ಕಲ್ಲಂಗಡಿ

ಕುಕುರ್ಬಿಟ್ಸ್ ನ ಅಂಥ್ರಾಕ್ನೋಸ್

Glomerella lagenarium

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ನೀರು ತುಂಬಿದ, ಹಳದಿ ವೃತ್ತಾಕಾರದ ಕಲೆಗಳು.
  • ಹಣ್ಣಿನ ಮೇಲೆ ವೃತ್ತಾಕಾರದ, ಕಪ್ಪು, ಗುಳಿಬಿದ್ದ ಹುಣ್ಣುಗಳು.

ಇವುಗಳಲ್ಲಿ ಸಹ ಕಾಣಬಹುದು

4 ಬೆಳೆಗಳು
ಸೌತೆಕಾಯಿ
ಕಲ್ಲಂಗಡಿ
ಕುಂಬಳಕಾಯಿ
ಝುಕಿನಿ

ಕಲ್ಲಂಗಡಿ

ರೋಗಲಕ್ಷಣಗಳು

ಎಲೆ ರೋಗಲಕ್ಷಣಗಳು ನೀರು ತುಂಬಿದ ಗಾಯಗಳಾಗಿ ಆರಂಭವಾಗುತ್ತವೆ. ಅದು ನಂತರ ಹಳದಿ ವೃತ್ತಾಕಾರದ ಕಲೆಗಳಾಗಿ ಪರಿಣಮಿಸುತ್ತದೆ. ಈ ಕಲೆಗಳ ಮುಖ್ಯ ಲಕ್ಷಣವೆಂದರೆ ಅವುಗಳು ಅನಿಯಮಿತವಾಗಿರುತ್ತವೆ ಮತ್ತು ದೊಡ್ಡದಾಗುತ್ತ ಗಾಢ ಕಂದು ಅಥವಾ ಕಪ್ಪು ಬಣ್ಣವನ್ನು ಹೆಚ್ಚಿಸುತ್ತವೆ. ಕಾಂಡದ ಗಾಯಗಳು ಕೂಡಾ ಎದ್ದು ಕಾಣುವವು ಮತ್ತು ಅವು ಬೆಳೆದಂತೆ ನಾಳೀಯ ಅಂಗಾಂಶಗಳನ್ನು ಸುತ್ತಿ, ಕಾಂಡಗಳು ಮತ್ತು ಬಳ್ಳಿಗಳು ಬಾಡಿಹೋಗಲೂ ಕಾರಣವಾಗಬಹುದು. ಹಣ್ಣುಗಳ ಮೇಲೆ, ದೊಡ್ಡ, ವೃತ್ತಾಕಾರದ, ಕಪ್ಪು ಮತ್ತು ಗುಳಿಬಿದ್ದ ಕಲೆಗಳು ಕಾಣಿಸಿಕೊಳ್ಳುತ್ತವೆ ಮತ್ತು ನಂತರ ಅವು ಹುಣ್ಣು(ಕ್ಯಾಂಕರ್)ಗಳಾಗಿ ಬದಲಾಗುತ್ತವೆ. ಕಲ್ಲಂಗಡಿಯ ಮೇಲೆ ಈ ಕಲೆಗಳು 6 ರಿಂದ 13 ಮಿ.ಮೀ ವ್ಯಾಸವಿರುತ್ತದೆ ಮತ್ತು 6 ಮಿ.ಮೀ ಆಳ ಇರಬಹುದು. ತೇವಾಂಶವು ಇದ್ದಾಗ, ಗಾಯಗಳ ಕಪ್ಪು ಮಧ್ಯಭಾಗವು ಜೆಲಟಿನ ರೀತಿಯ ಸಾಲ್ಮನ್ ಬಣ್ಣದ ಬೀಜಕಗಳಿಂದ ಮುಚ್ಚಲ್ಪಟ್ಟಿರುತ್ತದೆ. ಕರಬೂಜ ಮತ್ತು ಸೌತೆಕಾಯಿಯಲ್ಲಿ ಇದೇ ರೀತಿಯ ಗಾಯಗಳು ಬರುತ್ತವೆ. ಈ ಗುಲಾಬಿ ಬಣ್ಣದ ಹುಣ್ಣುಗಳು(ಕ್ಯಾಂಕರ್ಗಳು) ಕುಕುರ್ಬಿಟ್ಸ್ನಲ್ಲಿ ಕಂಡುಬರುವ ರೋಗದ ಅತ್ಯಂತ ವಿಶಿಷ್ಟ ಲಕ್ಷಣಗಳಾಗಿವೆ.

Recommendations

ಜೈವಿಕ ನಿಯಂತ್ರಣ

ಕುಕುರ್ಬಿಟ್ ಗಳಲ್ಲಿ ಸಾವಯವ ಅನುಮೋದಿತ ತಾಮ್ರದ ಸೂತ್ರಗಳನ್ನು, ಈ ರೋಗದ ವಿರುದ್ಧ ಸಿಂಪಡಿಸಬಹುದಾಗಿದೆ ಮತ್ತು ಹಿಂದೆ ಇದು ಯೋಗ್ಯ ಫಲಿತಾಂಶಗಳನ್ನು ತೋರಿಸಿದೆ. ಜೈವಿಕ ನಿಯಂತ್ರಣ ಏಜೆಂಟ್ ಬಾಸಿಲಸ್ ಸಬ್ಟಿಲೀಸ್ ಹೊಂದಿರುವ ಸೂತ್ರೀಕರಣಗಳು ಸಹ ಲಭ್ಯವಿದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ನಿಯಮಿತವಾಗಿ ಬೆಳೆಗೆ ಅಂಗೀಕರಿಸಿದ ಶಿಲೀಂಧ್ರನಾಶಕಗಳನ್ನು ಸಿಂಪಡಿಸಿ. ಆಗಾಗ್ಗೆ ಮಳೆಯಾದಾಗ ಇನ್ನೂ ಹೆಚ್ಚಾಗಿ ಹಾಕಿ. ಲಭ್ಯವಿರುವ ಶಿಲೀಂಧ್ರನಾಶಕಗಳ ಪೈಕಿ ಕ್ಲೋರೊಥಲೋನಿಲ್, ಮನೆಬ್ ಮತ್ತು ಮನ್ಕೊಜೆಬ್ ಸೂತ್ರಗಳು. ಅತ್ಯಂತ ಪರಿಣಾಮಕಾರಿ ಎಲೆ ಸಿಂಪಡಣೆ ಚಿಕಿತ್ಸೆಯೆಂದರೆ ಮನ್ಕೊಜೆಬ್ನೊಂದಿಗೆ ಕ್ಲೋರೊಥಲೋನಿಲ್ ನ ಸಂಯೋಜನೆಯಾಗಿದೆ.

ಅದಕ್ಕೆ ಏನು ಕಾರಣ

ಎಲೆಗಳು ಮತ್ತು ಹಣ್ಣುಗಳ ಮೇಲೆ ಕಂಡುಬರುವ ರೋಗಲಕ್ಷಣಗಳು ಗ್ಲೋಮೆರೆಲಾ ಲೆಜಿನೇರಿಯಮ್ ಶಿಲೀಂಧ್ರದಿಂದ ಉಂಟಾಗುತ್ತವೆ. ಇದು ಹಿಂದಿನ ಬೆಳೆಯ ರೋಗಪೀಡಿತ ಉಳಿಕೆಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ ಅಥವಾ ಕುಕುರ್ಬಿಟ್ ಬೀಜಗಳ ಮೂಲಕ ಹರಡಬಹುದು. ವಸಂತ ಋತುವಿನಲ್ಲಿ, ವಾತಾವರಣವು ಒದ್ದೆಯಾದಾಗ, ಶಿಲೀಂಧ್ರವು ವಾಯುಗಾಮಿ ಬೀಜಕಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಅದು ಮಣ್ಣಿನ ಹತ್ತಿರವಿರುವ ಎಲೆಗಳು ಮತ್ತು ಬಳ್ಳಿಗಳಿಗೆ ಸೋಂಕು ತರುತ್ತದೆ. ಶಿಲೀಂಧ್ರದ ಜೀವನ ಚಕ್ರವು ಸುತ್ತಲಿನ ಆರ್ದ್ರತೆ, ಎಲೆಯ ತೇವಾಂಶ ಮತ್ತು ಹೆಚ್ಚಿನ ಉಷ್ಣಾಂಶವನ್ನು ಅವಲಂಬಿಸಿರುತ್ತದೆ. 24 °ಸಿ ಯನ್ನು ಸೂಕ್ತ ತಾಪಮಾನ ಎಂದು ಪರಿಗಣಿಸಲಾಗುತ್ತದೆ. ತಾಪಮಾನ 4.4 °ಸಿ ಯ ಕೆಳಗೆ ಅಥವಾ 30 °ಸಿ ಕ್ಕೂ ಮೇಲಿದ್ದಾಗ ಅಥವಾ ತೇವಾಂಶ ಇಲ್ಲದಿದ್ದರೆ ಬೀಜಕಗಳು ಕುಡಿಯೊಡೆಯುವುದಿಲ್ಲ . ಇದಲ್ಲದೆ, ಫ್ರುಟಿಂಗ್ ಬಾಡಿಗಳಲ್ಲಿರುವ ಅವುಗಳ ಅಂಟುವ ಪದರಗಳಿಂದ ಬೀಜಕಗಳನ್ನು ಬಿಡುಗಡೆ ಮಾಡಲು, ರೋಗಕಾರಕ್ಕೆ ನೀರು ಬೇಕು. ಸಾಮಾನ್ಯವಾಗಿ ಸಸ್ಯದ ಮೇಲಾವರಣ ಬೆಳೆದ ನಂತರ ಮಧ್ಯ ಋತುವಿನಲ್ಲಿ ಆಂಥ್ರಾಕ್ನೋಸ್ ಏಕೆ ಕಂಡುಬರುತ್ತದೆ ಎಂಬುದನ್ನು ಇದು ವಿವರಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ, ರೋಗ-ಮುಕ್ತ ಬೀಜಗಳನ್ನು ಬಳಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ (ಮಾರುಕಟ್ಟೆಗಳಲ್ಲಿ ಹಲವಾರು ಇವೆ) ನಿರೋಧಕ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಮೂರು ವರ್ಷಗಳಲ್ಲಿ ಸರದಿಯಂತೆ ವಿವಿಧ ಬೆಳೆಗಳೊಂದಿಗೆ ಕುಕುರ್ಬಿಟ್ಸ್ ಬೆಳೆಗಳನ್ನು ಸರದಿ ಬೆಳೆ ಮಾಡಿ.
  • ಋತುವಿನ ಅಂತ್ಯದಲ್ಲಿ ಹಣ್ಣುಗಳು ಮತ್ತು ಬಳ್ಳಿಗಳ ಅಡಿಯಲ್ಲಿ ಉಳುಮೆ ಮಾಡುವ ಮೂಲಕ ಹೊಲದಲ್ಲಿ ಉತ್ತಮ ಮಟ್ಟದ ನೈರ್ಮಲ್ಯವನ್ನು ಕಾಪಾಡುವ ಅಭ್ಯಾಸ ಮಾಡಿ.
  • ಎಲೆಗಳು ಒದ್ದೆಯಾಗಿದ್ದಾಗ ಹೊಲಗಳಲ್ಲಿ ಯಂತ್ರೋಪಕರಣಗಳು ಅಥವಾ ಕಾರ್ಮಿಕರ ಚಲನೆಯನ್ನು ತಪ್ಪಿಸಿ.
  • ತುಂತುರು ನೀರಾವರಿ ಅಗತ್ಯವಿದ್ದರೆ, ಮುಂಜಾವಿನಲ್ಲೇ ಅದನ್ನು ಮಾಡಿ ಮತ್ತು ರಾತ್ರಿಯಾಗುವ ಮುನ್ನ ಎಲೆಗಳು ಒಣಗುವಂತೆ ನೋಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ