Earias vittella
ಕೀಟ
ಮರಿಹುಳುಗಳು ಮುಖ್ಯವಾಗಿ ಬೀಜಕೋಶಗಳ ಮೇಲೆ ದಾಳಿ ಮಾಡುತ್ತವೆ. ಆದರೆ ಬೀಜಕೋಶಗಳು ಇಲ್ಲದಿದ್ದರೆ ಸ್ಕ್ವೇರ್ ಗಳು, ಚಿಗುರುಗಳು ಮತ್ತು ಹೂವುಗಳನ್ನು ತಿನ್ನುತ್ತವೆ. ಸಸ್ಯಕ ಸ್ಥಿತಿಯಲ್ಲಿ ಕೀಟ ಮುತ್ತಿಕೊಂಡರೆ, ಮರಿಹುಳುಗಳು ಚಿಗುರಿನ ತುದಿ ಮೊಗ್ಗುಗಳನ್ನು ತಿಂದು ಕೆಳಗೆ ಚಲಿಸುತ್ತವೆ. ಇದು ಹೂಬಿಡುವ ಮೊದಲೇ ತುದಿ ಚಿಗುರುಗಳ ಒಣಗುವಿಕೆಗೆ ಮತ್ತು ಉದುರುವಿಕೆಗೆ ಕಾರಣವಾಗುತ್ತದೆ. ಮುಖ್ಯ ಕಾಂಡದ ಮೇಲೆ ಪರಿಣಾಮ ಬೀರಿದರೆ, ಇಡೀ ಸಸ್ಯವೇ ಕುಸಿಯಬಹುದು. ನಂತರದ ಹಂತಗಳಲ್ಲಿ ದಾಳಿ ನಡೆದರೆ, ಕೆಳಭಾಗದ ಸುತ್ತಲೂ ಮಾಡಿದ ರಂಧ್ರಗಳ ಮೂಲಕ ಪ್ರವೇಶಿಸುವ ಲಾರ್ವಾಗಳು ಹೂವಿನ ಮೊಗ್ಗುಗಳು ಮತ್ತು ಬೀಜಗಳನ್ನು ತಿನ್ನುತ್ತವೆ ಹಾನಿಗೊಳಗಾದ ಹೂವಿನ ಮೊಗ್ಗುಗಳು ಕೆಲವೊಮ್ಮೆ ಅಕಾಲಿಕವಾಗಿ ಅರಳುತ್ತವೆ. ಇದರಿಂದಾಗಿ 'ಫ್ಲೇರ್ಡ್ ಸ್ಕ್ವೇರ್ಸ್' ಎಂದು ಕರೆಯಲ್ಪಡುವ ಸ್ಥಿತಿ ಉಂಟಾಗುತ್ತದೆ. ಸಸ್ಯಗಳ ಅಂಗಾಂಶಗಳಿಗೆ ಆದ ಹಾನಿ ಮತ್ತು ಹಿಕ್ಕೆಗಳ ಉಪಸ್ಥಿತಿಯಿಂದ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕು ಉಂಟಾಗಿ, ರೋಗಲಕ್ಷಣಗಳು ಇನ್ನಷ್ಟು ಹದಗೆಡುತ್ತದೆ. ದಾಳಿ ಸಮಯದಲ್ಲಿ ಸಸ್ಯವು ಸಣ್ಣದಾಗಿದ್ದಷ್ಟು ಈ ಕೀಟದಿಂದ ಹೆಚ್ಚು ಹಾನಿ ಉಂಟಾಗುತ್ತದೆ. ಈ ಕೀಟದ ಪರ್ಯಾಯ ಆಶ್ರಯದಾತ ಸಸ್ಯಗಳೆಂದರೆ ದಾಸವಾಳ ಮತ್ತು ಬೆಂಡೆಕಾಯಿ.
ಮೊಟ್ಟೆಗಳನ್ನು ಅಥವಾ ಸಣ್ಣ ಲಾರ್ವಾಗಳನ್ನು ಹುಡುಕಿ ತೆಗೆಯುವುದು ಈ ಕೀಟದ ನಿರ್ವಹಣೆಯಲ್ಲಿ ನಿರ್ಣಾಯಕವಾಗಿದೆ. ಬ್ರಕೊನಿಡೇ, ಸ್ಕೇಲಿಯೊನಿಡೆ ಮತ್ತು ಟ್ರೈಕೊಗ್ರಮ್ಯಾಟಿಡೆ ಕುಟುಂಬದ ಕೆಲವು ಪ್ಯಾರಾಸಿಟಾಯ್ಡ್ ಕೀಟಗಳನ್ನು ಜೈವಿಕ ನಿಯಂತ್ರಣ ವಿಧಾನವಾಗಿ ಬಳಸಬಹುದು. ಈ ಕೆಳಗಿನ ಕ್ರಮದಲ್ಲಿ ಪರಭಕ್ಷಕ ಕೀಟಗಳನ್ನು ಸಹ ಬಳಸಬಹುದು : ಕೋಲಿಯೋಪ್ಟೆರಾ, ಹೈಮೆನೋಪ್ಟೆರಾ, ಹೆಮಿಪ್ಟೆರಾ ಮತ್ತು ನ್ಯೂರೋಪ್ಟೆರಾ. ಈ ಜಾತಿಗಳನ್ನು ಉತ್ತೇಜಿಸಲು (ಅಥವಾ ಅವುಗಳನ್ನು ಹೊಲಗಳಲ್ಲಿ ಪರಿಚಯಿಸಲು), ಮತ್ತು ವಿಶಾಲ-ರೋಹಿತ ಕ್ರಿಮಿನಾಶಕಗಳ ಬಳಕೆಯನ್ನು ತಪ್ಪಿಸಲು ಮರೆಯದಿರಿ. ಕೀಟ ಸಂಖ್ಯೆಯ ಹೆಚ್ಚಾದಾಗ, ಅವುಗಳನ್ನು ನಿಯಂತ್ರಿಸಲು ನೀವು ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಅನ್ನು ಹೊಂದಿರುವ ಜೈವಿಕ ನಿರೋಧಕ ಸ್ಪ್ರೇಗಳನ್ನು ಬಳಸಬಹುದು. ಬೇವಿನ ಬೀಜದ ಸಾರವನ್ನು (ಎನ್ ಎಸ್ ಕೆ ಇ) 5% ಅಥವಾ ಬೇವಿನ ಎಣ್ಣೆ (1500 ಪು.ಮಿ) @ 5 ಮಿಲಿ / ಲೀ ಸಿಂಪಡಿಸಿ.
ಜೈವಿಕ ಚಿಕಿತ್ಸೆಗಳು ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಹೂವು ಅರಳುವ ಆರಂಭಿಕ ಸಮಯದಲ್ಲಿ 100 ಸಸ್ಯಗಳಿಗೆ 10 ಮೊಟ್ಟೆಗಳು ಅಥವಾ ಐದು ಮರಿ ಹುಳುಗಳು ಕಂಡುಬಂದಾಗ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಲಾರ್ವಾಗಳು ಕೀಟನಾಶಕ ಚಿಕಿತ್ಸೆಗೆ ಹೆಚ್ಚು ನಿರೋಧಕತೆ ಬೆಳೆಸಿಕೊಂಡಂತೆ, ಮೊಟ್ಟೆಗಳು ಮತ್ತು ಎಳೆಯ ಲಾರ್ವಾಗಳಿಗೆ ಹುಡುಕುವುದು ಅತ್ಯಗತ್ಯವಾಗಿದೆ. ಮೊಟ್ಟೆಯ ಹಂತದಲ್ಲಿ ಚಿಕಿತ್ಸೆ ಆರಂಭಿಸಲು ಸೂಚಿಸಲಾಗುತ್ತದೆ. ಕ್ಲೋರಂಟ್ರಾನಿಲಿಪ್ರೋಲ್, ಎಮೆಟಿಕ್ಟಿನ್ ಬೆಂಜೊಯೇಟ್, ಫ್ಲುಬೆನ್ಡಿಯಮೈಡ್, ಮೆಥೊಮಿಲ್ ಅಥವಾ ಎಸ್ಫೆನ್ವಾಲೆರೇಟ್ ಹೊಂದಿರುವ ಕೀಟನಾಶಕಗಳನ್ನು ಬಳಸಬಹುದು. ಕಡಿಮೆ ಮೌಲ್ಯದ ಬೆಳೆಗಳಲ್ಲಿ ರಾಸಾಯನಿಕ ಚಿಕಿತ್ಸೆಯು ದುಬಾರಿಯಾಗಬಹುದು.
ಭಾರತದ ದಕ್ಷಿಣ ಭಾಗದಲ್ಲಿ ಸಾಮಾನ್ಯ ಕೀಟವಾದ ಸ್ಪಾಟೆಡ್ ಬಾಲ್ವರ್ಮ್ನ, ಏರಿಯಾಸ್ ವಿಟ್ಟೆಲ್ಲಾದ ಲಾರ್ವಾದಿಂದಾಗಿ ಹಾನಿ ಉಂಟಾಗುತ್ತದೆ. ಪತಂಗಗಳು ಹೆಚ್ಚಾಗಿ ಸುಮಾರು 2 ಸೆಂ.ಮೀ. ಉದ್ದವಿರುವ, ಮಸುಕಾದ, ಹಸಿರು ವಿನ್ಯಾಸಗಳಿರುವ ಮತ್ತು ಹೂವುಗಳಲ್ಲಿ ಅಥವಾ ಬೆಳಕಿನ ಮೂಲಗಳಿಗೆ ಸಮೀಪದಲ್ಲಿ ಕಂಡುಬರುತ್ತವೆ. ಮುಂದಿನ ರೆಕ್ಕೆಗಳು ಮಸುಕಾಗಿರುತ್ತವೆ ಮತ್ತು ಪ್ರಕಾಶಮಾನವಾದ ಹಸಿರು ಗೆರೆಗಳಿರುತ್ತವೆ. ಹಿಂಭಾಗದ ರೆಕ್ಕೆಗಳು ರೇಷ್ಮೆ ಬಿಳಿ ಬಣ್ಣದಲ್ಲಿರುತ್ತವೆ ಮತ್ತು ಪೇಲವ ಬೂದು ಬಣ್ಣದಿಂದ ತುಂಬಿರುತ್ತವೆ. ಮೊಟ್ಟೆಗಳು ನೀಲಿ ಬಣ್ಣದಲ್ಲಿರುತ್ತವೆ ಮತ್ತು ಎಳೆಯ ಚಿಗುರುಗಳು, ಎಲೆಗಳು ಮತ್ತು ಸ್ಕ್ವೇರ್ ಗಳ ಮೇಲೆ ಒಂದೇ ಮೊಟ್ಟೆಗಳನ್ನು ಇಡುತ್ತವೆ. ಎಳೆಯ ಲಾರ್ವಾಗಳು ತಿಳಿ ಕಂದು ಬಣ್ಣದಲ್ಲಿದ್ದು, ಹಸಿರಿನಿಂದ ಬೂದು ಬಣ್ಣದ ವಿನ್ಯಾಸಗಳನ್ನು ಹೊಂದಿರುತ್ತವೆ. ಮತ್ತು ಬೆನ್ನಿನ ಮಧ್ಯದ ರೇಖೆ ಮಸುಕಾಗಿರುತ್ತದೆ. ಸಂಪೂರ್ಣವಾಗಿ ಬೆಳೆದ ಲಾರ್ವಾವು 1.8 ಸೆಂ.ಮೀ ಉದ್ದವಿರುತ್ತದೆ. ಕೈ ಮಸೂರದಲ್ಲಿ ಗೋಚರಿಸುವಂತಹ ಸಣ್ಣ ಮುಳ್ಳುಗಳು, ದೇಹದ ಮೇಲ್ಮೈಯನ್ನು ಬಹುತೇಕ ಆವರಿಸಿರುತ್ತದೆ. ಅವು ಪ್ರೌಢಾವಸ್ಥೆಯನ್ನು ತಲುಪಿದಾಗ, ಎಲೆಗಳು ಅಥವಾ ಬಿದ್ದ ಸಸ್ಯದ ಭಾಗಗಳಿಗೆ ಜೋಡಿಸಲಾದ ರೇಷ್ಮೆಯ ಕೋಶಗಳಲ್ಲಿ ಕೋಶಾವಸ್ಥೆಯನ್ನುಕಳೆಯುತ್ತವೆ. ಉಷ್ಣವಲಯದ ಪರಿಸ್ಥಿತಿಗಳಲ್ಲಿ, ಒಂದು ಪೀಳಿಗೆಯು 20-25 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಕಡಿಮೆ ತಾಪಮಾನವು ಎರಡು ತಿಂಗಳವರೆಗೆ ಈ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ.