ದ್ರಾಕ್ಷಿ

ದ್ರಾಕ್ಷಿಯ ಡೌನಿ ಮಿಲ್ಡ್ಯೂ

Plasmopara viticola

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸಾಮಾನ್ಯವಾಗಿ ಕಂದುಬಣ್ಣದ ಹೊರ ಉಂಗುರ ಹೊಂದಿರುವ ಹಳದಿ ಮಿಶ್ರಿತ ಹಸಿರು ಜಿಡ್ಡಿನ ಕಲೆಗಳು ಎಲೆಯ ಮೇಲ್ಮೈ ಮೇಲೆ ಕಾಣಿಸಿಕೊಳ್ಳುತ್ತವೆ.
  • ಇವುಗಳು ಕಂದು ಬಣ್ಣದ ಅನಿಯಮಿತ ತೇಪೆಗಳಾಗಿ ಬೆಳೆಯುತ್ತವೆ.
  • ಬಿಳಿಯಿಂದ ಕಂದುಬಣ್ಣದ ಹತ್ತಿಯ ಪದರದಂತಹ ಬಿಳಿ ತೇಪೆಗಳು ಈ ಕಲೆಗಳ ಕೆಳಗೆ ಬೆಳೆಯುತ್ತವೆ.
  • ಚಿಗುರುಗಳು, ಬಳ್ಳಿಯ ಕುಡಿಗಳು ಮತ್ತು ಹೂಗೊಂಚಲುಗಳ ಮೇಲೂ ಪರಿಣಾಮವಾಗಬಹುದು.
  • ಕುಂಠಿತಗೊಂಡ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಸಾಮಾನ್ಯವಾಗಿ ಸುತ್ತಲೂ ಕಂದುಬಣ್ಣದ ಉಂಗುರವಿರುವ, ಹಳದಿ ಮಿಶ್ರಿತ ಹಸಿರು ಬಣ್ಣದ ಜಿಡ್ಡಿರುವ ಕಲೆಗಳು ಎಳೆಯ ಎಲೆಗಳ ಮೇಲ್ಮೈ ಮೇಲೆ ಕಾಣಿಸಿಕೊಳ್ಳುತ್ತವೆ. ರೋಗವು ಹೆಚ್ಚಾದಂತೆ, ಈ ಕಲೆಗಳು ದೊಡ್ಡದಾಗಿ ಹಾನಿಗೀಡಾದ ಪ್ರದೇಶಗಳ ಮಧ್ಯಭಾಗದಲ್ಲಿ ಒಣಗಿದಂತಾಗಿ, ವಿವಿಧ ಛಾಯೆಗಳ ಕಂದುಬಣ್ಣದ ಅನಿಯಮಿತ ತೇಪೆಗಳು ರೂಪುಗೊಳ್ಳುತ್ತವೆ. ಹಲವು ದಿನಗಳ ಬೆಚ್ಚಗಿನ ಆರ್ದ್ರ ರಾತ್ರಿಯ ನಂತರ, ದಟ್ಟವಾದ ಬಿಳಿಯಿಂದ ಕಂದುಬಣ್ಣದ ಹತ್ತಿಯಂತಹ ಪದರ ಕಲೆಗಳ ಕೆಳಗೆ ಬೆಳೆಯುತ್ತದೆ. ಋತುವಿನ ನಂತರದ ಅವಧಿಯಲ್ಲಿ ಸೋಂಕು ಬೆಳೆದ ಎಲೆಗಳಿಗೆ ತಗುಲಿದರೆ ಅದು ಅಂತರ ನಾಳ ಕ್ಲೋರೋಸಿಸ್ ಗೆ ಕಾರಣವಾಗುತ್ತದೆ ಮತ್ತು ನಿಧಾನವಾಗಿ ಕೆಂಪು ಮಿಶ್ರಿತ ಕಂದುಬಣ್ಣದ ಮೊಸಾಯಿಕ್ ರೀತಿಯ ರಚನೆಗಳನ್ನು ರೂಪಿಸುತ್ತವೆ. ವಿಶಿಷ್ಟ ಜಿಡ್ಡಿನ ಕಂದು ಪ್ರದೇಶಗಳು ಮತ್ತು ಶಿಲೀಂಧ್ರದ ಬೆಳವಣಿಗೆ, ಕುಡಿಗಳಲ್ಲಿ, ಕುಡಿ ಬಳ್ಳಿಗಳಲ್ಲಿ ಮತ್ತು ಹೂಗೊಂಚಲುಗಳಲ್ಲೂ ಕಂಡುಬರಬಹುದು. ಎಲೆ ಉದುರುವುದು ಮತ್ತು ಹೊಸ ಚಿಗುರುಗಳ ಹಾಗೂ ಹೂವುಗಳ ಕುಬ್ಜತೆ ಅಥವಾ ಸಾವು ಕುಂಠಿತ ಬೆಳವಣೆಗೆಗೆ ಮತ್ತು ಇಳುವರಿ ಇಳಿಕೆಗೆ ಕಾರಣವಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸಸ್ಯಗಳ ಸೋಂಕನ್ನು ತಪ್ಪಿಸಲು ಸಾವಯವ ಸೋಂಕು-ಪೂರ್ವ ಶಿಲೀಂಧ್ರನಾಶಕಗಳನ್ನು ಬಳಸಬಹುದು. ಬೋರ್ಡೆಕ್ಸ್ ಮಿಶ್ರಣದಂತಹ ತಾಮ್ರ ಆಧಾರಿತ ಶಿಲೀಂಧ್ರನಾಶಕಗಳು ಇದರಲ್ಲಿ ಸೇರಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳ ಒಟ್ಟಾಗಿರುವ ಸಮಗ್ರವಾದ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ರಕ್ಷಕ ಶಿಲೀಂಧ್ರನಾಶಕಗಳು ಸಸ್ಯಗಳ ಸೋಂಕನ್ನು ತಡೆಗಟ್ಟಲು ಸಹಾಯ ಮಾಡಬಹುದು. ಆದರೆ, ಅವುಗಳನ್ನು ಎಲೆಗಳ ಕೆಳಭಾಗಕ್ಕೆ ಸರಿಯಾಗಿ ಸಿಂಪಡಿಸಬೇಕು. ಬೋರ್ಡೆಕ್ಸ್ ಮಿಶ್ರಣ ಮತ್ತು ಡೈಥಿಯೋಕಾರ್ಬಮೇಟ್ಸ್ ನಂತಹ ತಾಮ್ರ-ಆಧಾರಿತ ಶಿಲೀಂಧ್ರನಾಶಕಗಳನ್ನು ಬಳಸಬಹುದು. ಸೋಂಕು ತಗುಲಿದ ನಂತರ ಹಾಕುವ ಶಿಲೀಂಧ್ರನಾಶಕವನ್ನು ಮೊದಲ ಲಕ್ಷಣಗಳು ಕಂಡುಬಂದ ತಕ್ಷಣವೇ ಹಾಕಬೇಕು. ಸಾಮಾನ್ಯವಾಗಿ ಬಳಸಲಾಗುವ ಸೋಂಕು-ನಂತರದ ಶಿಲೀಂಧ್ರನಾಶಕಗಳಲ್ಲಿ ಫೋಸೆಟಿಲ್ -ಅಲ್ಯೂಮಿನಿಯಂ ಮತ್ತು ಫಿನೈಲಮೈಡ್ಸ್ ಗಳು ಸೇರಿವೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಶಿಲೀಂಧ್ರವಾದ ಪ್ಲಾಸ್ಮೋಪಾರಾ ವಿಟಿಕೋಲಾದಿಂದ ಉಂಟಾಗುತ್ತದೆ. 10°C ಗಿಂತ ಹೆಚ್ಚು ತಾಪಮಾನವಿರುವ, ಬೇಸಿಗೆ ಮತ್ತು ವಸಂತದಲ್ಲಿ ಆಗಾಗ್ಗೆ ಮಳೆಯಾಗುವ ವೈನ್ ಉತ್ಪಾದಿಸುವ ಪ್ರದೇಶಗಳಲ್ಲಿ ಇದು ಅತೀ ವಿನಾಶಕಾರಿ ಎಂದು ಭಾವಿಸಲಾಗಿದೆ. ಶಿಲೀಂಧ್ರವು ಮಣ್ಣಿನಲ್ಲಿರುವ ಸೋಂಕಿತ ಸಸ್ಯ ಉಳಿಕೆಗಳಲ್ಲಿ ಅಥವಾ ಸೋಂಕಿತ ಚಿಗುರುಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ. ಗಾಳಿ ಮತ್ತು ಮಳೆಯ ಹನಿಗಳು ವಸಂತಕಾಲದಲ್ಲಿ ಬೀಜಕಗಳನ್ನು ಹರಡುತ್ತವೆ. ಬೀಜಕಗಳು ಮೊಳಕೆಯೊಡೆದು ಬಂದ ರಚನೆಗಳು ನಿಧಾನವಾಗಿ ಎಲೆಗಳ ಕೆಳಭಾಗದಲ್ಲಿರುವ ರಂಧ್ರಗಳ ಮೂಲಕ ಎಲೆಯನ್ನು ಪ್ರವೇಶಿಸುತ್ತವೆ. ನಂತರ ಇದು ಅಂಗಾಂಶಗಳ ಮೂಲಕ ಹರಡಲು ಆರಂಭಿಸುತ್ತದೆ. ಅಂತಿಮವಾಗಿ ಒಳಗಿನ ಅಂಗಾಂಶಗಳನ್ನು ಮೀರಿ, ಹೊರಗೆ ವಿಶಿಷ್ಟ ಮಿಲ್ ಡ್ಯೂ ಪದರವನ್ನು ರೂಪಿಸುತ್ತದೆ. ಶಿಲೀಂಧ್ರವು 13 ರಿಂದ 30 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಬೆಳೆಯುತ್ತದೆ. ಹಲವಾರು ಬೆಚ್ಚಗಿನ, ಆರ್ದ್ರ ರಾತ್ರಿಗಳ ನಂತರ, ತಾಪಮಾನ 18 ರಿಂದ 25 °C ಇದ್ದಾಗ ಅತ್ಯುತ್ತಮವಾಗಿ ಬೆಳೆಯುತ್ತವೆ.


ಮುಂಜಾಗ್ರತಾ ಕ್ರಮಗಳು

  • ಮಣ್ಣಿನಲ್ಲಿ ಚೆನ್ನಾಗಿ ನೀರು ಬಸಿದುಹೋಗುತ್ತದೆ ಎಂದು ಖಚಿತಪಡಿಸಿಕೊಳ್ಳಿ.
  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಸೂರ್ಯನ ಕಿರಣಗಳು ಚೆನ್ನಾಗಿ ಬೀಳುವ ಪ್ರದೇಶಗಳಲ್ಲಿ ಗಿಡ ನೆಡಿ ಮತ್ತು ಸರಿಯಾದ ದಿಕ್ಕನ್ನು ಆರಿಸಿ.
  • ಬಳ್ಳಿಗಳ ನಡುವೆ ಉತ್ತಮ ಅಂತರ ಕಾಯ್ದುಕೊಳ್ಳಿ ಮತ್ತು ಚೆನ್ನಾಗಿ ಗಾಳಿಯಾಡುವಂತೆ ನೋಡಿಕೊಳ್ಳಿ.
  • ಬಳ್ಳಿಗಳನ್ನು ನೆಲದಿಂದ ಮೇಲೆ ಇರಿಸಿ ಮತ್ತು ಸರಿಯಾಗಿ ಕಟ್ಟಿ.
  • ಜಮೀನಿನಲ್ಲಿ ಮತ್ತು ಅದರ ಸುತ್ತಲೂ ಕಳೆಗಳನ್ನು ನಿಯಂತ್ರಿಸಿ.
  • ತೋಟದಿಂದ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ.
  • ಉಪಕರಣಗಳು ಮತ್ತು ಸಲಕರಣೆಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ.
  • ಸೋಂಕಿತ ಮಣ್ಣು ಮತ್ತು ಸಸ್ಯ ವಸ್ತುಗಳ ವಿತರಣೆಯನ್ನು ತಪ್ಪಿಸಿ.
  • ಸಸ್ಯದ ಚಟುವಟಿಕೆ ಉತ್ತಮವಾಗಿರಲು ಸಮತೋಲಿತ ರಸಗೊಬ್ಬರ ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ