ಮಾವು

ಮಾವಿನ ಕಾಂಡ ಕೊರಕ

Batocera rufomaculata

ಕೀಟ

ಸಂಕ್ಷಿಪ್ತವಾಗಿ

  • ತೊಗಟೆಯಲ್ಲಿ ರಂಧ್ರಗಳು.
  • ದುರ್ಬಲ ಕೊಂಬೆಗಳು ಮುರಿಯಬಹುದು.
  • ಬಾಡಿದ ಮರಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಕೊಂಬೆಗಳ ತೊಗಟೆಯನ್ನು ಕಡಿದ ಗುರುತು ಮತ್ತು ಬೆಳೆಯುವ ತುದಿಗಳನ್ನು ಅಗಿಯಲಾಗಿರುತ್ತದೆ. ತೊಗಟೆಯ ತೇಪೆಗಳು ಬೇರ್ಪಡುತ್ತವೆ. ತೀವ್ರವಾದ ಮುತ್ತಿಕೊಳ್ಳುವಿಕೆಯ ಸಂದರ್ಭದಲ್ಲಿ ಮರವು ತುಂಬಾ ದುರ್ಬಲವಾಗುತ್ತದೆ. ಅದರ ಕೊಂಬೆಗಳು ಮುರಿಯಬಹುದು ಅಥವಾ ಮುಖ್ಯ ಕಾಂಡವು ಕುಸಿಯಬಹುದು. ಕೊಂಬೆಗಳು ಅಥವಾ ಸಂಪೂರ್ಣ ಮರವೂ ಸಹ ಒಣಗಿದಂತೆ ಕಾಣಿಸಬಹುದು. ತೊಗಟೆಯ ಬಿರುಕುಗಳಲ್ಲಿ ಅಥವಾ ಮರದ ಬುಡದಲ್ಲಿ ವಿಸರ್ಜಿತ ಮಲವನ್ನು ಕಾಣಬಹುದು. ಮರದ ತೊಗಟೆಯಲ್ಲಿನ ಲಾರ್ವಾ ನಿರ್ಗಮನದ ರಂಧ್ರಗಳು ಮುತ್ತಿಕೊಳ್ಳುವಿಕೆಯ ಸೂಚಕಗಳಾಗಿವೆ. ಎಲೆಗಳು ಮತ್ತು ಹಣ್ಣಿನ ಉತ್ಪಾದನೆಯು ಸಹ ಮುತ್ತಿಕೊಳ್ಳುವಿಕೆಯಿಂದ ಪ್ರಭಾವಿತವಾಗುತ್ತದೆ ಮತ್ತು ಇಳುವರಿ ನಷ್ಟಕ್ಕೆ ಕಾರಣವಾಗಬಹುದು. ಹೆಚ್ಚಿನ ಹಾನಿಯು ಲಾರ್ವಾಗಳಿಂದ ಉಂಟಾಗುತ್ತದೆ. ಅದು ಆರಂಭದಲ್ಲಿ ಮರದ ಸಬ್-ಕಾರ್ಟೆಕ್ಸ್‌ ಕೊರೆದು ನಂತರ ಮರದೊಳಗೆ ಆಳವಾಗಿ ಚಲಿಸುತ್ತದೆ. ವಯಸ್ಕ ಹುಳುಗಳು ಬೆಳೆಯುವ ಹಸಿರು ತುದಿಗಳನ್ನು ಮತ್ತು ಕೊಂಬೆಗಳ ತೊಗಟೆಗಳನ್ನು ಅಗಿಯುತ್ತವೆ. ಗ್ರಬ್ ಗಳು ಕಾಂಡ ಅಥವಾ ಕೊಂಬೆಗಳ ಮೇಲೆ ಮರದ ಒಳಭಾಗಕ್ಕೆ ಸುರಂಗಗಳನ್ನು ಮಾಡುತ್ತವೆ. ಮರದ ತಿರುಳಿನ ಭಾಗದಲ್ಲಿ ಗ್ರಬ್ ಗಳು ಅನಿಯಮಿತ ಸುರಂಗಗಳನ್ನು ಕೊರೆಯುತ್ತವೆ ಮತ್ತು ನಾಳೀಯ ಅಂಗಾಂಶಗಳನ್ನು ತಿನ್ನುತ್ತವೆ. ಇದರಿಂದ ಅಂಗಾಂಶಗಳಿಗೆ ಪೋಷಕಾಂಶ ಮತ್ತು ನೀರಿನ ಸಾಗಣಿಕೆಗೆ ಅಡ್ಡಿಯಾಗುತ್ತವೆ. ಆರಂಭಿಕ ಹಂತದಲ್ಲಿ ತುದಿಯ ಚಿಗುರಿನ ಒಣಗುವಿಕೆ. ಕೀಟಗಳ ವಿಸರ್ಜನೆ ಹಲವಾರು ಬಿಂದುಗಳಿಂದ ಹೊರಬರುತ್ತದೆ ಮತ್ತು ಕೆಲವೊಮ್ಮೆ ರಸವು ರಂಧ್ರಗಳಿಂದ ಹೊರಬರುತ್ತದೆ. ಎಳೆಯ ಸಸ್ಯಗಳಾಗಿದ್ದಲ್ಲಿ ಅಥವಾ ಒಂದೇ ಮರದಲ್ಲಿ ಅನೇಕ ಗ್ರಬ್‌ಗಳು ಇದ್ದಲ್ಲಿ ಕೊಂಬೆಗಳು ಅಥವಾ ಸಂಪೂರ್ಣ ಮರವು ಒಣಗುವುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮೆಟಾರೈಜಿಯಮ್ ಅನಿಸೊಪ್ಲಿಯಾ ಅಥವಾ ಬೀವೆರಿಯಾ ಬಾಸ್ಸಿಯಾನಾವನ್ನು ಕೀಟಗಳ ಸಂಖ್ಯೆಯನ್ನು ನಿರ್ವಹಿಸಲು ಬಳಸಬಹುದು.

ರಾಸಾಯನಿಕ ನಿಯಂತ್ರಣ

ರಾಸಾಯನಿಕ ನಿಯಂತ್ರಣ ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ವಯಸ್ಕ ಜೀರುಂಡೆಗಳು ಕಂಡುಬಂದಾಗ ಆರ್ಗನೊಫಾಸ್ಫೇಟ್‌ಗಳಂತಹ ಕೀಟನಾಶಕಗಳನ್ನು ಮುಖ್ಯ ಕಾಂಡ, ಕೊಂಬೆಗಳು ಮತ್ತು ತೆರೆದ ಬೇರುಗಳಿಗೆ ಹಾಕಬೇಕು. ಪ್ರವೇಶ ರಂಧ್ರಗಳನ್ನು ಸ್ವಚ್ಛಗೊಳಿಸಿ ಮತ್ತು ಅವುಗಳನ್ನು ಡಿಕ್ಲೋರ್ವೋಸ್ (0.05%) ಅಥವಾ ಕಾರ್ಬೋಫ್ಯೂರಾನ್ (ಒಂದು ರಂಧ್ರಕ್ಕೆ 5 ಗ್ರಾಂನಂತೆ 3ಜಿ) ದ್ರಾವಣದಲ್ಲಿ ನೆನೆಸಿದ ಹತ್ತಿ ಉಣ್ಣೆಯಿಂದ ತುಂಬಿಸಿ ಮತ್ತು ಅವುಗಳನ್ನು ಮಣ್ಣಿನಿಂದ ಮುಚ್ಚಿ. ತಮ್ಮ ಬಿಲಗಳಲ್ಲಿ ಅಡಗಿರುವ ಹಳೆಯ ಲಾರ್ವಾಗಳನ್ನು ಬಾಷ್ಪಶೀಲ ದ್ರವ ಅಥವಾ ಫ್ಯೂಮಿಗಂಟ್‌ನ ಚುಚ್ಚುಮದ್ದಿನ ಮೂಲಕ ಅಲ್ಲಿಯೇ ಕೊಲ್ಲಬಹುದು. ಕಾಂಡದ ಮೇಲೆ ನೆಲಮಟ್ಟದಿಂದ ಒಂದು ಮೀಟರ್ ಎತ್ತರದವರೆಗೆ ಬೋರ್ಡೆಕ್ಸೇ ಪೇಸ್ಟ್ ಅನ್ನು ಹಚ್ಚಿ. ಇದು ಮೊಟ್ಟೆ ಇಡುವುದನ್ನು ತಡೆಯುತ್ತದೆ. ಮೊನೊಕ್ರೊಟೊಫಾಸ್‌ (2.5ಸೆಂಮೀ/ಮರದಲ್ಲಿ 36 WSC 10ಮಿಲೀ) ಅನ್ನು ಹೀರಿಕೊಳ್ಳುವ ಹತ್ತಿಯಲ್ಲಿ ನೆನೆಸಿ ಅದರ ಪ್ಯಾಡಿಂಗ್ ಮಾಡಬಹುದು. ಕೀಟಗಳ ಬಾಧೆ ಹೆಚ್ಚಾಗಿದ್ದರೆ ಕಾಪರ್ ಆಕ್ಸಿಕ್ಲೋರೈಡ್ ಪೇಸ್ಟ್ ಅನ್ನು ಮರದ ಕಾಂಡದ ಮೇಲೆ ಹಚ್ಚಿ.

ಅದಕ್ಕೆ ಏನು ಕಾರಣ

ಬಾಟೊಸೆರಾ ರುಫೋಮಾಕುಲಾಟಾದ ಲಾರ್ವಾ ಮತ್ತು ವಯಸ್ಕ ಹಂತದಿಂದ ಹಾನಿ ಉಂಟಾಗುತ್ತದೆ. ಜೀರುಂಡೆಗಳು 25-55 ಮಿಮೀ ಉದ್ದವಿದ್ದು ದೇಹದಷ್ಟೇ ಉದ್ದದ ಆಂಟೆನಾಗಳಿದ್ದು ಇವು ನಿಶಾಚರಿಗಳಾಗಿವೆ. ಹೆಣ್ಣು ಜೀರುಂಡೆ ಹಾನಿಗೊಳಗಾದ ಅಥವಾ ಒತ್ತಡಕ್ಕೊಳಗಾದ ಮರಗಳ ತೊಗಟೆಯನ್ನು ಕತ್ತರಿಸಿ ಈ ಪ್ರದೇಶಗಳಲ್ಲಿ ತನ್ನ ಮೊಟ್ಟೆಗಳನ್ನು ಇಡುತ್ತದೆ. ಪರ್ಯಾಯವಾಗಿ ಮಣ್ಣಿನ ಸವಕಳಿಯಿಂದಾಗಿ ಹೊರಗೆ ತೆರೆದುಕೊಳ್ಳುವ ಬೇರುಗಳಲ್ಲಿಯೂ ಮೊಟ್ಟೆಗಳನ್ನು ಇಡುತ್ತದೆ. ಲಾರ್ವಾಗಳು ಮುಖ್ಯ ಕಾಂಡಗಳು, ದೊಡ್ಡ ಶಾಖೆಗಳು ಅಥವಾ ಹೊರಗೆ ಬಂದ ಬೇರುಗಳ ತೊಗಟೆಯ ಅಡಿಯಲ್ಲಿ ತಿನ್ನುತ್ತವೆ. ನಂತರದ ಲಾರ್ವಾ ಹಂತದಲ್ಲಿ ಅವರು ಮರದೊಳಗೆ ಆಳವಾಗಿ ಕೊರೆದು ಅಲ್ಲಿ ಕೋಶಾವಸ್ಥೆಯನ್ನು ಪ್ರವೇಶಿಸುತ್ತವೆ. ವಯಸ್ಕ ಹುಳುಗಳು ನಿರ್ಗಮನ ರಂಧ್ರದಿಂದ ಹೊರಬರುತ್ತವೆ ಮತ್ತು ಕೊಂಬೆಗಳ ತೊಗಟೆ ಮತ್ತು ಬೆಳೆಯುತ್ತಿರುವ ತುದಿಗಳನ್ನು ತಿನ್ನುತ್ತವೆ. ವಯಸ್ಕ ಹುಳುಗಳು3-5 ಸೆಂ.ಮೀ ಇದ್ದು, ಬೂದು ಮಿಶ್ರಿತ ಕಂದು ಬಣ್ಣ, ಎದೆಯ ಬದಿಗಳಲ್ಲಿ 2 ಕಿಡ್ನಿ ಆಕಾರದ ಕಿತ್ತಳೆ-ಹಳದಿ ಚುಕ್ಕೆಗಳನ್ನು ಹೊಂದಿರುತ್ತವೆ. ಸಂಪೂರ್ಣವಾಗಿ ಬೆಳೆದ ಲಾರ್ವಾಗಳು ಗಾಢ ಕಂದು ತಲೆಯೊಂದಿಗೆ ಕೆನೆ ಬಣ್ಣವನ್ನು ಹೊಂದಿರುತ್ತವೆ ಮತ್ತು 10 ಸೆಂ.ಮೀ ಉದ್ದವಿರುತ್ತವೆ. ಲಾರ್ವಾಗಳ ಬೆಳವಣಿಗೆಗೆ ಸಾಮಾನ್ಯವಾಗಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಲಾರ್ವಾಗಳು ಮರದ ತಿರುಳನ್ನು ಕೊರೆಯುತ್ತವೆ ಮತ್ತು ಅವುಗಳ ಗಾತ್ರದ ಕಾರಣದಿಂದಾಗಿ ದೊಡ್ಡ ಸುರಂಗಗಳು ಉಂಟಾಗಿ ಎಲೆಗಳು ಮತ್ತು ಹಣ್ಣಿನ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಕೋಶಾವಸ್ಥೆ ಕಾಂಡದೊಳಗೆ ಆಗುತ್ತದೆ ಮತ್ತು ಬೇಸಿಗೆಯ ಕೊನೆಯಲ್ಲಿ ವಯಸ್ಕ ಜೀರುಂಡೆಗಳು ಹೊರಹೊಮ್ಮುತ್ತವೆ. ಅವು ನಿಶಾಚರಿಗಳು. ಹಲವಾರು ತಿಂಗಳುಗಳವರೆಗೆ ಬದುಕಬಲ್ಲವು ಮತ್ತು ದೂರದವರೆಗೆ ಹಾರಬಲ್ಲವು. ಇದರಿಂದಾಗಿ ಇವುಗಳ ಪ್ರಸರಣ ಸುಲಭ. ಕೀಟವು ಒಂದೇ ವಾರ್ಷಿಕ ಪೀಳಿಗೆಯನ್ನು ಹೊಂದಿದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ತೊಗಟೆಯ ಪ್ರವೇಶ ರಂಧ್ರಗಳಲ್ಲಿ ಲಾರ್ವಾಗಳು ಮತ್ತು ಮೊಟ್ಟೆಗಳನ್ನು ನಾಶಮಾಡಲು ಚಾಕು ಅಥವಾ ತಂತಿಯ ತುಂಡನ್ನು ಬಳಸಿ.
  • ನಂತರ ರಂಧ್ರಗಳನ್ನು ಸೀಮೆಎಣ್ಣೆ, ಕಚ್ಚಾ ತೈಲ ಅಥವಾ ಫಾರ್ಮಾಲಿನ್‌ನಲ್ಲಿ ನೆನೆಸಿದ ಹತ್ತಿ ಉಣ್ಣೆಯಿಂದ ತುಂಬಿಸಬಹುದು.
  • ಇದರಿಂದ ಲಾರ್ವಾಗಳನ್ನು ಕೊಲ್ಲಲು ಸಾಧ್ಯವಾಗುತ್ತದೆ.
  • ತೀವ್ರವಾಗಿ ಪೀಡಿತವಾಗಿರುವ ಕೊಂಬೆಗಳನ್ನು ತೆಗೆದುಹಾಕಿ ಮತ್ತು ಹೆಚ್ಚು ಸೋಂಕಿತವಾಗಿರುವ ಮರಗಳನ್ನು ಕತ್ತರಿಸಿ.
  • ನಿಮ್ಮ ಹೊಲದಿಂದ ಮತ್ತು ಅದರ ಸುತ್ತಲೂ ಪರ್ಯಾಯ ಆತಿಥೇಯ ಸಸ್ಯಗಳನ್ನು ತೆಗೆದುಹಾಕಿ.
  • ಕಬ್ಬಿಣದ ಕೊಕ್ಕೆ ಅಥವಾ ತಂತಿಯಿಂದ ಪ್ರವೇಶ ರಂಧ್ರಗಳನ್ನು ಸ್ವಚ್ಛಗೊಳಿಸಿ ಮತ್ತು ಲಾರ್ವಾಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರುವ ಸೀಮೆಎಣ್ಣೆ, ಕಚ್ಚಾ ತೈಲ ಅಥವಾ ಫಾರ್ಮಾಲಿನ್‌ನಲ್ಲಿ ನೆನೆಸಿದ ಹತ್ತಿ ಉಣ್ಣೆಯಿಂದ ರಂಧ್ರಗಳನ್ನು ಮುಚ್ಚಿ.
  • ಇತರ ವಿಧಾನಗಳೆಂದರೆ ಸೋಂಕಿತ ಮರಗಳನ್ನು ಕತ್ತರಿಸುವುದು, ತೀವ್ರವಾಗಿ ಪೀಡಿತವಾಗಿರುವ ಕೊಂಬೆಗಳನ್ನು ಕತ್ತರಿಸುವುದು ಮತ್ತು ಪರ್ಯಾಯ ಅತಿಥೇಯ ಸಸ್ಯಗಳನ್ನು ತೆಗೆದು ಹಾಕುವುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ