ಇತರೆ

ಎರ್ಮೈನ್ ಪತಂಗ

Yponomeutidae

ಕೀಟ

5 mins to read

ಸಂಕ್ಷಿಪ್ತವಾಗಿ

  • ಕೊಂಬೆಗಳ ತುದಿಯಲ್ಲಿನ ಎಲೆಗಳು ಉದುರುತ್ತವೆ.
  • ಎಲೆಗಳು ಒಂದಕ್ಕೊಂದು ಅಂಟಿಕೊಂಡಂತೆ ಇರುತ್ತವೆ.
  • ಹಣ್ಣಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಅಕಾಲಿಕವಾಗಿ ಬೀಳುತ್ತದೆ.
  • ಬಿಳಿ, ಉದ್ದವಾದ, ಕಿರಿದಾದ ದೇಹದ ಪತಂಗವು ಬಿಳಿ, ಕಪ್ಪು ಚುಕ್ಕೆಗಳಿಂದ ಬೂದು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು
ಸೇಬು
ಚೆರ್ರಿ
ಪೇರು ಹಣ್ಣು/ ಮರಸೇಬು

ಇತರೆ

ರೋಗಲಕ್ಷಣಗಳು

ಆಪಲ್ ಎರ್ಮೈನ್‌ ಪತಂಗಗಳು ಪ್ರಾಥಮಿಕವಾಗಿ ಪಾಳುಬಿದ್ದ ಹಣ್ಣಿನ ತೋಟಗಳು ಮತ್ತು ಹಿತ್ತಲಿನ ಮರಗಳ ಮೇಲೆ ದಾಳಿ ಮಾಡುತ್ತವೆ. ಆದರೆ ವಾಣಿಜ್ಯ ಹಣ್ಣಿನ ತೋಟಗಳಲ್ಲಿ ಇವು ಹಾನಿಕಾರಕ ಕೀಟವಾಗಬಹುದು. ಇವು ಎಲೆಗಳನ್ನು ಗುಂಪುಗುಂಪಾಗಿ ತಿನ್ನುತ್ತವೆ. ಇದರಿಂದ ಕೊಂಬೆಗಳ ತುದಿಯಲ್ಲಿನ ಎಲೆಗಳು ಉದುರುತ್ತದೆ. ಅವುಗಳು ಹಲವಾರು ಎಲೆಗಳನ್ನು ಒಟ್ಟಿಗೆ ಸೇರಿಸುವ ಮೂಲಕ ಗೂಡನ್ನು ರಚಿಸುತ್ತವೆ. ಅವುಗಳು ರಚಿಸುವ ಗೂಡುಗಳು ಅಥವಾ "ಡೇರೆಗಳು" ಸಾಕಷ್ಟು ಸಂಖ್ಯೆಯಲ್ಲಿದ್ದರೆ, ಮರಗಳ ಎಲೆಗಳು ಸಂಪೂರ್ಣವಾಗಿ ಉದುರಿ ವಿರೂಪಗೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ, ಹಣ್ಣುಗಳು ಬೆಳೆಯದಿರಬಹುದು ಮತ್ತು ಅಕಾಲಿಕವಾಗಿ ಬೀಳಬಹುದು. ಆದರೂ, ಕೀಟಗಳು ಮರದ ದೀರ್ಘಾವಧಿಯ ಆರೋಗ್ಯ ಅಥವಾ ಶಕ್ತಿಯ ಮೇಲೆ ಪರಿಣಾಮ ಬೀರುವುದು ವಿರಳ.

Recommendations

ಜೈವಿಕ ನಿಯಂತ್ರಣ

ಹೆಚ್ಚಿನ ಸಂದರ್ಭಗಳಲ್ಲಿ ಚಿಕಿತ್ಸೆಯ ಅಗತ್ಯವಿರುವುದಿಲ್ಲ, ಏಕೆಂದರೆ ಮೇಲ್ನೋಟಕ್ಕೆ ಮಾತ್ರ ಮರಗಳಿಗೆ ಹಾನಿಯಾಗಿರುತ್ತದೆ ಮತ್ತು ಮರಗಳು ಅವನ್ನು ಸಹಿಸಿಕೊಳ್ಳಬಲ್ಲವು. ಟಚಿನಿಡ್ ಫ್ಲೈಸ್, ಪಕ್ಷಿಗಳು ಮತ್ತು ಜೇಡಗಳಂತಹ ಸಾಮಾನ್ಯ ಪರಭಕ್ಷಕಗಳು ಆಪಲ್‌ ಎರ್ಮೈನ್‌ ಪತಂಗಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಅಜೆನಿಯಾಸ್ಪಿಸ್ ಫ್ಯೂಸಿಕೋಲಿಸ್ ಜಾತಿಯ ಪ್ಯಾರಾಸಿಟಾಯ್ಡ್ ಕಣಜಗಳನ್ನು ಪತಂಗಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಅದರ ಹರಡುವಿಕೆಯನ್ನು ನಿಧಾನಗೊಳಿಸಲು ಯಶಸ್ವಿಯಾಗಿ ಬಳಸಲಾಗಿದೆ. ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಬ್ಯಾಕ್ಟೀರಿಯಾ ಆಧಾರಿತ ಜೈವಿಕ-ಕೀಟನಾಶಕಗಳು ಮರಿಹುಳುಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸಿವೆ. ಸಂಪರ್ಕ ಕೀಟನಾಶಕವಾದ ಪೈರೆಥ್ರಮ್ ಅನ್ನು ಸಹ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಬೇಕು. ಕೀಟನಾಶಕವನ್ನು ಸಂಪೂರ್ಣ ಮರದ ಮೇಲೆ ಸಿಂಪಡಿಸುವ ಮೂಲಕ ವ್ಯಾಪಕವಾದ ಬಾಧೆಯನ್ನು ನಿಯಂತ್ರಿಸಬಹುದು. ಸಂಪರ್ಕ ಕೀಟನಾಶಕಗಳಾದ ಡೆಲ್ಟಾಮೆಥ್ರಿನ್ ಅಥವಾ ಲ್ಯಾಂಬ್ಡಾ-ಸೈಹಾಲೋಥ್ರಿನ್ ಲಾರ್ವಾಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವ್ಯವಸ್ಥಿತ ಕೀಟನಾಶಕವಾದ ಅಸೆಟಾಮಿಪ್ರಿಡ್ ಅನ್ನು ಸಹ ಬಳಸಬಹುದು. ಪರಾಗಸ್ಪರ್ಶ ಮಾಡುವ ಕೀಟಗಳಿಗೆ ಅಪಾಯವಾಗುವ ಸಾಧ್ಯತೆ ಇರುವುದರಿಂದ ಹೂವು ಬಿಡುತ್ತಿರುವ ಸಸ್ಯಗಳಿಗೆ ಸಿಂಪಡಿಸಬಾರದು.

ಅದಕ್ಕೆ ಏನು ಕಾರಣ

ಯಪೋನೋಮ್ಯುಟೊಯಿಡಿಯಾ ಕುಟುಂಬಕ್ಕೆ ಸೇರಿದ ಲಾರ್ವಾಗಳ ಆಹಾರ ಚಟುವಟಿಕೆಯಿಂದಾಗಿ ರೋಗಲಕ್ಷಣಗಳು ಉಂಟಾಗುತ್ತವೆ. ಪತಂಗಗಳು ಬೇಸಿಗೆಯ ಮಧ್ಯಭಾಗದ ಸಮಯದಲ್ಲಿ ಹುಟ್ಟುತ್ತವೆ. ಅವುಗಳು 16 ರಿಂದ 20 ಮಿಮೀ ರೆಕ್ಕೆಗಳನ್ನು ಹೊಂದಿರುವ ಬಿಳಿ, ಉದ್ದ ಮತ್ತು ಕಿರಿದಾದ ದೇಹವನ್ನು ಹೊಂದಿರುತ್ತವೆ. ಬಿಳಿಯದಾದ, ಅಂಚಿರುವ ಮುಂಭಾಗದ ರೆಕ್ಕೆಗಳು ಸಣ್ಣ ಕಪ್ಪು ಚುಕ್ಕೆಗಳಿಂದ ಕೂಡಿದ ಮಚ್ಚೆಗಳನ್ನು ಹೊಂದಿರುತ್ತವೆ. ಆದರೆ ಹಿಂಭಾಗದ ರೆಕ್ಕೆಗಳು ಬೂದು ಬಣ್ಣದೊಂದಿಗೆ ಫ್ರಿಂಜ್ಡ್ ಅಂಚುಗಳನ್ನು ಹೊಂದಿರುತ್ತವೆ. ಹೆಣ್ಣು ಪತಂಗಗಳು ಮೊಗ್ಗುಗಳು ಅಥವಾ ರೆಂಬೆ ಸಂಧಿಗಳ ಹತ್ತಿರ, ಒಂದರ ಮೇಲೊಂದರಂತೆ ಸಾಲುಗಳಲ್ಲಿ ತೊಗಟೆಯ ಮೇಲೆ ಒಂದು ರೀತಿಯ ಗೂಡನ್ನು ರಚಿಸಿ, ಗೊಂಚಲುಗಳಲ್ಲಿ ಹಳದಿ ಮಿಶ್ರಿತ ಮೊಟ್ಟೆಗಳನ್ನು ಇಡುತ್ತವೆ. ಲಾರ್ವಾಗಳು ಮೊಳಕೆಯೊಡೆಯುವ ಸಮಯದಲ್ಲಿ ಹೊರಹೊಮ್ಮುತ್ತವೆ ಮತ್ತು ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಅವು ಹಸಿರು ಮಿಶ್ರಿತ ಹಳದಿ ಬಣ್ಣದವುಗಳಾಗಿದ್ದು, ಸುಮಾರು 20 ಮಿಮೀ ಉದ್ದ ಮತ್ತು ಅವುಗಳ ದೇಹದುದ್ದಕ್ಕೂ ಎರಡು ಸಾಲುಗಳ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತವೆ. ಅವುಗಳು ಎಲೆಗಳನ್ನು ಬಲೆಯಂತೆ ಸೇರಿಸಿ ನಿರ್ಮಿಸಲಾದ ಸಾಮುದಾಯಿಕ "ಡೇರೆಗಳ" ಒಳಗೆ ಆಹಾರ ಸೇವಿಸುತ್ತವೆ. ಹಲವಾರು ಲಾರ್ವಾ ಹಂತಗಳನ್ನು ದಾಟಿದ ನಂತರ, ಸ್ಪಿಂಡಲ್-ಆಕಾರದ ಮರಿಹುಳುವಿನ ಕೋಶಗಳು ಗುಂಪುಗುಂಪಾಗಿ ರೇಷ್ಮೆಯಂತಹ ಗೂಡುಗಳಲ್ಲಿ ಎಲೆಗಳಲ್ಲಿ ನೇತಾಡುತ್ತವೆ. ವರ್ಷಕ್ಕೆ ಒಂದು ಪೀಳಿಗೆ ಮಾತ್ರ ಇರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಹಣ್ಣಿನ ತೋಟಗಳ ಮೇಲೆ ನಿಗಾ ಇಡಬೇಕು ಮತ್ತು ಯಾವುದೇ ಬಾಧಿತ ಚಿಗುರು ಅಥವಾ ಕೊಂಬೆಯನ್ನು ಕತ್ತರಿಸಿ ತೆಗೆಯಬೇಕು.
  • ಕೀಟನಾಶಕಗಳ ನಿಯಂತ್ರಿತ ಬಳಕೆಯ ಮೂಲಕ ಟಾಚಿನಿಡ್ ಫ್ಲೈಸ್, ಪಕ್ಷಿಗಳು ಮತ್ತು ಜೇಡಗಳಂತಹ ಪರಭಕ್ಷಕಗಳ ಸಂಖ್ಯೆಯನ್ನು ಉತ್ತೇಜಿಸಬೇಕು.
  • ಪತಂಗವನ್ನು ಹಿಡಿಯಲು ಮತ್ತು ಅದರ ಸಂಖ್ಯೆಗಳ ಬಗ್ಗೆ ಗಮನವಿಡಲು ಫೆರೋಮೋನ್ ಬಲೆಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ