ಮಾವು

ಮಾವಿನಹಣ್ಣು ನುಸಿ

Ceratitis cosyra

ಕೀಟ

5 mins to read

ಸಂಕ್ಷಿಪ್ತವಾಗಿ

  • ಸಿಪ್ಪೆಯ ಮೇಲೆ ಕಂದು ಗಾಯಗಳು.
  • ಹಣ್ಣು ಬಣ್ಣಗೆಡುವುದು.
  • ಹಣ್ಣಿನ ರಸ ಮತ್ತು ಅಂಟಂಟಾದ ಸ್ರವಿಕೆ.
  • ಕೀಟಗಳು ಹೊರಹೋದ ರಂಧ್ರಗಳು ಗೋಚರಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಸೆರಾಟೈಟಿಸ್ ಕೊಸೈರಾದ ಸೋಂಕಿನ ಲಕ್ಷಣಗಳು ಹಣ್ಣುಗಳಲ್ಲಿ ಮಾತ್ರವೇ ಕಾಣಿಸುತ್ತದೆ. ಹೆಣ್ಣು ಕೀಟವು ತನ್ನ ಮೊಟ್ಟೆಗಳನ್ನು ಹೆಚ್ಚಾಗಿ ಮಾಗಿದ ಹಣ್ಣುಗಳೊಳಕ್ಕೆ ಸೇರಿಸುತ್ತದೆ. ಸೋಂಕಿತ ಹಣ್ಣುಗಳ ಒಳಗಿನ ಭಾಗವನ್ನು ಲಾರ್ವಾಗಳು ತಿನ್ನುವುದರಿಂದ ಹಾಗೂ ಅವುಗಳ ಜೀರ್ಣ ಪ್ರಕ್ರಿಯೆಯಿಂದಾಗಿ ಹಣ್ಣುಗಳು ಅಂಟಂಟಾಗಿ ತೋರುತ್ತವೆ. ಲಾರ್ವಾಗಳು ಹೊರ ಬಂದ ತೂತು ಹಣ್ಣಿನ ಮೇಲ್ಮೈಯಲ್ಲಿ ಕಾಣುತ್ತದೆ. ಹಣ್ಣಿನೊಳಗಿನ ಕೊಳೆತದಿಂದಾಗಿ ಕಂದು ಬಣ್ಣದ ಹಾಗೂ ಕೆಲವೊಮ್ಮೆ ಕಪ್ಪು ಬಣ್ಣದ ಗಾಯಗಳು ಹಣ್ಣಿನ ಮೇಲ್ಮೈಯಲ್ಲಿ ಕಾಣಿಸುತ್ತದೆ. ಸಿಪ್ಪೆಯ ಮೇಲೂ ಕುಳಿಗಳಿರಬಹುದು ಅಥವಾ ಗಾಯದ ಮೇಲೆ ಒರಟು ಪದರ ಬೆಳೆಯಬಹುದು. ಹಣ್ಣುಗಳು ಬಣ್ಣಗೆಡಬಹುದು ಹಾಗೂ ಕೊಳೆಯುತ್ತಾ ಅವುಗಳ ಮೇಲೆ ಬೂಷ್ಟಿನ ಕಲೆಗಳು ಮೂಡಬಹುದು. ತರುವಾಯ, ಹಣ್ಣುಗಳು ದುರ್ವಾಸನೆ ಬೀರಬಹುದು ಹಾಗೂ ಶಿಲೀಂಧ್ರ ಮತ್ತು ಹಣ್ಣಿನ ರಸದ ಮಿಶ್ರಣವು ಒಸರಬಹುದು.

Recommendations

ಜೈವಿಕ ನಿಯಂತ್ರಣ

ಪ್ರೋಟೀನ್ ಅನ್ನು ಆಮಿಷ ಆಹಾರವಾಗಿ (Bait) ಹೊಂದಿರುವ ಬಲೆಗಳು ಸೆರಾಟೈಟಿಸ್ ಕೊಸೈರಾ ಕೀಟದ ಸಂಖ್ಯೆಯ ಮೇಲ್ವಿಚಾರಣೆ ಮಾಡುವುದಕ್ಕೆ ಮತ್ತು ಹಿಡಿದು ಹಾಕುವುದಕ್ಕೆ ಪರಿಣಾಮಕಾರಿ. ಶಿಲೀಂಧ್ರ ಮೆಟಾಹಾರ್ಜಿಯಾಮ್ ಅನಿಸೊಪ್ಲಿಯಾವು ನೆಲದ ಮೇಲಿರುವ ಕೀಟದ ಪ್ಯೂಪಾದ ಸತ್ವ ಹೀರಿ ಬದುಕುತ್ತದೆ. ಇದನ್ನು ತೈಲ ಮಿಶ್ರಿತ ಸಿಂಪಡಣೆಯಾಗಿ ಅಥವಾ ಬರಿಗೈಯಿಂದಲೇ ಹರಡಬಹುದು. ಕುಯ್ದ ಹಣ್ಣುಗಳನ್ನು 46 ಡಿಗ್ರಿಗಿಂತ ಅಧಿಕ ತಾಪವಿರುವ ಬಿಸಿನೀರಿನಿಂದ ಸಂಸ್ಕರಿಸುವುದರಿಂದ ಅಥವಾ 7.5 ಡಿಗ್ರಿ ಅಥವಾ ಅದಕ್ಕಿಂತ ಕಡಿಮೆ ತಾಪದಲ್ಲಿ ದೀರ್ಘಾವಧಿ ಶೇಖರಿಸುವುದರಿಂದ ಲಾರ್ವಾವನ್ನು ನಾಶ ಮಾಡಬಹುದು.

ರಾಸಾಯನಿಕ ನಿಯಂತ್ರಣ

ನಿರ್ದಿಷ್ಟ ಆಮಿಷ ಆಹಾರ/Bait (ಪ್ರೋಟೀನ್ ಹೈಡ್ರೊಲೈಸೇಟ್ ಅಥವಾ ಪ್ರೊಟೀನ್ ಆಟೊಲೈಸೇಟ್) ಜೊತೆಯಲ್ಲಿ ಕೀಟನಾಶಕಗಳನ್ನು (ಉದಾ: ಮ್ಯಾಲಾಥಿಯಾನ್ ಅಥವಾ ಡೆಲ್ಟಮೆಥ್ರಿನ್) ಉಪಯೋಗಿಸಿ ನುಸಿಯನ್ನು ಹಿಡಿದುಹಾಕಲು ಸೂಚಿಸಲಾಗುತ್ತದೆ. ಈ ವಿಧಾನವು ಸಕಾಲದಲ್ಲಿ ಎಲ್ಲ ನುಸಿಗಳ ಎದುರೂ ಕೆಲಸ ಮಾಡುತ್ತದೆ ಹಾಗೂ ಸುತ್ತಲಿನ ಎಲ್ಲ ರೀತಿಯ ಕೀಟಗಳನ್ನೂ ಆಕರ್ಷಿಸುತ್ತದೆ . ಸೆರಾಟೈಟಿಸ್ ಕೊಸೈರಾದ ಗಂಡು ಕೀಟವನ್ನು ಟೆರ್ಪಿನೋಲ್ ಆಸಿಟೇಟ್ ಅಥವಾ ಮೀಥೈಲ್ ಯುಜೆನಾಲನ್ನು ಬಳಸಿ ಆಕರ್ಷಿಸಿ ಹಿಡಿದು ಹಾಕಬಹುದು.

ಅದಕ್ಕೆ ಏನು ಕಾರಣ

ಸೆರಾಟೈಟಿಸ್ ಕೊಸೈರಾದ ಲಾರ್ವಾಗಳಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಪ್ರೌಢ ಕೀಟವು ಹಳದಿ ಬಣ್ಣದ ದೇಹವನ್ನು ಹೊಂದಿದ್ದು, ದೇಹದ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ಚುಕ್ಕೆಗಳು ಹರಡಿರುತ್ತವೆ. ಅವುಗಳ ರೆಕ್ಕೆಗಳು ಹಳದಿ ಬಣ್ಣದಲ್ಲಿದ್ದು, 4-6 ಮಿಮೀ ಅಗಲವನ್ನು ತಲುಪಬಹುದು. ಹೆಣ್ಣು ಕೀಟವು ಮಾಗಿದ ಹಣ್ಣಿನೊಳಗೆ ಮೊಟ್ಟೆಗಳನ್ನು ಸೇರಿಸುತ್ತದೆ, ಹಾಗೂ ಎರಡು ವಾರಗಳವರೆಗೆ ಮೊಟ್ಟೆಯಿಡುವುದನ್ನು ಮುಂದುವರೆಸುತ್ತದೆ. 2-3 ದಿನಗಳ ನಂತರ, ಲಾರ್ವಾ ಹೊರಬರುತ್ತದೆ ಹಾಗೂ ಮಾವಿನ ತಿರುಳನ್ನು ಕೊರೆಯುತ್ತದೆ. ಪ್ರತಿ ಹಣ್ಣಿನಲ್ಲಿ ಸುಮಾರು 50 ಲಾರ್ವಾಗಳವರೆಗೆ ಮುತ್ತಿಕೊಂಡಿರಬಹುದು ಹಾಗೂ ಕೆಲವೊಮ್ಮೆ ಕುಯ್ದ ಬಳಿಕವಷ್ಟೇ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಲಾರ್ವಾಗಳು ಹಣ್ಣಿನಿಂದ ನೆಲಕ್ಕೆ ಉದುರಿ ಅಲ್ಲಿ ನೆಲದ ಮೇಲ್ಪದರದಲ್ಲಿ ಪ್ಯೂಪಾ ಹಂತಕ್ಕೆ ಬೆಳೆಯುತ್ತವೆ. 9 ರಿಂದ 12 ದಿನಗಳ ನಂತರ ಪ್ರೌಢ ನುಸಿಗಳು ಹೊರ ಬರುತ್ತವೆ.


ಮುಂಜಾಗ್ರತಾ ಕ್ರಮಗಳು

  • ನುಸಿಯ ಸಂಖ್ಯೆ ಕಡಿಮೆಯಿರುವಾಗಲೇ ಹಣ್ಣುಗಳು ಮಾಗುವಂತೆ ಖಚಿತಪಡಿಸಿಕೊಳ್ಳಲು ಬೇಗನೆ ಮಾಗುವ ಪ್ರಭೇದಗಳನ್ನು ನೆಡಿ.
  • ಪ್ರತಿ ದಿನ ಸೋಂಕಿತ ಹಣ್ಣುಗಳನ್ನು ಅಥವಾ ಉದುರಿದ ಹಣ್ಣುಗಳನ್ನು ಆರಿಸಿ ತೆಗೆದುಹಾಕಿ.
  • ಸಂಭಾವ್ಯ ದಾಳಿಯ ಮೇಲ್ವಿಚಾರಣೆ ಮಾಡಲು ಪ್ರೊಟೀನನ್ನು ಆಮಿಷ ಆಹಾರವಾಗಿ (Bait) ಬಳಸಿ ಬಲೆಗಳನ್ನು ಉಪಯೋಗಿಸಿ.
  • ಹೊಲದ ಬಳಿ ಸಿಟ್ರಸ್ ಹಣ್ಣುಗಳು, ಸೀಬೆಹಣ್ಣು, ಪಪಾಯಿ, ಕಲ್ಲಂಗಡಿ ಮುಂತಾದ ಪರ್ಯಾಯ ಆಶ್ರಯದಾತ ಗಿಡಗಳನ್ನು ಬೆಳೆಯಬೇಡಿ.
  • ಕಳೆ ತೆಗೆಯುವಾಗ ಹಾಗೂ ಉಳುವಾಗ ಎಚ್ಚರಿಕೆಯಿಂದ ಮರದ ಸುತ್ತಲಿರುವ ಉಳಿಕೆಗಳ ಕೆಳಗಿರಬಹುದಾದ ಉದುರಿದ ಹಣ್ಣುಗಳನ್ನು ಹುಡುಕಿ ತೆಗೆಯಿರಿ.
  • ಒಂದೇ ರೀತಿಯ ಬೆಳವಣಿಗೆಯ ಚಕ್ರಗಳಿರುವ ಮಾವಿನ ಪ್ರಭೇದಗಳನ್ನು ಬೆಳೆಸಿ.
  • ಸೋಂಕು ತಗುಲದ ಹಣ್ಣುಗಳನ್ನು ಮಾತ್ರವೇ ಮಾರಿ.
  • ಸೋಂಕಿತ ಹಣ್ಣುಗಳನ್ನು ತಕ್ಷಣವೇ ಬಳಸಿ ಅಥವಾ ನಾಶ ಮಾಡಿ.
  • ಮರಗಳ ಸುತ್ತ ಉಳುವುದರಿಂದ ನೆಲದಲ್ಲಿ ಬೆಳೆಯುವ ಪ್ಯೂಪಾವನ್ನು ಕೊಲ್ಲಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ