ಹೆಲಿಕೋವರ್ಪಾ ಕ್ಯಾಟರ್ ಪಿಲ್ಲರ್ - ಹುಲ್ಲುಜೋಳ

ಹುಲ್ಲುಜೋಳಹುಲ್ಲುಜೋಳ

ಹೆಲಿಕೋವರ್ಪಾ ಕ್ಯಾಟರ್ ಪಿಲ್ಲರ್

Helicoverpa armigera


ಸಂಕ್ಷಿಪ್ತವಾಗಿ

 • ಹೂವುಗಳು, ಹಣ್ಣುಗಳು, ಬೀಜಕೋಶಗಳು, ಬೀಜಗಳು ಮತ್ತು ಎಲೆಗಳ ಮೇಲೆ, ಕೀಟಗಳು ತಿನ್ನುವುದರಿಂದ ಆಗಿರುವ ಹಾನಿಗಳು.
 • ಕೀಟ ಬಂದು ಹೋಗಿರುವ ರಂಧ್ರಗಳು ಮತ್ತು ವಿಸರ್ಜನೆ ಕರೆಗಳು.
 • ದ್ವಿತೀಯ ರೋಗಕಾರಕಗಳ ಬೆಳವಣಿಗೆಯಿಂದ ಅಂಗಾಂಶಗಳು ಮತ್ತು ಹಣ್ಣುಗಳ ಕೊಳೆಯುವಿಕೆಯುಂಟಾಗುತ್ತದೆ.

ರೋಗಲಕ್ಷಣಗಳು

ಬಿಳಿಯಿಂದ ಕಂದು ಬಣ್ಣದವರೆಗಿನ ಮೊಟ್ಟೆಗಳನ್ನು ಹೂವಿನ ರಚನೆಗಳು ಮತ್ತು ಮೇಲಿನ ಮೇಲಾವರಣದಲ್ಲಿ ಎಳೆಯ ಎಲೆಗಳ ಸುತ್ತ ಸಮೂಹಗಳಲ್ಲಿ ಕಾಣಬಹುದು. ಮರಿಹುಳುಗಳು ಯಾವುದೇ ಸಸ್ಯ ಅಂಗಾಂಶಗಳನ್ನು ತಿನ್ನುವುದರಿಂದಾದ ಹಾನಿಯನ್ನು ಕಾಣಬಹುದು. ಆದರೆ ಆಶ್ರಯದಾತ ಸಸ್ಯವನ್ನು ಅವಲಂಬಿಸಿ ಹೂಗಳು ಮತ್ತು ಬೀಜಗಳು / ತೆನೆಗಳು / ಹಣ್ಣುಗಳು / ಬೀಜಕೋಶಗಳನ್ನು ಆಕ್ರಮಿಸುವ ಸಾಧ್ಯತೆ ಹೆಚ್ಚು. ಎಳೆಯ ಮರಿಹುಳುಗಳು ಎಲೆಗಳು, ಬೆಳೆಯುವ ಬಿಂದುಗಳು ಅಥವಾ ಹಣ್ಣಿನ ರಚನೆಯನ್ನು ತುಂಡರಿಸುತ್ತವೆ. ಇದರಿಂದಾಗಿ ಸ್ವಲ್ಪ ಹಾನಿಯಾಗುತ್ತದೆ. ಬೆಳೆದ ಹುಳುಗಳು ಹೂವುಗಳು ಅಥವಾ ಎಳೆಯ ಬೀಜ /ತೆನೆ / ಹಣ್ಣು / ಬೀಜಕೋಶಗಳನ್ನು ಕೊರೆದು, ಒಳಗಿನಿಂದ ಅವುಗಳನ್ನು ಟೊಳ್ಳಾಗಿಸುತ್ತದೆ. ಬೀಜಗಳಿಗೆ ಹಾನಿ ಮಾಡಿ, ಅವುಗಳು ಮಾರುಕಟ್ಟೆಗೆ ಅನರ್ಹವಾಗುವಂತೆ ಮಾಡುತ್ತವೆ. ಹೆಚ್ಚಿನ ವಿಸರ್ಜನೆಗಳು ಆಹಾರ ರಂಧ್ರಗಳ ಸುತ್ತಲೂ ಗೋಚರಿಸುತ್ತವೆ. ಗಾಯಗಳ ಮೇಲೆ ದ್ವಿತೀಯ ರೋಗಕಾರಕಗಳ ಬೆಳವಣಿಗೆಯು, ಪೀಡಿತ ಅಂಗಾಂಶಗಳ ಕೊಳೆಯುವಿಕೆಗೆ ಕಾರಣವಾಗುತ್ತದೆ.

ಆಶ್ರಯದಾತ ಸಸ್ಯಗಳು

ಪ್ರಚೋದಕ

ಹೆಲಿಕೋವರ್ಪಾ ಆರ್ಮಿಗೆರಾದ ಕಂಬಳಿಹುಳುಗಳಿಂದಾಗಿ ಹಾನಿ ಉಂಟಾಗುತ್ತದೆ. ಇದು ಹಲವಾರು ಬೆಳೆಗಳಲ್ಲಿ ಸಾಮಾನ್ಯ ಕೀಟವಾಗಿದೆ. ಕೃಷಿಯಲ್ಲಿ ಅತ್ಯಂತ ವಿನಾಶಕಾರಿ ಕೀಟಗಳ ಪೈಕಿ ಎಚ್. ಆರ್ಮಿಗೆರಾ ಒಂದಾಗಿದೆ. ಪತಂಗಗಳು ಸಾಮಾನ್ಯವಾಗಿ ತಿಳಿ ಕಂದು ಬಣ್ಣವಿದ್ದು, ಅವುಗಳ ರೆಕ್ಕೆಗಳು ಸುಮಾರು 3 -4 ಮಿಮೀ ಉದ್ದವಿರುತ್ತವೆ. ಹಳದಿ, ಕಿತ್ತಳೆ ಅಥವಾ ಕಂದು ಬಣ್ಣದ ಮುಂಭಾಗದ ರೆಕ್ಕಗಳಿದ್ದು, ಅವುಗಳ ಮೇಲೆ ಗಾಢವಾದ ವಿನ್ಯಾಸಗಳಿರುತ್ತವೆ. ಹಿಂದಿನ ರೆಕ್ಕೆಗಳು ಬಿಳಿ ಬಣ್ಣದಲ್ಲಿದ್ದು, ಕಪ್ಪು ರಕ್ತನಾಳಗಳು ಇರುತ್ತವೆ ಮತ್ತು ಕೆಳಗಿನ ತುದಿಗಳಲ್ಲಿ ಗಾಢವಾದ ಉದ್ದವಾದ ಕಲೆ ಇರುತ್ತದೆ. ಹೆಣ್ಣು ಕೀಟಗಳು ಗೋಳಾಕಾರದ, ಬಿಳಿಯ ಮೊಟ್ಟೆಗಳನ್ನು ಒಂಟಿಯಾಗಿ ಅಥವಾ ಗುಂಪುಗಳಲ್ಲಿ ಹೂವುಗಳು ಅಥವಾ ಎಲೆಯ ಮೇಲ್ಮೈಗಳ ಮೇಲೆ ಇಡುತ್ತವೆ. ಮುಖ್ಯವಾಗಿ ಮೇಲಾವರಣದಲ್ಲಿಡುತ್ತವೆ. ಬೆಳವಣಿಗೆಯ ಹಂತದ ಆಧಾರದ ಮೇಲೆ ಮರಿಹುಳುಗಳು ಆಲಿವ್ ಹಸಿರಿನಿಂದ ಗಾಢ ಕೆಂಪು ಕಂದು ಬಣ್ಣ ಹೊಂದಿರುತ್ತವೆ. ಅವುಗಳ ದೇಹವು ಸಣ್ಣ ಕಪ್ಪು ಕಲೆಗಳಿಂದ ಮಚ್ಚೆ ಮಚ್ಚೆಯಾಗಿರುತ್ತದೆ ಮತ್ತು ಅವುಗಳು ಗಾಢ ಬಣ್ಣದ ತಲೆ ಹೊಂದಿರುತ್ತವೆ. ನಂತರದ, ಬೆಳವಣಿಗೆಯ ಹಂತಗಳಲ್ಲಿ, ಸಾಲುಗಳು ಮತ್ತು ಪಟ್ಟಿಗಳು ಅವುಗಳ ಹಿಂಭಾಗದಲ್ಲಿ ಮತ್ತು ಪಾರ್ಶ್ವದ ಉದ್ದಕ್ಕೂ ಬೆಳೆಯುತ್ತವೆ. ಅವು ಪ್ರೌಢಾವಸ್ಥೆಯನ್ನು ತಲುಪಿದಾಗ, ಮಣ್ಣಿನಲ್ಲಿ ಕೋಶಾವಸ್ಥೆ ಕಳೆಯುತ್ತವೆ. ಹಣ್ಣು /ಬೀಜಕೋಶ / ಬೀಜ ಬೆಳವಣಿಗೆಯ ಸಮಯದಲ್ಲಿ ಕೀಟಗಳ ಸಂಖ್ಯೆ ಸಾಮಾನ್ಯವಾಗಿ ಅತೀ ಹೆಚ್ಚಾಗಿರುತ್ತದೆ. ಇದು ಹೆಚ್ಚಿನ ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ.

ಜೈವಿಕ ನಿಯಂತ್ರಣ

ಟ್ರೈಕೊಗ್ರಾಮಾ ಕಣಜಗಳನ್ನು (ಟಿ. ಚಿಲೋನಿಸ್ ಅಥವಾ ಟಿ. ಬ್ರಾಸಿಲಿಯೆನ್ಸಿಸ್) ಹೂಬಿಡುವ ಸಮಯದಲ್ಲಿ ಮೊಟ್ಟೆಗಳ ಮೇಲೆ ಧಾಳಿ ನಡೆಸಲು ಬಿಡಬಹುದು. ಮೈಕ್ರೋಪ್ಲೈಟಿಸ್, ಹೆಟೆರೋಪೆಲ್ಮಾ ಮತ್ತು ನೆಟೆಲ್ಲಿಯಾ ಕಣಜಗಳು ಲಾರ್ವಾಗಳ ಪರಾವಲಂಬಿಗಳಾಗಿವೆ. ಪರಭಕ್ಷಕ ತಿಗಣೆಗಳು(ದೊಡ್ಡ ಕಣ್ಣಿನ ತಿಗಣೆ,ಹೊಳಪು ಕವಚದ ತಿಗಣೆ ಮತ್ತು ಸ್ಪಿನ್ಡ್ ಪರಭಕ್ಷಕ ಶೀಲ್ಡ್ ಬಗ್), ಮತ್ತು ಇರುವೆಗಳು, ಜೇಡಗಳು, ಇಯರ್ವಿಗ್ಸ್, ಮಿಡತೆಗಳು,ನೊಣಗಳು, ಮರಿಹುಳುಗಳ ಮೇಲೆ ದಾಳಿ ಮಾಡುತ್ತವೆ. ಆದ್ದರಿಂದ ಅವುಗಳನ್ನು ಪ್ರೋತ್ಸಾಹಿಸಬೇಕು. ನೀವು ಸ್ಪಿನೋಸ್ಯಾಡ್, ನ್ಯೂಕ್ಲಿಯೊಪಾಲಿಹೆಡ್ರೋವೈರಸ್ (NPV), ಮೆಟಾರಿಝಿಯಂ ಎನಿಸೋಪ್ಲಿಯೆ,ಬೆವೆರಿಯಾ ಬ್ಯಾಸಿಯಾನಾ ಅಥವಾ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಆಧರಿಸಿದ ಜೈವಿಕ ಕೀಟನಾಶಕಗಳನ್ನು ಲಾರ್ವಾವನ್ನು ನಿಯಂತ್ರಿಸಲು ಬಳಸಬಹುದು. ಸಸ್ಯ ಮೂಲಿಕೆ ಉತ್ಪನ್ನಗಳಾದ ಬೇವಿನ ಎಣ್ಣೆ, ಬೇವಿನ ಬೀಜದ ಸಾರ (ಎನ್ಎಸ್ ಕೆ ಇ 5%), ಮೆಣಸಿನಕಾಯಿ ಅಥವಾ ಬೆಳ್ಳುಳ್ಳಿ ಗಳನ್ನು ಎಲೆಗಳ ಸಿಂಪಡಣೆಗಳಾಗಿ ಮೊಗ್ಗು ಹುಟ್ಟುವ ಹಂತದಲ್ಲಿ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗವಿದ್ದರೆ ಮೊದಲು ಯಾವಾಗಲೂ ಅದನ್ನು ಪರಿಗಣಿಸಿ. ಪ್ರಯೋಜನಕಾರಿಯಾದ ಕೀಟಗಳ ಮೇಲೆ ಪ್ರಭಾವ ಬೀರದಂತೆ, ಕೀಟಗಳ ಹಾವಳಿಯಿಂದ ಹೊರಬರಲು ಆಯ್ದ ಕೀಟನಾಶಕ ಚಿಕಿತ್ಸೆ ಉತ್ತಮ ಆಯ್ಕೆಯಾಗಿದೆ. ಮರಿಹುಳುಗಳು ಕೀಟನಾಶಕ ಚಿಕಿತ್ಸೆಗೆ ಹೆಚ್ಚು ನಿರೋಧಕತೆ ಬೆಳೆಸಿಕೊಳ್ಳುವ ಕಾರಣ ಮೊಟ್ಟೆಗಳು ಮತ್ತು ಲಾರ್ವಾಗಳನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಕೀಟಸಂಖ್ಯೆಯನ್ನು ಕಡಿಮೆ ಮಾಡಲು ಕ್ಲೋರಂಟ್ರಾನಿಲಿಪ್ರೋಲ್, ಕ್ಲೋರೋಪೈರಿಫೊಸ್, ಸಿಪರ್ಮೆಥರಿನ್, ಆಲ್ಫಾ- ಮತ್ತು ಝೀಟಾ-ಸೈಪರ್ಮೆಥರಿನ್, ಎಮಾಮೆಕ್ಟಿನ್ ಬೆಂಜೊಯೇಟ್, ಎಸ್ಫೆನ್ವಾಲೆರೇಟ್, ಫ್ಲುಬೆನ್ಡಿಯಮೈಡ್, ಮೆಥೊಮಿಲ್ ಅನ್ನು ಆಧರಿಸಿರುವ ಉತ್ಪನ್ನಗಳನ್ನು ಬಳಸಬಹುದು. ಮೊದಲ ಸಿಂಪಡಿಸುವಿಕೆಯು ಹೂಬಿಡುವ ಹಂತದಲ್ಲಿರಬೇಕು ಮತ್ತು ನಂತರ 10 ಅಥವಾ 15 ದಿನಗಳ ಅಂತರದಲ್ಲಿ ದ್ರವೌಷಧಗಳನ್ನು ಸಿಂಪಡಿಸಬೇಕು. ಕಡಿಮೆ ಮೌಲ್ಯದ ಬೆಳೆಗಳಲ್ಲಿ ರಾಸಾಯನಿಕ ಚಿಕಿತ್ಸೆಯು ಲಾಭದಾಯಕವಲ್ಲ.

ಮುಂಜಾಗ್ರತಾ ಕ್ರಮಗಳು

 • ಲಭ್ಯವಿದ್ದರೆ ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಬಳಸಿ.
 • ಕೀಟದ ಅತ್ಯಧಿಕ ಸಂಖ್ಯೆಯನ್ನು ತಪ್ಪಿಸಲು ಬೇಗ ನೆಡಿ.
 • ಸಸ್ಯಗಳ ನಡುವೆ ಸಾಕಷ್ಟು ಅಂತರವನ್ನು ಬಿಡಿ.
 • ಕೀಟದ ಜೀವನ ಚಕ್ರವನ್ನು ಮುರಿಯಲು ಹೊಲದ ಅಂಚಿನ ಪ್ರದೇಶಗಳನ್ನು ಕೃಷಿಗೆ ಬಳಸಬೇಡಿ.
 • ಮರಿಹುಳುಗಳನ್ನು ತಿನ್ನುವ ಪಕ್ಷಿಗಳನ್ನು ಆಕರ್ಷಿಸಲು ಪಕ್ಷಿ ಕೂರವ ಸ್ಥಳಗಳನ್ನು ಇಡಿ.
 • ಪ್ರತಿ 5 ಅಥವಾ 6 ಸಾಲುಗಳಲ್ಲಿ ಚೆಂಡುಹೂವು (ಟ್ಯಾಗಿಟಸ್ ಇರೆಕ್ಟ್ಟಾ) ನಂತಹ ಬಲೆ ಬೆಳೆಗಳನ್ನು ಬಳಸಿ.
 • ಪತಂಗಗಳನ್ನು ಪರಿಶೀಲಿಸಲು ಅಥವಾ ಗುಂಪಾಗಿ ಹಿಡಿಯಲು ಬೆಳಕು ಅಥವಾ ಫೆರೋಮೋನ್ ಬಲೆಗಳನ್ನು ಬಳಸಿ.
 • ಉತ್ತಮ ಒಳಚರಂಡಿ ಒದಗಿಸುವ ಮೂಲಕ ನೀರಿನ ಒತ್ತಡವನ್ನು ತಪ್ಪಿಸಿ.
 • ಮೊಟ್ಟೆಗಳ ಉಪಸ್ಥಿತಿ, ಹೂವುಗಳು, ಹಣ್ಣುಗಳು ಅಥವಾ ಬೀಜಗಳ ಹಾನಿಗಾಗಿ ಸಸ್ಯಗಳ ಮೇಲ್ವಿಚಾರಣೆ ಮಾಡಿ.
 • ಲಾರ್ವಾ ಮತ್ತು ಮೊಟ್ಟೆಗಳಿರುವ ಎಲೆಗಳು ಅಥವಾ ಸಸ್ಯಗಳನ್ನು ಕೈಯಿಂದ ಆರಿಸಿ ತೆಗೆಯಿರಿ.
 • ಸೋಂಕಿತ ಸಸ್ಯಗಳು ಹಾಗೂ ಹೊಲದಲ್ಲಿ ಮತ್ತು ಸುತ್ತಲಿನಲ್ಲಿರುವ ಕಳೆಗಳನ್ನು ತೆಗೆದುಹಾಕಿ.
 • ಪ್ರತಿ ಬೆಳೆ ಚಕ್ರದ ನಂತರ ಎಲ್ಲಾ ಸುಗ್ಗಿಯ ಅವಶೇಷಗಳನ್ನು ತೆರವುಗೊಳಿಸಿ.
 • ಹೊಲದಿಂದ ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ.
 • ನೈಸರ್ಗಿಕ ಪರಭಕ್ಷಕ ಮತ್ತು ಸೌರ ಕಿರಣಗಳಿಗೆ ಕೋಶಗಳನ್ನು ಒಡ್ಡಲು ಕೊಯ್ಲು ಮಾಡಿದ ನಂತರ ಆಳವಾಗಿ ನೇಗಿಲು ಹೂಡಿಯಿರಿ.
 • ಏಕಬೆಳೆಗಳನ್ನು ತಪ್ಪಿಸಿ ಮತ್ತು ಲಾಭದಾಯಕ ಸಸ್ಯಗಳೊಂದಿಗೆ ಅಂತರ ಬೆಳೆ ಜಾರಿಗೆ ತನ್ನಿ.