ಮಾವು

ಮಾವಿನ ಜಿಗಿ ಹುಳು

Idioscopus spp.

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳು, ಹೂವು ಮತ್ತು ಕೊಂಬೆಗಳು ಕಂದು ಬಣ್ಣಕ್ಕೆ ತಿರುಗಿ ಒಣಗುತ್ತವೆ.
  • ಜಿಗಿಹುಳುಗಳು ಸಿಹಿಅಂಟನ್ನು ಉತ್ಪಾದಿಸುತ್ತವೆ.
  • ಜಿಗಿಹುಳುಗಳು ಚಿನ್ನ ಅಥವಾ ಗಾಢ ಕಂದು ಬಣ್ಣದಲ್ಲಿದ್ದು, ಅಗಲವಾದ, ದುಂಡಗಿನ ತಲೆ ಮತ್ತು ಗೋಳಾಕಾರದ ಕಣ್ಣುಗಳನ್ನು ಹೊಂದಿರುವ ಬೆಣೆ ತರಹದ ಆಕಾರದಲ್ಲಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಇಡಿಯೊಸ್ಕೋಪಸ್ ಪ್ರಭೇದದ ಮರಿಹುಳಗಳು ಮತ್ತು ಪ್ರೌಢ ಕೀಟಗಳು ಫ್ಲೋಯೆಮ್ಮಿನ ರಸವನ್ನು ತೊಗಟೆ, ಹೂಗೊಂಚಲುಗಳು, ಮೃದು ಎಲೆ ಮತ್ತು ಹಣ್ಣುಗಳಿಂದ ಹೀರುತ್ತವೆ. ಸೋಂಕಿತ ಗಿಡದ ಅಂಗಾಂಶವು ಕಂದು ಬಣ್ಣಕ್ಕೆ ತಿರುಗಿ ವಿರೂಪಗೊಂಡು ಒಣಗುತ್ತದೆ. ಎಳೆಯ ಹೂವುಗಳು ಬೆಳೆಯಲು ಸಾಧ್ಯವಾಗುವುದಿಲ್ಲವಾದ್ದರಿಂದ ಹಣ್ಣು ಕಟ್ಟುವುದು ಮತ್ತು ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಮಾವಿನ ಮರಗಳನ್ನು ತಿನ್ನುವಾಗ, ಜಿಗಿ ಹುಳಗಳು ವಿಸರ್ಜಿಸುವ ಸಿಹಿ ದ್ರವವು ಇತರ ಕೀಟಗಳನ್ನು ಆಕರ್ಷಿಸುತ್ತದೆ ಮತ್ತು ಬೂದಿಯಂತಹ ಬೂಷ್ಟಿನ ಬೆಳವಣಿಗೆಗೆ ಅನುಕೂಲಕರ ಮಾಧ್ಯಮವಾಗಿ ವರ್ತಿಸುತ್ತದೆ. ಎಲೆಗಳ ಮೇಲೆ ಶಿಲೀಂಧ್ರಗಳ ಬೆಳವಣಿಗೆಯು ದ್ಯುತಿಸಂಶ್ಲೇಷಣೆಯ ಮೇಲೆ ಪರಿಣಾಮ ಬೀರುತ್ತದೆ, ಮರದ ಕಸುವಿನ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮರದ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ಜಿಗಿ ಹುಳಗಳು ತಮ್ಮ ಮೊಟ್ಟೆಗಳನ್ನು ಮಾವಿನ ಮರಗಳ ಎಲೆಗಳೊಳಗೆ ಮತ್ತು ಹೂವಿರುವ ಕಾಂಡಗಳೊಳಗೆ ಇಡುತ್ತವೆ, ಇದು ಅಂಗಾಂಶಗಳಿಗೆ ಹಾನಿಯನ್ನು ಉಂಟುಮಾಡಬಹುದು. ಜಿಗಿಹುಳವು ಬಹಳ ಹಾನಿಯುಂಟು ಮಾಡಬಹುದು, 50% ನಷ್ಟು ಬೆಳೆ ನಷ್ಟವನ್ನು ಉಂಟುಮಾಡಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮಲ್ಲಡಾ ಬೊನಿನೆನ್ಸಿಸ್ ಮತ್ತು ಕ್ರಿಸೊಪಾ ಲ್ಯಾಸಿಪೆರ್ಡಾ ಮತ್ತು ಮೊಟ್ಟೆಯನ್ನವಲಂಬಿಸುವ ಪರಾವಲಂಬಿ ಪೊಲಿನೇಮಾ sp. ಗಳಂತಹ ಜೈವಿಕ ನಿಯಂತ್ರಕಗಳು ಜಿಗಿಹುಳಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಪರ್ಯಾಯವಾಗಿ, ಬಾವೇರಿಯಾ ಬಾಸ್ಸಿನಾ ಅಥವಾ ಮೆಟಾರಿಝಿಯಮ್ ಅನಿಸೊಪ್ಲಿಯಾ ಎಂಬ ಶಿಲೀಂಧ್ರಗಳನ್ನು ಹೊಂದಿರುವ ತೈಲ-ಆಧಾರಿತ ಸಿಂಪಡಣೆಗಳಿಂದ ಸೋಂಕಿತ ಮಾವಿನ ಮರಗಳಿಗೆ ಚಿಕಿತ್ಸೆ ಮಾಡಬಹುದು. ವಾರಕ್ಕೆ 2-3 ಬಾರಿ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗಿದೆ. ಬೇವಿನ ತೈಲವನ್ನು (3%) ಆಧರಿಸಿದ ದ್ರವೌಷಧಗಳು ಇಡಿಯೊಸ್ಕೊಪಸ್ spp. ಯ ಸಂಖ್ಯೆಯನ್ನು 60% ವರೆಗೆ ಕಡಿಮೆ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಇಮಿಡಾಕ್ಲೋಪ್ರಿಡ್ (0.3%), ಎಂಡೋಸಲ್ಫಾನ್ (0.5%) ಮತ್ತು ಸೈಪರ್ಮೆಥ್ರಿನ್ (0.4%) ಹೊಂದಿರುವ ಸಿಂಪಡಣೆಗಳನ್ನು ಬಳಸಿ. ಇವುಗಳು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ. ಡೈಮೆಥೊಯೇಟ್ ಅನ್ನು ಹೊಂದಿರುವ ಕೀಟನಾಶಕಗಳನ್ನು ಸಿಂಪಡಿಸಬಹುದು ಅಥವಾ ಕಾಂಡದೊಳಗೆ ಚುಚ್ಚಬಹುದು. ಹೂಬಿಡುವ ಮುನ್ನ, 7 ದಿನಗಳ ಅಂತರ ಬಿಟ್ಟು ಎರಡು ಬಾರಿ ಸಿಂಪಡಿಸುವುದನ್ನು ಶಿಫಾರಸು ಮಾಡಲಾಗುತ್ತದೆ, ಇದರಿಂದಾಗಿ ಪರಾಗಸ್ಪರ್ಶಕಗಳ ಮೇಲೆ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಬಹುದು.

ಅದಕ್ಕೆ ಏನು ಕಾರಣ

ಜಿಗಿಹುಳಗಳು ಸಾಮಾನ್ಯವಾಗಿ ಬೆಣೆಯಾಕಾರದಲ್ಲಿರುತ್ತವೆ. ಅಗಲವಾದ ದುಂಡು ತಲೆ, ಮತ್ತು ಗೋಳಾಕಾರದ ಕಣ್ಣುಗಳನ್ನು ಹೊಂದಿರುತ್ತವೆ. ಪ್ರೌಢ ಕೀಟವು ಬಂಗಾರದ ಬಣ್ಣ ಅಥವಾ ಗಾಢ ಕಂದು ಬಣ್ಣದಲ್ಲಿದ್ದು, ಸುಮಾರು 4-5 ಮಿಮೀ ಉದ್ದಕ್ಕಿರುತ್ತದೆ. ಮರಿಹುಳಗಳಿಗೆ ಕೆಂಪು ಕಣ್ಣುಗಳಿದ್ದು, ದೇಹವು ಹಳದಿ-ಕಂದು ಬಣ್ಣದಲ್ಲಿರುತ್ತದೆ. ಜಿಗಿಹುಳಗಳು ಪ್ರಭೇದಕ್ಕನುಗುಣವಾಗಿ ಹೂವು, ಎಲೆಯ ನಾಳಗಳು ಮತ್ತು ಎಲೆಯ ಮೇಲ್ಪದರದಲ್ಲಿ ಪ್ರತ್ಯೇಕವಾಗಿ ಮೊಟ್ಟೆಗಳನ್ನು ಇಡುತ್ತವೆ. 100 ರಿಂದ 200 ಮೊಟ್ಟೆಗಳವರೆಗೆ ಇಡಬಹುದು. ಹೆಚ್ಚಿನ ತೇವಾಂಶದೊಂದಿಗೆ ನೆರಳಿರುವ ಪರಿಸರವು ಅನುಕೂಲಕರ. ಪ್ರೌಢ ಜಿಗಿಹುಳಗಳು ಹಾರುವುದರಲ್ಲಿ ಚುರುಕಾಗಿರುತ್ತವೆ ಹಾಗೂ ಚಿಕ್ಕ ಪ್ರದೇಶದಲ್ಲಿ ವೇಗವಾಗಿ ಹರಡಿಕೊಳ್ಳುತ್ತವೆ. ಸಸಿಗಳ ಸಾಗಣೆಯಿಂದಾಗಿ ಇತರ ತೋಟಗಳು ಅಥವಾ ಪ್ರದೇಶಗಳಿಗೆ ಕೀಟಗಳು ಹರಡಬಹುದು. ಹಳೆಯ, ನಿರ್ಲಕ್ಷ್ಯಕ್ಕೊಳಗಾದ ಅಥವಾ ಗಿಡಗಳು ಒತ್ತೊತ್ತಾಗಿರುವ ತೋಟಗಳು ಕೀಟಗಳು ಹೆಚ್ಚುವುದಕ್ಕೆ ಅನುಕೂಲಕರವಾದುವು.


ಮುಂಜಾಗ್ರತಾ ಕ್ರಮಗಳು

  • ನಾಟಿ ಮಾಡಿದಾಗ ಮರಗಳ ನಡುವೆ ಅಗಲವಾದ ಅಂತರವನ್ನು ಇರಿಸಿ.
  • ನಿಯಮಿತವಾಗಿ ಮರಿಹುಳಗಳು ಮತ್ತು ಇಡಿಯೊಸ್ಕೋಪಸ್ ಜಾತಿಯ ಪ್ರೌಢ ಕೀಟಗಳ ಇರುವಿಕೆಗೆ ಹೊಲದ ಮೇಲ್ವಿಚಾರಣೆ ಮಾಡಿ.
  • ಮಾವಿನ ಜಿಗಿಹುಳಗಳು ದಾಳಿಗೊಳಗಾಗುವ ಸಾಧ್ಯತೆ ಕಡಿಮೆ ಇರುವ ಪ್ರಭೇದಗಳನ್ನು ಆಯ್ಕೆ ಮಾಡಿ.
  • ತೋಟಗಳ ನಡುವೆ ಸೋಂಕಿತ ಮಾವಿನ ಗಿಡಗಳನ್ನು ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ