಜೈಡ್ಸ್) ಬೆಳೆಸಿ.
  • ಕಾಯಿಲೆಯ ಚಿಹ್ನೆಗಳಿಗಾಗಿ ನಿಯಮಿತವಾಗಿ ತೋಟವನ್ನು, ಮುಖ್ಯವಾಗಿ ಎಲೆಗಳ ಕೆಳಭಾಗವನ್ನು ಪರಿಶೀಲಿಸುತ್ತಿರಿ.
  • ಕೀಟಗಳ ಅಡಗುತಾಣಗಳನ್ನು ಕಡಿಮೆ ಮಾಡಲು ಚಳಿಗಾಲದಲ್ಲಿ ಬಿದ್ದ ಎಲೆಗಳನ್ನು ಸಂಗ್ರಹಿಸಿ ನಾಶಮಾಡಿ.
  • ಪತಂಗಗಳನ್ನು ಆಕರ್ಷಿಸಲು ಫೆರೋಮೋನ್ ಬಲೆಗಳನ್ನು ಬಳಸಿ, ಆ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಿಸಿ.
  • ಸೋಂಕು ಅತ್ಯಂತ ಹೆಚ್ಚಾಗಿದ್ದಾಗ ಹೊಸ ಬೆಳವಣಿಗೆಗಳನ್ನು ತಪ್ಪಿಸಲು ಮರಗಳನ್ನು ನಿಯಮಿತವಾಗಿ ಕತ್ತರಿಸಿ.
  • ಅದೇ ರೀತಿ ಹೀರುಬೇರುಗಳನ್ನು ಕತ್ತರಿಸಿ.
  • ಪ್ರಯೋಜನಕಾರಿ ಕೀಟಗಳಿಗೆ ಹಾನಿಮಾಡುವ ಕೀಟನಾಶಕಗಳ ಅತಿಯಾದ ಬಳಕೆಯನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ