ಇತರೆ

ಯುರೋಪಿಯನ್ ಕೆಂಪು ಮಿಟ

Panonychus ulmi

ಹುಳು

5 mins to read

ಸಂಕ್ಷಿಪ್ತವಾಗಿ

  • ಮೊದಲು ತಿಳಿ ಕಂಚು ಬಣ್ಣದ ಚುಕ್ಕೆಗಳು ಎಲೆಯ ಮೇಲೆ ಮೂಡುತ್ತವೆ.
  • ಈ ಎಲೆಗಳು ಬಣ್ಣಗೆಡುತ್ತವೆ.
  • ಎಲೆಗಳ ಆಕಾರ ಕೆಡಬಹುದು ಅಥವಾ ಎಲೆಗಳು ಮೇಲಕ್ಕೆ ಸುರುಳಿ ಸುತ್ತಿಕೊಳ್ಳುತ್ತವೆ.
  • ಕಾಂಡದ ತಿರುಳಿನ ಬೆಳವಣಿಗೆ ಕುಂಠಿತವಾಗುತ್ತದೆ, ಹಣ್ಣು ಪೂರ್ಣವಾಗಿ ಮಾಗುವುದಿಲ್ಲ ಅಥವಾ ಅವಧಿಗೆ ಮೊದಲೇ ಉದುರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

8 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಚೆರ್ರಿ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಸೋಂಕು ಸಣ್ಣಮಟ್ಟದಲ್ಲಿದ್ದರೆ ಎಲೆಯ ಮೇಲೆ ಮುಖ್ಯ ನಾಳಗಳ ಉದ್ದಕ್ಕೂ ತಿಳಿ ಕಂಚು ಬಣ್ಣದ ಚುಕ್ಕೆಗಳು ಮೂಡುತ್ತವೆ. ಕೀಟಗಳು ಸಸ್ಯ ಪದಾರ್ಥವನ್ನು ಹೀರುವಾಗ ಈ ಚುಕ್ಕೆಗಳು ಉಂಟಾಗುತ್ತವೆ. ಕೀಟಗಳ ಸಂಖ್ಯೆ ಬೆಳೆದಂತೆ ಈ ಚುಕ್ಕೆಗಳು ಇಡೀ ಎಲೆಗೆ ವ್ಯಾಪಿಸಬಹುದು. ಎಲೆಗಳು ಮೇಲಕ್ಕೆ ಸುರುಳಿ ಸುತ್ತಿಕೊಳ್ಳುತ್ತವೆ ಹಾಗೂ ಎಲೆಗಳು ಕಂಚು ಬಣ್ಣಕ್ಕೆ ಅಥವಾ ತುಕ್ಕು ಹಿಡಿದ ಕಬ್ಬಿಣದ ಬಣ್ಣಕ್ಕೆ ತಿರುಗುತ್ತವೆ. ಎಲೆಗಳು ಮತ್ತು ಮೊಗ್ಗುಗಳಿಗೆ ಉಂಟಾದ ಹಾನಿಯಿಂದಾಗಿ ಮರದ ದ್ಯುತಿ ಸಂಶ್ಲೇಷಣೆ ಪ್ರಕ್ರಿಯೆಯು ಕಡಿಮೆಯಾಗುತ್ತದೆ. ಇದರಿಂದಾಗಿ ಚಿಗುರಿನ ಬೆಳವಣಿಗೆ ಕುಂಠಿತವಾಗುತ್ತದೆ, ಕಾಂಡದ ತಿರುಳಿನ ಬೆಳವಣಿಗೆಯೂ ಕಡಿಮೆಯಾಗುತ್ತದೆ, ಹಣ್ಣುಗಳು ಪೂರ್ಣವಾಗಿ ಮಾಗುವುದಿಲ್ಲ ಅಥವಾ ಅವಧಿಗೆ ಮೊದಲೇ ಉದುರಿ ಹೋಗುತ್ತವೆ. ಇದರಿಂದಾಗಿ ಚಿಗುರುಗಳು ಚಳಿಗಾಲದ ಇಬ್ಬನಿಗೆ ಹೆಚ್ಚು ತೆರೆದುಕೊಳ್ಳುತ್ತವೆ ಮತ್ತು ಮುಂದಿನ ಋತುವಿನಲ್ಲಿ ಹೂಗಳ ಸಂಖ್ಯೆ ಕಡಿಮೆಯಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಪರಭಕ್ಷಕ ಕೀಟಗಳನ್ನುಪಯೋಗಿಸುವ ಜೈವಿಕ ನಿಯಂತ್ರಣ ವಿಧಾನವು ಹಣ್ಣಿನ ತೋಟಗಳಲ್ಲಿ ಚೆನ್ನಾಗಿ ಕೆಲಸ ಮಾಡುತ್ತವೆ. ಲೇಡಿ ಬಗ್ಸ್, ಕೆಲವು ಕ್ಯಾಪ್ಸಿಡ್ ಬಗ್‍ನ ಪ್ರಭೇದಗಳು, ಗಾಜಿನಂತಹ ರೆಕ್ಕೆಗಳ ಮಿರಿಡ್ ಬಗ್ ಅಥವಾ ಸ್ಟೆತೋರಸ್ ಪಂಕ್ಟಮ್ – ಇವು ಸಹಜ ವೈರಿಗಳು. ಬಳಕೆ ಮಂಜೂರಾಗಿರುವ ಸಣ್ಣ ವ್ಯಾಪ್ತಿಯ ತೈಲಗಳನ್ನು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಮಿತಿ ಮೀರಿದ ಪಕ್ಷದಲ್ಲಿ, ಕೆಂಪು ಮೊಟ್ಟೆಗಳ ಗುಂಪುಗಳು ಚಿಗುರಿನ ತುದಿಯಲ್ಲಿ ಕಂಡುಬಂದರೆ ಕೀಟನಾಶಕಗಳನ್ನು ಬಳಸಬಹುದು. ರಾಸಾಯನಿಕಗಳ ಬಳಕೆ ಮಿತಿಯಲ್ಲಿರಲಿ. ರಾಸಾಯನಿಕಗಳಿಂದ ಪ್ರಯೋಜನಕಾರಿ ಕೀಟಗಳಿಗೂ ಹಾನಿಯಾಗಬಹುದು ಹಾಗೂ ಕೆಲವು ಕೀಟಗಳು ರಾಸಾಯನಿಕಗಳ ವಿರುದ್ಧ ಪ್ರತಿರೋಧ ಬೆಳೆಸಿಕೊಳ್ಳಬಹುದು. ತೋಟಗಾರಿಕಾ ತೈಲಗಳನ್ನು ಬಳಸಿ ಕೀಟಗಳ ಸಂಖ್ಯೆಯನ್ನು ಮಿತಿಯಲ್ಲಿಡಬಹುದು.

ಅದಕ್ಕೆ ಏನು ಕಾರಣ

ಯುರೋಪಿಯನ್ ಕೆಂಪು ಕೀಟವು (ಪ್ಯಾನೋನೈಕಸ್ ಅಲ್ಮಿ) ತನ್ನ ಆಹಾರ ಸಂಪಾದಿಸುವ ಪ್ರಕ್ರಿಯೆಯಲ್ಲಿ ಈ ಲಕ್ಷಣಗಳಿಗೆ ಕಾರಣವಾಗುತ್ತದೆ. ಪೋಮ್ ಮತ್ತು ಸ್ಟೋನ್ ಜಾತಿಯ ಹಣ್ಣುಗಳನ್ನು ಹಾಗೂ ದ್ರಾಕ್ಷಿಬಳ್ಳಿಗಳನ್ನು ಈ ಕೀಟವು ಬಾಧಿಸುತ್ತದೆ. ಗಂಡು ಕೀಟಗಳು ಹಳದಿ ಮಿಶ್ರಿತ ಕೆಂಪು ಬಣ್ಣದಲ್ಲಿರುತ್ತವೆ. ಬೆನ್ನ ಮೇಲೆ ಎರಡು ಕೆಂಪು ಚುಕ್ಕೆಗಳಿರುತ್ತವೆ. 0.30 ಮಿಮೀ ಉದ್ದವಿರುತ್ತವೆ. ಹೆಣ್ಣು ಕೀಟಗಳು ಗಂಡು ಕೀಟಗಳಿಗಿಂತ ಕೊಂಚ ಉದ್ದಕ್ಕಿರುತ್ತವೆ (0.35ಮಿಮೀ). ಗಂಡು, ಹೆಣ್ಣು ಎರಡೂ ಮೊಟ್ಟೆಯಾಕಾರದಲ್ಲೇ ಇದ್ದರೂ ಕೂಡ ಹೆಣ್ಣು ಕೀಟವು ಮೊಟ್ಟೆಯಾಕಾರಕ್ಕೆ ಮತ್ತೂ ಹತ್ತಿರವಿರುತ್ತದೆ. ಹೆಣ್ಣು ಕೀಟವು ಇಟ್ಟಿಗೆ ಕೆಂಪು ಬಣ್ಣದ ದೇಹವನ್ನು ಹೊಂದಿದ್ದು ಅವುಗಳ ಬೆನ್ನ ಮೇಲಿನ ಮುತ್ತಿನಂತಹ ಚುಕ್ಕೆಗಳಿಂದ ಗಟ್ಟಿಯಾದ ಬಿಳಿ ಕೂದಲುಗಳು ಚಾಚಿಕೊಂಡಿರುತ್ತವೆ. ಹೆಣ್ಣು ಕೀಟವು ತಡ ಬೇಸಗೆಯ ಸಮಯದಲ್ಲಿ ತೊಗಟೆಯಲ್ಲಿನ ಸೀಳುಗಳಲ್ಲಿ, ಹಣ್ಣಿನ ಮೈಯಲ್ಲಿರುವ ಕುಳಿಗಳಲ್ಲಿ ಅಥವಾ ಸುಪ್ತ ಮೊಗ್ಗುಗಳಲ್ಲಿ ಮೊಟ್ಟೆಗಳನ್ನಿಡುತ್ತದೆ. ವಸಂತ ಋತುವಿನಲ್ಲಿಯಾದರೆ ಎಲೆಗಳ ಕೆಳಭಾಗದಲ್ಲಿ ಮೊಟ್ಟೆಗಳನ್ನಿಡುತ್ತವೆ. ವರ್ಷವೊಂದರಲ್ಲಿ ಹುಟ್ಟುವ ಕೀಟದ ಪೀಳಿಗೆಗಳ ಸಂಖ್ಯೆಯು ಉಷ್ಣಾಂಶ ಮತ್ತು ಆಹಾರ ಪೂರೈಕೆಯ ಮೇಲೆ ಅವಲಂಬಿತವಾಗಿದೆ; ಚಳಿಗಾಲದಲ್ಲಿಯಾದರೆ 2-3 ಪೀಳಿಗೆಗಳು, ಬೆಚ್ಚಗಿನ ಹವೆಯಲ್ಲಿ 8 ಪೀಳಿಗೆಗಳು. ನೈಟ್ರೋಜನ್ ಹೆಚ್ಚು ಸಿಕ್ಕರೆ ಗಿಡ ಪುಷ್ಕಳವಾಗಿ ಬೆಳೆಯುವುದರಿಂದ ಕೀಟದ ಸಂಖ್ಯೆಯೂ ಹೆಚ್ಚು. ಗಾಳಿ ಮತ್ತು ಮಳೆಯಿದ್ದರೆ ಕೀಟವು ಸಾಯುವ ಸಾಧ್ಯತೆ ಹೆಚ್ಚು.


ಮುಂಜಾಗ್ರತಾ ಕ್ರಮಗಳು

  • ವಿವಿಧ ರೀತಿಯ ಗಿಡಗಳನ್ನು ಬೆಳೆಸುವುದರಿಂದ ಈ ಕೀಟದ ವೈರಿಗಳ ಸಂಖ್ಯೆ ವೃದ್ಧಿಯಾಗುತ್ತದೆ.
  • ಸೋಂಕು ತೀವ್ರವಿದ್ದಲ್ಲಿ ಗಿಡದ ಬಾಧಿತ ಭಾಗಗಳನ್ನು ಕತ್ತರಿಸಿ ಹಾಕಬೇಕು.
  • ಪ್ರಯೋಜನಕಾರಿ ಕೀಟಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಕೀಟನಾಶಕಗಳ ಬಳಕೆ ಮಿತಿಯಲ್ಲಿರಲಿ.
  • ಧೂಳುಮಯ ವಾತಾವರಣವನ್ನು ತಪ್ಪಿಸಲು ಮರಗಳಿಗೆ ಯಥೇಚ್ಛವಾಗಿ ನೀರು ಹಾಯಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ