ಎಲೆಕೋಸು

ಕಾಂಡ ಕೊಳೆತ

Sclerotinia sclerotiorum

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಣ್ಣು, ಎಲೆ ಅಥವಾ ಎಲೆ ತೊಟ್ಟುಗಳಲ್ಲಿ ಚುಕ್ಕೆಗಳು.
  • ಬಿಳಿ, ಹತ್ತಿ ಅಚ್ಚಿನಿಂದ ಮುಚ್ಚಿದ ಅಗಲವಾದ ಕಲೆಗಳು.
  • ನಂತರ ಬೂದು ಅಥವಾ ಕಪ್ಪು ನರಹುಲಿ ತರಹದ ರಚನೆಗಳು.
  • ಕಾಂಡ ಮತ್ತು ಸಸ್ಯದ ಮೇಲಿನ ಭಾಗಗಳು ಸೊರಗುವುದು.

ಇವುಗಳಲ್ಲಿ ಸಹ ಕಾಣಬಹುದು

19 ಬೆಳೆಗಳು
ಹುರುಳಿ
ಹಾಗಲಕಾಯಿ
ಎಲೆಕೋಸು
ಕ್ಯಾನೋಲ
ಇನ್ನಷ್ಟು

ಎಲೆಕೋಸು

ರೋಗಲಕ್ಷಣಗಳು

ರೋಗಲಕ್ಷಣ ಪ್ರತಿ ಬೆಳೆಗೂ ಬದಲಾಗುತ್ತದೆಯಾದರೂ ಕೆಲವು ಸಾಮ್ಯತೆಗಳಿವೆ. ಆರಂಭದಲ್ಲಿ ಹಣ್ಣು, ಎಲೆ ಅಥವಾ ಎಲೆತೊಟ್ಟುಗಳಲ್ಲಿ ವಿವಿಧ ಆಕಾರದ ನೀರು ತುಂಬಿದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಅವುಗಳು ದೊಡ್ಡದಾಗುತ್ತಿದ್ದಂತೆ, ಪೀಡಿತ ಭಾಗಗಳು ಬಿಳಿಯ ಬಣ್ಣದ ಹತ್ತಿಯಂತಹ ಬೂಷ್ಟಿನಿಂದ ಆವೃತವಾಗುತ್ತವೆ, ನಂತರದ ಹಂತಗಳಲ್ಲಿ ಅಲ್ಲಲ್ಲಿ ಬೂದುಬಣ್ಣ ಅಥವಾ ಕಪ್ಪು ಬಣ್ಣದ ಸ್ಕ್ಲೆರೋಟಿಯಾ ಎಂದು ಕರೆಯಲಾಗುವ ಸಂತಾನೋತ್ಪತ್ತಿಗಿರುವ ರಚನೆಗಳು ಹರಡಿಕೊಳ್ಳುತ್ತವೆ. ಕಾಂಡಗಳಲ್ಲಿ ಮತ್ತು ಕಾಂಡಗಳ ತಳದಲ್ಲಿ ಒಣ ಗಾಯಗಳು ಆರೋಗ್ಯಕರ ಅಂಗಾಂಶಗಳಿಂದ ಭಿನ್ನವಾಗಿ ಮತ್ತು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಕೆಲವು ಪ್ರಭೇದಗಳಲ್ಲಿ ತಳದ ಕಿರೀಟದಲ್ಲಿ ಅವು ನಿರ್ದಿಷ್ಟವಾಗಿ ಗಮನ ಸೆಳೆಯುತ್ತವೆ. ನಂತರದ ಹಂತಗಳಲ್ಲಿ, ಶಿಲೀಂಧ್ರವು ಕಾಂಡವನ್ನು ಸುತ್ತಿಕೊಂಡು ಗಿಡದ ಮೇಲ್ಭಾಗಗಳು ಸೊರಗಿ, ಕಂದು ಬಣ್ಣಕ್ಕೆ ತಿರುಗಿ ಸಾಯುತ್ತವೆ. ಸ್ಕ್ಲೆರೋಟಿಯಾ ಕಾಂಡದ ಒಳಗೆ, ಸಸ್ಯ ಅಂಗಾಂಶದ ಸ್ಥಾನದಲ್ಲಿ ಬೆಳೆಯುತ್ತದೆ. ಇದರಿಂದ ಗಿಡವು ಸತ್ತು ನೆಲದತ್ತ ಬಾಗುತ್ತದೆ. ಸೋಂಕಿಗೊಳಗಾದ ಬೀಜಕೋಶಗಳು ಮತ್ತು ಬೀಜಗಳು ಮುರುಟಿ ಹೋಗಬಹುದು ಅಥವಾ ಅವುಗಳಲ್ಲಿ ಕಪ್ಪು ಶಿಲೀಂಧ್ರವು ಬೆಳೆಯಬಹುದು.

Recommendations

ಜೈವಿಕ ನಿಯಂತ್ರಣ

ಪರಾವಲಂಬಿ ಶಿಲೀಂಧ್ರವಾದ ಕೊನಿಯೊಥೈರಿಯಮ್ ಮಿನಿಟನ್ಸ್ ಅಥವಾ ಟ್ರೈಕೊಡರ್ಮಾ ಜಾತಿಯ ಶಿಲೀಂಧ್ರದ ಬೀಜಕಗಳಿಂದ ತಯಾರಿಸಿದ ಕಾಳುಗಳನ್ನು ಮಣ್ಣಿನಲ್ಲಿ ಬೆರೆಸುವುದರಿಂದ ಸ್ಕ್ಲೀರೋಟಿನಿಯಾ ಶಿಲೀಂಧ್ರವನ್ನು ಮತ್ತು ರೋಗವನ್ನು ಕಡಿಮೆ ಮಾಡಬಹುದಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ರೋಗ ಅತಿಯಾಗಿದ್ದರೆ ಮಾತ್ರ ಎಲೆಗಳ ಮೇಲೆ ಶಿಲೀಂಧ್ರನಾಶಕ ಉಪಯೋಗಿಸುವುದನ್ನು ಪರಿಗಣಿಸಿ. ಚಿಕಿತ್ಸೆಗಳು ಗಿಡದಿಂದ ಗಿಡಕ್ಕೆ ಬದಲಾಗುತ್ತವೆ. ಹಾಗೆಯೇ ರೋಗ ಯಾವ ಹಂತದಲ್ಲಿದೆ ಎನ್ನುವುದರ ಮೇಲೆಯೂ ಅವಲಂಬಿಸಿದೆ. ಎಲೆಕೋಸು, ಟೊಮ್ಯಾಟೊ ಮತ್ತು ಹುರುಳಿಯಲ್ಲಿ ಸ್ಕ್ಲೀರೋಟಿನಿಯಾ ರೋಗಗಳನ್ನು ನಿಯಂತ್ರಿಸುವುದು ಕಷ್ಟಕರ. ಆದಾಗ್ಯೂ, ಇಪೊರೊಡಿನ್ ಅಥವಾ ತಾಮ್ರ ಆಕ್ಸಿಕ್ಲೋರೈಡ್ (3 ಗ್ರಾಂ / ಲೀ ನೀರು) ಆಧರಿಸಿದ ಶಿಲೀಂಧ್ರನಾಶಕಗಳು ಲೆಟಿಸ್ ಮತ್ತು ಕಡಲೆಕಾಯಿಯ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನು ನೀಡುತ್ತವೆ. ಇದರಲ್ಲಿ ಕೆಲವು ಉತ್ಪನ್ನಗಳಿಗೆ ಶಿಲೀಂಧ್ರವು ಪ್ರತಿರೋಧ ಬೆಳೆಸಿಕೊಂಡಿದೆ ಎನ್ನಲಾಗಿದೆ.

ಅದಕ್ಕೆ ಏನು ಕಾರಣ

ಮಣ್ಣಿನಲ್ಲಿ ಹರಡುವ ಶಿಲೀಂಧ್ರವಾದ ಸ್ಕ್ಲೆರೋಟಿನಿಯ ಸ್ಕ್ಲೆರೊಟೋರಿಯಮ್ನಿಂದ ರೋಗಲಕ್ಷಣಗಳು ಉಂಟಾಗುತ್ತವೆ, ಇದು ಸಸ್ಯದ ಉಳಿಕೆಗಳಲ್ಲಿ ಅಥವಾ ಮಣ್ಣಿನಲ್ಲಿ ದೀರ್ಘಕಾಲದವರೆಗೆ ಬದುಕಬಲ್ಲದು. ಅದರ ಜೀವನ ಚಕ್ರದ ಹೆಚ್ಚಿನ ಭಾಗವು ಮಣ್ಣಿನಲ್ಲಿ ನಡೆಯುತ್ತದೆ. ಮಣ್ಣಿಗೆ ತಾಕಿಕೊಂಡ ಭಾಗಗಳಲ್ಲಿ ರೋಗ ಲಕ್ಷಣ ಮೊದಲು ಕಾಣಿಸಿಕೊಳ್ಳುವುದು ಏಕೆಂಬುದನ್ನು ಇದು ವಿವರಿಸುತ್ತದೆ. ಪರಿಸ್ಥಿತಿ ಅನುಕೂಲಕರವಾದಾಗ, ಸಾವಯವ ವಸ್ತುಗಳ ಮೇಲೆ ಬೆಳವಣಿಗೆಯನ್ನು ಪುನರಾರಂಭಿಸಿ, ಕೆಲವೊಮ್ಮೆ ಸಸ್ಯ ಅಂಗಾಂಶಗಳನ್ನು ಆಕ್ರಮಿಸಿ ಬೆಳೆಯುತ್ತದೆ. ಅವು ಗಿಡದ ಎಲ್ಲ ಭಾಗಗಳನ್ನು ಆಕ್ರಮಿಸಿಕೊಳ್ಳುವಾಗ, ಬೀಜದ ಹೊರಪದರ ಅಥವಾ ಬೀಜದ ಒಳಗೂ ಸಹ ರೋಗಕಾರಕ ಅಂಶ ಹಬ್ಬಬಹುದು. ಗಿಡದಲ್ಲಿ ಉತ್ಪತ್ತಿಯಾದ ಬೀಜಕಗಳ ಹೊಸ ಗುಂಪು ಗಾಳಿಯಲ್ಲಿ ಹರಡುತ್ತದೆ. ಗಿಡಗಳ ಮೇಲ್ಛಾವಣಿಯ ಕೆಳಗಿನ ತೇವಭರಿತ ವಾತಾವರಣವು ಬೀಜಕಗಳು ರೆಂಬೆಗೆ ಹರಡಲು ಅನುಕೂಲಕಾರಿಯಾಗಿದೆ. ತಾಪಮಾನ 15 ರಿಂದ 24°C ಒಳಗಿದ್ದು, ಎಲೆಯು ಹಲವಾರು ಗಂಟೆಗಳ ಕಾಲ ಒದ್ದೆಯಿದ್ದಾಗ ರೋಗ ತಗುಲುತ್ತದೆ. ಗಿಡದ ಹೊರಗೆ ಉತ್ಪತ್ತಿಯಾಗುವ ಪೋಷಕಾಂಶಗಳು ಕೂಡ ಶಿಲೀಂಧ್ರದ ಬೆಳವಣಿಗೆಗೆ ಪೂರಕವಾಗಿದೆ. ಈ ಶಿಲೀಂಧ್ರವು ಹುರುಳಿ, ಎಲೆಕೋಸು, ಕ್ಯಾರೆಟ್ ಮತ್ತು ಕ್ಯಾನೋಲಗಳಂತಹ ಅನೇಕ ಗಿಡಗಳಲ್ಲಿ ಆಶ್ರಯ ಪಡೆದು ರೋಗಕ್ಕೆ ಕಾರಣವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲದಿಂದ ಆರೋಗ್ಯಕರ ಬೀಜಗಳನ್ನು ಬಳಸಿ.
  • ಈ ಬೆಳೆಯಲ್ಲಿ ನಿರೋಧಕ ಅಥವಾ ಹೆಚ್ಚು ಸಹಿಷ್ಣು ಪ್ರಭೇದ ಲಭ್ಯವಿದ್ದರೆ ಅದನ್ನು ಆರಿಸಿಕೊಳ್ಳಿ.
  • ಹಿಂದೆ ರೋಗ ಹಬ್ಬಿರುವ ಭೂಮಿಯಲ್ಲಿ ಬಿತ್ತನೆ ಮಾಡಬೇಡಿ.
  • ಸಾಲುಗಳ ನಡುವೆ ಸಾಕಷ್ಟು ಅಂತರ ಬಿಟ್ಟು ಗಾಳಿಯಾಡಲು ಅವಕಾಶ ಕೊಡಿ.
  • ಗಿಡಗಳಿಗೆ ಆಧಾರವಾಗಿ ತಂತಿ ಅಥವಾ ಗೂಟವನ್ನು ಬಳಸಿ.
  • ರೋಗದ ಕುರುಹಿಗಾಗಿ ತೋಟದ ಮೇಲ್ವಿಚಾರಣೆ ಮಾಡಿ.
  • ತೋಟ ಮತ್ತು ತೋಟದ ಸುತ್ತ ಕಳೆಯನ್ನು ನಿಯಂತ್ರಿಸಿ.
  • ಸೋಂಕಿತ ರೆಂಬೆಗಳನ್ನು ಅಥವಾ ಇತರೆ ಭಾಗಗಳನ್ನು ಕತ್ತರಿಸಿ.
  • ಬೆಳವಣಿಗೆಯ ಕೊನೆಯ ಹಂತದಲ್ಲಿ ಅತಿಯಾಗಿ ಗೊಬ್ಬರ ಬಳಸಬೇಡಿ.
  • ಗಿಡದ ಬೆಳವಣಿಗೆಯ ಕೊನೆಯ ಹಂತಗಳಲ್ಲಿ ಅತಿಯಾಗೆ ನೀರಾವರಿ ಮಾಡಬೇಡಿ.
  • ಉಳುಮೆ ಮಾಡದ ಭೂಮಿಯಲ್ಲಿ ಈ ರೋಗ ಬರುವ ಸಾಧ್ಯತೆ ಕಡಿಮೆ, ಹಾಗಾಗಿ ನೆಲವನ್ನು ಉಳಬೇಡಿ.
  • ಈ ರೋಗವನ್ನು ತಡೆದುಕೊಳ್ಳುವ ಬೆಳಗಳ ಜೊತೆ ಸರದಿ ಬೆಳೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ