ಮಾವು

ಮಾವಿನ ಓಟೆ ಕೊರಕ

Deanolis albizonalis

ಕೀಟ

ಸಂಕ್ಷಿಪ್ತವಾಗಿ

  • ಎಳೆಯ ಹಣ್ಣುಗಳಲ್ಲಿ ಕೀಟವು ಪ್ರವೇಶಿಸಿದ ಕಪ್ಪು ಬಣ್ಣದ ರಂಧ್ರಗಳು.
  • ಹಣ್ಣುಗಳು ಸೀಳಿಕೊಂಡು ಅವಧಿಗೆ ಮೊದಲೇ ಉದುರಿ ಬಿಡಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಬಟಾಣಿ ಅಥವಾ ನಿಂಬೆ ಗಾತ್ರದ ಹಣ್ಣುಗಳಲ್ಲಿ ಕೀಟವು ಹಣ್ಣನ್ನು ಪ್ರವೇಶಿಸಿದಾಗ ಮಾಡಿದ ಕಪ್ಪು ಬಣ್ಣದ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ತೊಟ್ಟಿನ ಪಕ್ಕದಲ್ಲಿ ವೃತ್ತಾಕಾರದ ಬಣ್ಣಗೆಟ್ಟ ಪಟ್ಟೆಗಳು ಕಾಣಿಸಿಕೊಳ್ಳುತ್ತವೆ. ಹಣ್ಣು ನಿಂಬೆ ಗಾತ್ರಕ್ಕಿಂತ ಹೆಚ್ಚು ಬೆಳೆದಾಗ, ಕೀಟವು ಜಗಿದ ತಿರುಳು ಮತ್ತು ಹಣ್ಣಿನ ರಸವು ಹಣ್ಣಿನಿಂದ ಸ್ರವಿಸುತ್ತದೆ. ಕೀಟವು ಕೊರೆದ ಕಾರಣ ಹಣ್ಣು ಸೀಳಬಹುದು. ನಂತರ, ಲಾರ್ವಾ ಬೇರೆ ಹಣ್ಣುಗಳನ್ನು ದಾಳಿ ಮಾಡಬಹುದು. ಲಾರ್ವಾಗಳ ಮೈಮೇಲೆ ಕೆಂಪು ಮತ್ತು ಬಿಳಿಯ ಬಣ್ಣದ ದುಂಡಗಿನ ಪಟ್ಟೆಗಳು ಇರುತ್ತವೆ. ಕತ್ತು ಮತ್ತು ತಲೆ ಕಪ್ಪು ಬಣ್ಣದಲ್ಲಿರುತ್ತದೆ. ಅವು ಬೆಳೆದಂತೆ ಹಸಿರು ಮಿಶ್ರಿತ ನೀಲಿ ಬಣ್ಣಕ್ಕೆ ತಿರುಗುತ್ತವೆ. ಆರಂಭದಲ್ಲಿ ತಿರುಳನ್ನು ತಿಂದರೆ, ಬಳಿಕ ಬೀಜಗಳನ್ನು ತಿನ್ನುತ್ತವೆ. ಇದರಿಂದ ಹಣ್ಣು ಅಕಾಲಿಕವಾಗಿ ಉದುರುತ್ತದೆ, ವಿಶೇಷವಾಗಿ ಎಳೆಯ ಹಣ್ಣುಗಳು ಉದುರುತ್ತವೆ. ಹಾನಿ ತೀವ್ರವಾಗಿರುವ ಮರಗಳ ಅಡಿಯಲ್ಲಿ ನೆಲದ ಮೇಲೆ ನೂರಾರು ಎಳೆಯ ಹಣ್ಣುಗಳು ಬಿದ್ದಿರುವುದು ಕಾಣಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮಾವಿನ ಹೂ ಬಿಡುವ ಕಾಲದಿಂದ ಹಿಡಿದು 2 ತಿಂಗಳುಗಳವರೆಗೆ ಪ್ರತಿ ವಾರವೂ ಬೇವಿನ ಸಾರದ (ಅಝಾಡಿರಾಕ್ಟಿನ್) ಮಿಶ್ರಣಗಳನ್ನು ಬಳಸಬಹುದು. ಓಟೆ ಕೊರಕದ ನೈಸರ್ಗಿಕ ಶತ್ರುಗಳ ಸಂಖ್ಯೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ, ಉದಾ. ಕಣಜಗಳಾದ ರೈಕಿಯಂ ಅಟ್ರಿಸಿಮಮ್ (ಲಾರ್ವಾಗಳನ್ನು ತಿನ್ನುವುದು), ಟ್ರೈಕೊಗ್ರಾಮ ಚಿಲೋನಿಸ್ ಮತ್ತು ಟ್ರೈಕೊಗ್ರಾಮ ಚಿಲೊಟ್ರೇ ಓಟೆ ಕೊರಕದ ಮೊಟ್ಟೆಗಳನ್ನು ಪರಾವಲಂಬಿಸುತ್ತವೆ .

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಮಾವಿನ ಓಟೆ ಕೊರಕ ಕೀಟವನ್ನು ಪರಿಣಾಮಕಾರಿಯಾಗಿ ತಡೆಯಲು ಥಿಯಾಕ್ಲಾಪ್ರಿಡ್ ಅನ್ನು ಹೊಂದಿರುವ ಸಿಂಪಡಣೆಗಳನ್ನು ಬಳಸಿ. ಫೆನ್ಪ್ರೊಪಾತ್ರಿನ್ ಆಧಾರಿತ ಕೀಟನಾಶಕಗಳು ಪರಿಣಾಮಕಾರಿಯಾಗಿದೆ.

ಅದಕ್ಕೆ ಏನು ಕಾರಣ

ಪ್ರೌಢ ಪತಂಗಗಳು ಸಾದಾ ಬೂದು ಬಣ್ಣದಲ್ಲಿರುತ್ತವೆ ಹಾಗೂ ಸುಮಾರು 13 ಮಿಮೀ. ವ್ಯಾಪ್ತಿಯ ರೆಕ್ಕೆಗಳನ್ನು ಹೊಂದಿರುತ್ತವೆ. ಅವು ಸುಮಾರು ಒಂದು ವಾರದವರೆಗೆ ಜೀವಿಸಿರುತ್ತವೆ ಹಾಗೂ ಹಣ್ಣುಗಳ ತೊಟ್ಟಿನ ಭಾಗದ ತಳದಲ್ಲಿ ಜೋಡಿ ಮೊಟ್ಟೆಗಳನ್ನು ಇಡುತ್ತವೆ. ಲಾರ್ವಾ ಹಣ್ಣನ್ನು ಪ್ರವೇಶಿಸಿ ಬೀಜ ಮತ್ತು ತಿರುಳನ್ನು ತಿಂದು ಬದುಕುತ್ತವೆ. ತೊಗಟೆಯಲ್ಲಿ 1-2 ಸೆಮೀ ಆಳವಾದ ರಂಧ್ರಗಳಲ್ಲಿ ಲಾರ್ವಾಗಳು ಪ್ಯೂಪಾ ಹಂತಕ್ಕೆ ಬೆಳೆಯುತ್ತವೆ. ಈ ತೂತುಗಳನ್ನು ಲಾರ್ವಾಗಳು ಜಗಿದ ತೊಗಟೆಯ ಪದಾರ್ಥದಿಂದ ಮುಚ್ಚಿ ಹಾಕುವುದರಿಂದ ಲಾರ್ವಾಗಳು ಕಣ್ಣಿಗೆ ಕಾಣುವುದಿಲ್ಲ. ಪ್ರೌಢ ಕೀಟಗಳು 10-14 ದಿನಗಳಲ್ಲಿ ಹೊರಬರುತ್ತವೆ. ಇದು ನಿಶಾಚರಿ ಕೀಟ. ಸೋಂಕಿತ ಹಣ್ಣುಗಳ ಸಾಗಣೆಯ ಸಮಯದಲ್ಲಿ ಕೀಟವು ಹರಡುತ್ತದೆ ಹಾಗೂ ಪ್ರೌಢ ಕೀಟಗಳು ಹೊಲದಿಂದ ಹೊಲಕ್ಕೆ ಹಾರುವ ಸಾಮರ್ಥ್ಯ ಹೊಂದಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಸ್ವಚ್ಛ ಮತ್ತು ಮಾನ್ಯತೆ ಪಡೆದ ಸರಬರಾಜುದಾರರಿಂದ ಪ್ರಮಾಣೀಕೃತ ಸಸ್ಯ ಪದಾರ್ಥಗಳನ್ನು ಆರಿಸಿಕೊಳ್ಳಿ.
  • ಕೀಟಗಳ ಇರುವಿಕೆ ಮತ್ತು ಸಾಮಾನ್ಯಕ್ಕಿಂತ ಭಿನ್ನವಾಗಿ ಕಾಣುವ ಲಕ್ಷಣಗಳಿಗಾಗಿ ನಿಮ್ಮ ಹೊಲವನ್ನು ಪರಿಶೀಲಿಸಿ, ಅದರಲ್ಲೂ ವಿಶೇಷವಾಗಿ ಹಣ್ಣು ಹುಟ್ಟುವ ಸಮಯದಲ್ಲಿ ಪರಿಶೀಲಿಸಿ.
  • ಸೋಂಕಿತ ಹಣ್ಣುಗಳನ್ನು ಮತ್ತು ಆಯಾ ಮರಗಳ ತೊಗಟೆಯನ್ನು ನಾಶಮಾಡಿ.
  • ತಡೆಗೋಡೆಗಳನ್ನು ನಿರ್ಮಿಸುವುದರಿಂದ ಬೇರೆ ತೋಟಗಳಿಗೆ ದಾಳಿಯಾಗದಂತೆ ತಡೆಯಬಹುದು.
  • ಸೋಂಕಿತ ಹಣ್ಣುಗಳನ್ನು ಬೇರೆ ತೋಟಗಳಿಗೆ ಅಥವಾ ಪ್ರದೇಶಗಳಿಗೆ ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ