ಉದ್ದಿನ ಬೇಳೆ & ಹೆಸರು ಬೇಳೆ

ನೀಲಿ ಚಿಟ್ಟೆ ರೋಗ

Lampides boeticus

ಕೀಟ

5 mins to read

ಸಂಕ್ಷಿಪ್ತವಾಗಿ

  • ಲಾರ್ವಾ ಕೊರೆದ ತೂತುಗಳು ಹೂವಿನ ಮೊಗ್ಗು, ಹೂಗಳು ಮತ್ತು ಹಸಿರು ಬೀಜಕೋಶಗಳಲ್ಲಿ ಕಾಣಿಸಿಕೊಳ್ಳುತ್ತವೆ.
  • ಲಾರ್ವಾಗಳು ಬೀಜಕೋಶದ ಒಳಗಿನ ತಿರುಳನ್ನು ತಿನ್ನುತ್ತವೆ.
  • ಇದರಿಂದ ಈ ಸೋಂಕಿಗೆ ವಿಶಿಷ್ಟ ಲಕ್ಷಣವಾಗಿ ಬೀಜಕೋಶದ ಒಂದು ತುದಿಯಲ್ಲಿ ವೃತ್ತಾಕಾರದ ತೂತುಗಳು ಕಾಣಿಸಿಕೊಳ್ಳುತ್ತವೆ.
  • ಈ ತೂತಿನ ಬಾಯಿಯ ಸಿಹಿ ಅಂಟು ಒಸರಿರುವುದನ್ನು ಹಾಗೂ ಪಕ್ಕದಲ್ಲೇ ಇರುವೆಗಳನ್ನು ಕಾಣಬಹುದು.
  • ತಡೆಯದಿದ್ದರೆ, ಸೋಂಕಿನಿಂದಾಗಿ ಇಳುವರಿಯಲ್ಲಿ ಭಾರಿ ನಷ್ಟವಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು


ಉದ್ದಿನ ಬೇಳೆ & ಹೆಸರು ಬೇಳೆ

ರೋಗಲಕ್ಷಣಗಳು

ಹೆಚ್ಚಿನ ಹಾನಿಯು ಲಾರ್ವಾ ಹಂತದಲ್ಲಿ ಆಗುತ್ತದೆ. ಲಾರ್ವಾ ಗಿಡದ ತಿರುಳನ್ನು ಮತ್ತು ಬೀಜಕೋಶಗಳ ಒಳಗಿರುವ ಬೀಜಗಳನ್ನು ತಿನ್ನುತ್ತದೆ. ಲಾರ್ವಾ ಹೊರ ಬಂದ ನಂತರ ಶೀಘ್ರದಲ್ಲೇ ಹೂವಿನ ಮೊಗ್ಗು, ಹೂಗಳು ಮತ್ತು ಹಸಿರು ಬೀಜಕೋಶಗಳಲ್ಲಿ ಕೊರೆದ ತೂತುಗಳು ಆರಂಭಿಕ ಲಕ್ಷಣಗಳಾಗಿ ಗೋಚರಿಸುತ್ತವೆ. ಬೀಜಕೋಶಗಳಲ್ಲಿನ ಹಾನಿ ಸಣ್ಣದಾದ ವೃತ್ತಾಕಾರದ ತೂತುಗಳಿಂದಾಗಿ ಮತ್ತು ತೂತಿನ ಬಾಯಿಯಲ್ಲಿ ಶೇಖರವಾಗಿರುವ ಹಿಕ್ಕೆಯಿಂದಾಗಿ ವಿಶಿಷ್ಟವಾಗಿರುತ್ತದೆ, ಸಾಮಾನ್ಯವಾಗಿ ಬೀಜಕೋಶದ ಒಂದು ತುದಿಯ ಹತ್ತಿರದಲ್ಲಿರುತ್ತದೆ. ಇದರ ಬಳಿಯಲ್ಲಿ ಸಿಹಿ ಅಂಟು ಒಸರಿರುವುದನ್ನು ಮತ್ತು ಈ ರಸದ ಸುತ್ತಲೂ ಕಪ್ಪು ಇರುವೆಗಳು ಓಡಾಡಿಕೊಂಡಿರುವುದನ್ನು ಸಹ ಗಮನಿಸಬಹುದು. ಬೀಜಕೋಶವು ಬಣ್ಣಗೆಟ್ಟು ಕಪ್ಪು ಬಣ್ಣಕ್ಕೆ ತಿರುಗಿರುವುದು ಬೀಜಕೋಶದ ಕೊಳೆತವನ್ನು ಸೂಚಿಸುತ್ತದೆ. ಲಾರ್ವಾಗಳು ನೇರವಾಗಿ ಬೀಜಕೋಶಗಳನ್ನು ಆಕ್ರಮಿಸುವ ಕಾರಣ, ಸೋಂಕಿನಿಂದ ಇಳುವರಿಯಲ್ಲಿ ಭಾರಿ ನಷ್ಟವಾಗಬಹುದು.

Recommendations

ಜೈವಿಕ ನಿಯಂತ್ರಣ

ಹೊಲದಲ್ಲಿ ನೈಸರ್ಗಿಕ ಶತ್ರುಗಳನ್ನು ತಂದು ಬಿಡುವುದರ ಮೂಲಕ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಟ್ರೈಕೊಗ್ರಾಮ ಚಿಲೋಟ್ರೇಯೆ, ಟ್ರೈಕೊಗ್ರಾಮಟೈಡಿಯ ಬ್ಯಾಕ್ಟ್ರಾ, ಕೋಟೆಸಿಯ ಸ್ಪೆಕ್ಯೂಲಾರಿಸ್, ಹೈಪರೆನ್ಸೈರ್ಟಸ್ ಲುಕೋಯೆಫಿಲಾ ಮತ್ತು ಲಿಟ್ರೋಡ್ರೊಮಸ್ ಕ್ರ್ಯಾಸ್ಸೈಪ್ಸ್ ಮುಂತಾದ ಮೊಟ್ಟೆ ಮತ್ತು ಲಾರ್ವಾಗಳ ಪರಾವಲಂಬಿಗಳು ಉತ್ತಮ ಪರಿಣಾಮ ಬೀರಬಹುದು. ಪೆಸಿಲೊಮೈಸಸ್ ಲಿಲಾಸಿನಸ್ ಮತ್ತು ವೆಟ್ರಿಸಿಲಿಯಂ ಲೆಕಾನಿಗಳನ್ನು ಹೊಂದಿರುವ ಸಾವಯವ ಕೀಟನಾಶಕಗಳನ್ನು ಸೋಂಕಿನ ನಿಯಂತ್ರಣಕ್ಕೆ ಎಲೆಗಳ ಮೇಲೆ ಬಳಸಬಹುದು. ಲಾರ್ವಾಗಳ ನಿಯಂತ್ರಣಕ್ಕಾಗಿ NSKE 5% ಅನ್ನು ಎರಡು ಬಾರಿ ತದನಂತರ ಬೇವಿನ ಎಣ್ಣೆ 2% ಅನ್ನು ಸಿಂಪಡಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ನೈಸರ್ಗಿಕ ಶತ್ರುಗಳ ಸಂಖ್ಯೆಯನ್ನು ರಕ್ಷಿಸಿದರೆ ರಾಸಾಯನಿಕ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಕೀಟನಾಶಕಗಳ ಅಗತ್ಯವಿದ್ದರೆ, ಲ್ಯಾಂಬಾ-ಸೈಹಲೋಥ್ರಿನ್, ಡೆಲ್ಟಾಮೆಥ್ರೈನ್ ಹೊಂದಿರುವ ಉತ್ಪನ್ನಗಳನ್ನು ಸಿಂಪಡಿಸಬಹುದು ಮತ್ತು ಅಲಸಂದೆ ಮತ್ತು ಹೆಸರು ಕಾಳುಗಳಲ್ಲಿ 80 ಮತ್ತು 90% ರಷ್ಟು ಮಟ್ಟದಷ್ಟು ನಿಯಂತ್ರಣವನ್ನು ಪಡೆಯಬಹುದು. ಇತರ ಸಕ್ರಿಯ ಅಂಶಗಳೆಂದರೆ ಎಮೆಟಿಕ್ಟಿನ್ 5%SG (220 ಗ್ರಾಂ/ಹೆ) ಮತ್ತು ಇಂಡೊಡಾಕಾರ್ಬ್ 15.8%SC (333 ಮಿಲೀ/ಹೆ). ಬಟಾಣಿ ನೀಲಿ ಚಿಟ್ಟೆಯು ಈ ರಾಸಾಯನಿಕಗಳಿಗೆ ಪ್ರತಿರೋಧವನ್ನು ಬೆಳೆಸಿಕೊಳ್ಳಬಹುದು ಎಂಬುದನ್ನು ನೆನಪಿನಲ್ಲಿಡಿ.

ಅದಕ್ಕೆ ಏನು ಕಾರಣ

ಗಿಡಗಳ ಮೇಲಿನ ಹಾನಿ ಮುಖ್ಯವಾಗಿ ಲ್ಯಾಂಪೈಡಸ್ ಬೇಟಿಕಸ್ಸಿನ ಲಾರ್ವಾಗಳಿಂದ ಉಂಟಾಗುತ್ತದೆ. ಪ್ರೌಢ ಕೀಟದ ಬಣ್ಣವು ಹೊಳಪು ನೀಲಿಯಿಂದ ಹಿಡಿದು ಕಡು ನೀಲಿ ಬಣ್ಣದ್ದಾಗಿರುತ್ತದೆ. ಉದ್ದನೆಯ ನೀಲಿ ಮಿಶ್ರಿತ ಬೂದು ಬಣ್ಣದ ದೇಹದಲ್ಲಿ ನೀಲಿ ಕೂದಲುಗಳಿರುತ್ತವೆ. ಹಿಂದಿನ ರೆಕ್ಕೆಗಳ ಕೆಳಭಾಗದಲ್ಲಿ ಕಪ್ಪು ಕಲೆಗಳು ಗೋಚರಿಸುವುದಲ್ಲದೆ ಉದ್ದನೆಯ ಉಪಾಂಗವೊಂದಿರುತ್ತದೆ. ಕೆಳಭಾಗವು, ಸಾಮಾನ್ಯವಾಗಿ ರೆಕ್ಕೆಗಳ ತುದಿಯಲ್ಲಿರುವ ಅನೇಕ ಅನಿಯಮಿತ ಬಿಳಿ ಮತ್ತು ಕಂದು ಪಟ್ಟೆಗಳು ಮತ್ತು ಕಂದು ಬಣ್ಣದ ಚುಕ್ಕೆಗಳಿಂದ ವಿಶಿಷ್ಟವಾಗಿರುತ್ತದೆ. ಹೆಣ್ಣು ಕೀಟವು ದುಂಡಗಿನ, ಮಂಕು ನೀಲಿ ಅಥವಾ ಬಿಳಿಯ ಬಣ್ಣದ ಒಂಟಿ ಮೊಟ್ಟೆಗಳನ್ನು ಮೊಗ್ಗು, ಹೂವು, ಎಳೆಯ ಬೀಜಕೋಶ ಹಾಗೂ ಬೆಳೆಯುತ್ತಿರುವ ರೆಂಬೆಗಳ ಮೇಲೆ ಮತ್ತು ಎಲೆಗಳ ಮೇಲೆ ಇಡುತ್ತದೆ. ಮರಿಗಳು ಬಣ್ಣದಲ್ಲಿ ಹಸಿರು ಬಣ್ಣದಿಂದ ಹಿಡಿದು ಕಂದು ಬಣ್ಣದಲ್ಲಿರುತ್ತವೆ, ಸ್ವಲ್ಪ ದುಂಡಗಿದ್ದು ಬಸವನಹುಳುಗಳಂತೆ ಕಾಣುತ್ತವೆ. ತಾಪಮಾನವನ್ನು ಅವಲಂಬಿಸಿ ಲಾರ್ವಾ ಹಂತವು ಎರಡರಿಂದ ನಾಲ್ಕು ವಾರಗಳವರೆಗೆ ಇರುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ನೆಡಿ.
  • ಬಿತ್ತನೆ ಸಮಯಕ್ಕಿಂತ ಮೊದಲೇ ಅಥವಾ ತಡವಾಗಿ ಬಿತ್ತನೆ ಮಾಡುವುದನ್ನು ತಪ್ಪಿಸಿ, ಏಕೆಂದರೆ ಅದು ಕೀಟಕ್ಕೆ ಅನುಕೂಲಕರವಾಗಿರುತ್ತದೆ.
  • ಗಿಡಗಳ ನಡುವೆ ಸಾಕಷ್ಟು ಅಂತರವನ್ನು ಇರಿಸಿ.
  • ಕೀಟದ ಕುರುಹಿಗಾಗಿ ಗಿಡಗಳನ್ನು ಅಥವಾ ಹೊಲವನ್ನು ಮೇಲ್ವಿಚಾರಣೆ ಮಾಡಿ.
  • ಸಸಿ ಮಡಿಗಳಲ್ಲಿ ಅಥವಾ ಹೊಲದಲ್ಲಿ ಕಂಡುಬರುವ ಲಾರ್ವಾಗಳನ್ನು ಹೆಕ್ಕಿ ತೆಗೆದು ನಾಶಮಾಡಿ.
  • ಲಾರ್ವಾ ಮತ್ತು ಪ್ಯೂಪಾವನ್ನು ಹೊರಗಿನ ವಾತಾವರಣಕ್ಕೆ ಒಡ್ಡಲು ನಿಯಮಿತವಾಗಿ ಮಣ್ಣನ್ನು ಅಗೆಯಿರಿ.
  • ಕೀಟದ ನೈಸರ್ಗಿಕ ಶತ್ರುಗಳನ್ನು ನಾಶಮಾಡದಂತೆ; ಕೀಟನಾಶಕವನ್ನು ವಿವೇಚನೆಯಿಂದ ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ