ದಾಳಿಂಬೆ

ದಾಳಿಂಬೆಯ ಆಂತ್ರಾಕ್ನೋಸ್

Glomerella cingulata

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಳದಿ ಉಂಗುರಗಳಿರುವ ಕಪ್ಪು ಚುಕ್ಕೆಗಳು ಮೂಡುತ್ತವೆ.
  • ಕ್ರಮೇಣ ಈ ಚುಕ್ಕೆಗಳು ಇಡೀ ಎಲೆಯನ್ನು ಆವರಿಸಿಕೊಳ್ಳುತ್ತವೆ.
  • ಅವಧಿಗೆ ಮೊದಲೇ ಎಲೆಗಳುದುರುತ್ತವೆ.
  • ಹಣ್ಣುಗಳ ಮೇಲೆ ಕಂದು ಅಥವಾ ಕಪ್ಪು ಬಣ್ಣದ ಒಣ ಕಲೆಗಳು ಗೋಚರಿಸುತ್ತವೆ.
  • ಬೀಜಕೋಶಗಳು ಕೊಳೆತು ಹೋಗುತ್ತವೆ.
  • ರೆಂಬೆಗಳ ಮೇಲೆ ಬೂಷ್ಟು ಮೂಡುತ್ತದೆ.
  • ಬೇರುಗಳು ಒಂದಕ್ಕೊಂದು ಹೆಣೆದುಕೊಂಡು ಕಾಂಡಕ್ಕೆ ಸುತ್ತಿಕೊಳ್ಳುವುದರಿಂದ ಗಿಡವು ತುದಿಯಿಂದ ಶುರುವಾಗಿ ಹಿಂದಕ್ಕೆ ಸಾಯತೊಡಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದಾಳಿಂಬೆ

ರೋಗಲಕ್ಷಣಗಳು

ಹವಾಮಾನ ಹಾಗೂ ದಾಳಿಯಾದ ಅಂಗಾಂಶ ಯಾವುದೆಂಬುದನ್ನವಲಂಬಿಸಿ ಶಿಲೀಂಧ್ರವು ಹಲವು ಬಗೆಯ ಲಕ್ಷಣಗಳಿಗೆ ಕಾರಣವಾಗುತ್ತದೆ. ಹಲವು ಬಣ್ಣಗಳ ಸಣ್ಣ ಗುಳಿಬಿದ್ದಂತಹ ಚುಕ್ಕೆಗಳು ಎಲೆ, ಕಾಂಡ, ಹಣ್ಣು ಅಥವಾ ಹೂವುಗಳ ಮೇಲೆ ಮೂಡತೊಡಗುತ್ತವೆ. ಹೆಚ್ಚೂ ಕಡಿಮೆ ಈ ಚುಕ್ಕೆಗಳ ಸುತ್ತಲೂ ಹಳದಿ ಉಂಗುರಗಳು ಇರುತ್ತವೆ. ಈ ಚುಕ್ಕೆಗಳು ಅಗಲವಾಗಿ ಕೊನೆಗೆ ಎಲೆಗಳ ಮೇಲೆ ಗಾಯಗಳಾಗುತ್ತವೆ, ಹಾಗೂ ದಳದ ಬಹುಭಾಗವನ್ನು ಆವರಿಸಿಕೊಳ್ಳುತ್ತವೆ. ಹಳದಿ ಬಣ್ಣಕ್ಕೆ ತಿರುಗಿ ಅವಧಿಗೆ ಮೊದಲೇ ಎಲೆಗಳುದುರಬಹುದು. ಹಣ್ಣುಗಳ ಮೇಲಿನ ಚುಕ್ಕೆಗಳು ಕಂದು ಅಥವಾ ಗಾಢ ಕಂದು ಬಣ್ಣದಲ್ಲಿದ್ದು ಮೊದಲಿಗೆ ವರ್ತುಲಾಕಾರದಲ್ಲಿದ್ದರೂ ಅಗಲವಾಗುತ್ತಾ ಹೋದಂತೆ ಆಕಾರ ಅನಿಯಮಿತವಾಗಿ ಬದಲಾಗುತ್ತದೆ. ಕ್ರಮೇಣ ಹಣ್ಣು ಮೆತ್ತಗಾಗುತ್ತದೆ ಮತ್ತು ದಾಳಿಂಬೆ ಬೀಜದ ಸುತ್ತಲಿನ ಮೆತ್ತನೆಯ ಭಾಗವು ಕೊಳೆಯತೊಡಗುತ್ತದೆ. ಈ ಭಾಗ ಗಾಢ ಬೂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಕೊಳೆತರೂ ಕೂಡ ನೀರುನೀರಾಗಿಯೇನೂ ಇರುವುದಿಲ್ಲ. ಆಂತ್ರಾಕ್ನೋಸ್ ಚಿಕ್ಕ ರೆಂಬೆಗಳ ಮೇಲೂ ದಾಳಿಯಿಟ್ಟು ಬೂಷ್ಟು ಮೂಡಲು ಕಾರಣವಾಗುತ್ತದೆ. ಕಾಂಡಕ್ಕೆ ಸೋಂಕು ತಗುಲಿದರೆ ಕೆಲವೊಮ್ಮೆ ಕಾಂಡದ ಸುತ್ತಲೂ ತೊಗಟೆಯು ಉದುರುತ್ತದೆ ಹಾಗೂ ಗಿಡವು ತುದಿಯಿಂದ ಶುರುವಾಗಿ ಹಿಂದಕ್ಕೆ ಸಾಯತೊಡಗುತ್ತದೆ.

Recommendations

ಜೈವಿಕ ನಿಯಂತ್ರಣ

ಪ್ರತಿಸ್ಪರ್ಧಿ ಶಿಲೀಂಧ್ರವಾದ ಆಸ್ಪರ್ಗಿಲಸ್ ಫ್ಲೇವಸ್, ಹೈಪೋಕ್ರಿಯಾ ರೂಫಾ, ಹೈಪೋನೆಕ್ಟ್ರಿಯಾ ಟ್ಯೂಬರ್ಕ್ಯುಲಾರಿಫಾರ್ಮಿಸ್ ಮತ್ತು ನೆಕ್ಟರ್ಇಯೇಲಾ ಮ್ಯೂಲೇರಿ – ಇವುಗಳೇ ಜೈವಿಕ ನಿಯಂತ್ರಣಾ ಪದಾರ್ಥಗಳು. ಇದರಲ್ಲಿ ಮೊದಲನೆಯದ್ದು ಮಾತ್ರವೇ ನಿಜ ಪ್ರತಿರೋಧ ಒಡ್ಡುವುದು, ಉಳಿದವೆಲ್ಲಾ ಪರಾವಲಂಬಿಗಳು ಅಥವಾ ರೋಗಕಾರಕಗಳು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಮೊದಲ ನಿರ್ಬಂಧಕ ಸಿಂಪಡಣೆಯನ್ನು ಹೂವರಳುವ ಸಮಯದಲ್ಲಿ ಮಾಡಬಹುದು. ಹದಿನೈದು ದಿನಕ್ಕೊಮ್ಮೆ ಎರಡು ಸಲ ಸಿಂಪಡಿಸಿ. ಪ್ರಾಪೈಕೊನಾಝಾಲ್ ಮತ್ತು ಮ್ಯಾಂಕೋಝೆಬ್ ಅಥವಾ ಮ್ಯಾಂಕೋಝೆಬ್ ಮತ್ತು ಟ್ರೈಸೈಕ್ಲಾಝಾಲ್‍ನ ಸಂಯುಕ್ತ ಸಕ್ರಿಯ ಅಂಶಗಳು. ನಮೂದಿಸಿದಷ್ಟೇ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುವುದು ಮುಖ್ಯ. ವಿವಿಧ ರೀತಿ ಕಾರ್ಯ ನಿರ್ವಹಿಸುವ ಶಿಲೀಂಧ್ರನಾಶಕಗಳನ್ನು ಬಳಸದಿದ್ದರೆ ಶಿಲೀಂಧ್ರನಾಶಕಗಳ ಮೇಲೆ ಅವು ಪ್ರತಿರೋಧ ಬೆಳೆಸಿಕೊಳ್ಳುತ್ತವೆ.

ಅದಕ್ಕೆ ಏನು ಕಾರಣ

ಗ್ಲೋಮೆರೆಲಾ ಸಿಂಗುಲಾಟಾ ಎಂಬ ಶಿಲೀಂಧ್ರವೇ ಈ ರೋಗಕ್ಕೆ ಕಾರಣ. ಈ ಶಿಲೀಂಧ್ರವು ಸೋಂಕು ತಗುಲಿದ ಗಿಡದ ಅವಶೇಷಗಳಲ್ಲಿ ಅಥವಾ ಸತ್ತ ಹಣ್ಣುಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ. ವಸಂತ ಋತುವಿನಲ್ಲಿ ಇದರ ಬೀಜಕಗಳು ಮಳೆ ಅಥವಾ ಗಾಳಿಯಿಂದ ಹರಡಿ ಅಕ್ಕಪಕ್ಕದ ರೆಂಬೆಗಳಲ್ಲಿ ಅಥವಾ ಗಿಡಗಳಲ್ಲಿ ಸೋಂಕಿಗೆ ಕಾರಣವಾಗುತ್ತದೆ. ಹೂವರಳುವ ಸಮಯ ಹಾಗೂ ಹಣ್ಣು ಬೆಳೆಯುವ ಸಮಯದಲ್ಲಿ ಸೋಂಕು ಎರಗುವ ಸಾಧ್ಯತೆ ಹೆಚ್ಚು. ಮುಳ್ಳುಗಳಿಂದ, ಕೀಟಗಳಿಂದ ಹಾಗೂ ಪ್ರಾಣಿಗಳಿಂದಾದ ಗಾಯಗಳಿಂದ ಸೋಂಕು ಎರಗಲು ಅನುಕೂಲ. ಆಗಾಗ ಬೀಳುವ ಮಳೆ, ಹೆಚ್ಚಿದ ತೇವಾಂಶ (50-80%) ಮತ್ತು 25-30°C ಯ ಉಷ್ಣಾಂಶ ಶಿಲೀಂಧ್ರದ ಜೀವನಚಕ್ರಕ್ಕೆ ಅನುಕೂಲಕರ. ಒಣ ಹವೆಯಲ್ಲಿ ಇದು ಸಂಪೂರ್ಣ ನಿಷ್ಕ್ರಿಯವಾಗಿರುತ್ತದೆ. ಸಣ್ಣ ಮಟ್ಟಿನ ಸೋಂಕು ಕೂಡ ಹಣ್ಣಿನ ಅಂದ ಕೆಡಿಸಬಹುದು ಹಾಗೂ ಅದರ ಬಾಳ್ವಿಕೆಯನ್ನು ಕಡಿಮೆಗೊಳಿಸಬಹುದು. ಮಾವು, ಸೀಬೆ ಮತ್ತು ಪಪಾಯ ಇತರ ಕೆಲವು ಆಶ್ರಯದಾತ ಸಸ್ಯಗಳು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ರೋಗಮುಕ್ತ ಬೀಜ/ಸಸಿಗಳನ್ನು ಪಡೆಯಿರಿ.
  • ರೋಗಕಾರಕದ ದಾಳಿಯನ್ನು ತಡೆದುಕೊಳ್ಳುವ ಪ್ರಭೇದಗಳನ್ನು ಬಳಸಿ.
  • ಗಾಳಿ ಚೆನ್ನಾಗಿ ಆಡುವಂತೆ ಗಿಡಗಳ ನಡುವೆ ಸಾಕಷ್ಟು ಅಂತರವಿಡಿ.
  • ನೀರು ಚೆನ್ನಾಗಿ ಹರಿದು ಹೋಗುವಂತೆ ನೋಡಿಕೊಳ್ಳಿ.
  • ಓವರ್ ಹೆಡ್ ನೀರಾವರಿ ಬೇಡ.
  • ಎಲೆಗಳು ತೆರೆದುಕೊಂಡ ಬಳಿಕ ಮತ್ತು ಹಿಂಗಾರು ಮಳೆ ನಿಂತ ನಂತರವೇ ಗೊಬ್ಬರ ಹಾಕಿ.
  • ಬೆಳೆಯ ಮೇಲೆ ಹೊಡೆತ ಬೀಳದಿರಲು ಗೊಬ್ಬರ ಸರಿಯಾಗಿ ಹಾಕಿ.
  • ಹೊಲದಲ್ಲಿ ಸ್ವಚ್ಛತೆ ಕಾಪಾಡಿ, ಕಳೆಯನ್ನು ಹತೋಟಿಯಲ್ಲಿಡಿ.
  • ಯಂತ್ರೋಪಕರಣಗಳಿಂದ ಗಿಡಗಳಿಗೆ ಗಾಯವಾಗದಂತೆ ನೋಡಿಕೊಳ್ಳಿ.
  • ಹೂವರಳುವ ಸಮಯದಲ್ಲಿ ಮತ್ತು ಹಣ್ಣು ಬೆಳೆಯುವ ಸಮಯದಲ್ಲಿ ಗಿಡಗಳಲ್ಲಿ ರೋಗಲಕ್ಷಣ ಇದೆಯೇ ಎಂದು ಪರಿಶೀಲಿಸಿ.
  • ಚಳಿಗಾಲದಲ್ಲಿ ಕಪಾತು ಮಾಡಿ.
  • ಉಪಕರಣಗಳನ್ನು ಸ್ವಚ್ಛ ಮಾಡಿ ರೋಗಕಾರಕಗಳಿಂದ ಮುಕ್ತಗೊಳಿಸಿ.
  • ಬೆಳೆಯುವ ಋತುವಿನಲ್ಲಿ ಹಾಗೂ ಎಲೆಯುದುರುವ ಸಮಯದಲ್ಲಿ ನೆಲಕ್ಕೆ ಬಿದ್ದ ಎಲೆ ಹಾಗೂ ಸೋಂಕು ತಗುಲಿದ ರೆಂಬೆ-ಕೊಂಬೆಗಳನ್ನು ಕೆದಕಿ ತೆಗೆದು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ