Chaetanaphothrips signipennis
ಕೀಟ
ಸೋಂಕು ಬೆಳವಣಿಗೆಯ ಯಾವುದೇ ಹಂತದಲ್ಲಿಯಾದರೂ ಸಂಭವಿಸಬಹುದು. ಎಲೆಗಳು, ದಿಂಡು ಮತ್ತು ಹಣ್ಣುಗಳಲ್ಲಿ ಸೋಂಕಿನ ಲಕ್ಷಣ ಗೋಚರಿಸುತ್ತದೆ. ಪೂರ್ಣ ಬೆಳೆದ ನುಸಿಗಳು ಮತ್ತು ಮರಿಹುಳುಗಳು ಸಾಮಾನ್ಯವಾಗಿ ಎಲೆಯು ದಿಂಡನ್ನು ಸುತ್ತುವರಿದ ಭಾಗದ ಹಿಂದೆ ನೆಲೆಗೊಳ್ಳುತ್ತವೆ. ರೆಕ್ಕೆ ಮೂಡದ ಹುಳಗಳು ಗುಂಪುಗುಂಪಾಗಿ ಕಂಡು ಬರುತ್ತವೆ ಹಾಗೂ ಅವುಗಳ ಬಾಯಿಯ ಭಾಗದಿಂದ ಸಸ್ಯರಸವನ್ನು ಹೀರಿ ಕುಡಿಯುತ್ತವೆ. ಆರಂಭದಲ್ಲಿ ರೋಗಲಕ್ಷಣಗಳು ನೀರಲ್ಲಿ-ನೆನೆಸಿಟ್ಟಂತಹ ಪ್ರದೇಶಗಳಾಗಿ ಹಣ್ಣುಗಳ ಮೇಲೆ ಕಾಣಿಸುತ್ತವೆ. ಕಾಲ ಕಳೆದಂತೆ ಈ ಪ್ರದೇಶಗಳು ಸಿಪ್ಪೆಯನ್ನು ಕಡುಗೆಂಪು ಬಣ್ಣ ಅಥವಾ ಕಂದು ಬಣ್ಣಕ್ಕೆ ತಿರುಗಿಸಿ ತುಕ್ಕು ಹಿಡಿದಂತೆ ಕಾಣುತ್ತವೆ. ಈ ರೀತಿ ತುಕ್ಕು ಹಿಡಿದಂತೆ ಕಾಣುವುದು ಈ ರೋಗದ ವಿಶೇಷ ಲಕ್ಷಣ. ಸಾಮಾನ್ಯವಾಗಿ ಸಿಪ್ಪೆಗೆ ಮಾತ್ರ ಹಾನಿಯಾಗುತ್ತದೆ. ಆದರೆ ಸೋಂಕು ಹೆಚ್ಚಾಗಿದ್ದರೆ ತಿರುಳು ಕೂಡ ಹಾನಿಯಾಗಬಹುದು. ಹೆಚ್ಚು ಮಾಗಿದ ಹಣ್ಣುಗಳಲ್ಲಿ ಬಿರುಕುಗಳು ಗೋಚರಿಸಬಹುದು. ಕೆಲವೊಮ್ಮೆ ಹಣ್ಣುಗಳು ಸೀಳುತ್ತವೆ. ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಸೋಂಕು ತಗುಲಿದರೆ ಹಣ್ಣಿಗೆ ಹೆಚ್ಚು ಹಾನಿಕಾರಕವಾಗಿದೆ.
ಪರಾವಲಂಬಿ ಕೀಟಗಳಾದ ಕ್ರೈಸೋಪಿಡೇ ಕುಲದ ಕೀಟ ಸಂತತಿ ಮತ್ತು ಜೀರುಂಡೆ ಜಾತಿಯ ಕೀಟಗಳನ್ನು ನುಸಿಯ ನಿಯಂತ್ರಣಕ್ಕೆ ಬಳಸಬಹುದು. ಕೆಲವು ಜಾತಿಯ ಇರುವೆಗಳು ಕೂಡ ಪರಿಣಾಮಕಾರಿಯಾಗಬಹುದು. ಇರುವೆಗಳು ಮಣ್ಣಿನಲ್ಲಿರುವ ಪ್ಯೂಪಾಗಳನ್ನು ಆಕ್ರಮಿಸುತ್ತವೆ. ಸಸ್ಯಭಾಗಗಳು ಆರೋಗ್ಯಕರ ಮೂಲದ್ದಾಗಿವೆಯೇ ಎಂದು ಖಚಿತವಾಗಿರದಿದ್ದರೆ, ಬಿಸಿ ನೀರಲ್ಲಿ ಸಂಸ್ಕರಿಸುವುದರಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕೀಟನಾಶಕಗಳ ಅಗತ್ಯವಿದ್ದಲ್ಲಿ, ಪ್ರೌಢ ನುಸಿಗಳನ್ನು ಕೊಲ್ಲಲು ಗಿಡ ಮತ್ತು ಹಣ್ಣಿನ ಮೇಲೂ, ಪ್ಯೂಪಾಗಳನ್ನು ಕೊಲ್ಲಲು ಮಣ್ಣಿನ ಮೇಲೂ ಸಿಂಪಡಿಸಬೇಕು. ಸೋಂಕು ಮತ್ತೆ ಬರದಂತೆ ತಪ್ಪಿಸಲು ಇರಬಹುದಾದ ಮಾರ್ಗ ಇದೊಂದೇ.
ನುಸಿಯು ಹೆಚ್ಚಾಗಿ ಸೋಂಕಿತ ಸಸ್ಯದ ಭಾಗಗಳ ಮೂಲಕ ಅಥವಾ ಸ್ವಲ್ಪ ಮಟ್ಟಿಗೆ ಮರದಿಂದ ಮರಕ್ಕೆ ಹಾರುವ ಕೀಟಗಳ ಮೂಲಕ ಹರಡುತ್ತದೆ. ಪೂರ್ಣ ಬೆಳೆದ ನುಸಿ ತೆಳ್ಳಗಿದ್ದು ಹಳದಿ ಮತ್ತು ಕಂದು ಬಣ್ಣದ್ದಾಗಿರುತ್ತದೆ. ಸುಮಾರು 1.3 ಮಿಮೀ ಗಾತ್ರ. ಮುಂದಿನ ರೆಕ್ಕೆಗಳ ಮೇಲೆ ಗಾಢ ಬಣ್ಣದ ಎರಡು ಮಚ್ಚೆಗಳಿದ್ದು, ಕಿರಿದಾದ ರೆಕ್ಕೆಗಳನ್ನು ಹೊಂದಿರುತ್ತವೆ. ಹೆಣ್ಣು ನುಸಿಯು ಎಲೆಯು ದಿಂಡನ್ನು ಸುತ್ತುವರಿಯುವ ಭಾಗದ ಹಿಂದೆ ಮತ್ತು ಹಣ್ಣುಗಳು ಗಿಡಕ್ಕೆ ತಾಕುವ ಸ್ಥಳಗಳಲ್ಲಿ ಸಣ್ಣ ಮೊಟ್ಟೆಗಳನ್ನು (ಬರಿಗಣ್ಣಿಗೆ ಗೋಚರಿಸುವುದಿಲ್ಲ) ಇಡುತ್ತದೆ. ಸುಮಾರು 7 ದಿನಗಳ ನಂತರ, ರೆಕ್ಕೆಗಳಿಲ್ಲದ, ಬಿಳಿ ಅಥವಾ ಕೆನೆ ಬಣ್ಣದ ಮರಿಹುಳು (ಲಾರ್ವಾ) ಮೊಟ್ಟೆಯಿಂದ ಹೊರಬರುತ್ತದೆ. ಅವು ಸುಮಾರು 7 ದಿನಗಳಲ್ಲಿ ಪೂರ್ಣ ಗಾತ್ರಕ್ಕೆ ಬೆಳೆಯುತ್ತವೆ. ನಂತರ ನೆಲಕ್ಕೆ ತೆರಳಿ ಗಿಡದ ಬುಡದಲ್ಲಿ ಮಣ್ಣಿನಲ್ಲಿ ಪ್ಯೂಪಾ ಹಂತಕ್ಕೆ ಬೆಳೆಯುತ್ತವೆ. ಪ್ಯೂಪಾ ಗಾತ್ರದಲ್ಲಿ ಸುಮಾರು 1 ಮಿ.ಮೀ. ಇದ್ದು ಬಿಳಿ ಬಣ್ಣದಲ್ಲಿರುತ್ತದೆ ಮತ್ತು ಚಲನಶಕ್ತಿ ಹೊಂದಿರುತ್ತದೆ. ಮತ್ತೂ 7 ರಿಂದ 10 ದಿನಗಳ ನಂತರ, ಹೊಸ ಸಂತತಿಯ ಪ್ರೌಢ ನುಸಿಯು ಹೊರಬರುತ್ತದೆ. ವರ್ಷಕ್ಕೆ ಹಲವು ತಲೆಮಾರುಗಳು ಇರಬಹುದು. ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ನುಸಿಯ ಸಂಖ್ಯೆ ಅತಿ ಹೆಚ್ಚಿರುತ್ತದೆ.