ಬದನೆ

ಬಿಳಿಬದನೆ ಎಲೆ ಸುರುಳಿ

Eublemma olivacea

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳು ತಮ್ಮ ಅಕ್ಷದ ಉದ್ದಕ್ಕೂ, ಉದ್ದವಾಗಿ ಸುತ್ತಿಕೊಂಡಂತೆ ಕಾಣಿಸಿಕೊಳ್ಳುತ್ತವೆ.
  • ಸುತ್ತಿರುವ ಎಲೆಯ ಮೇಲ್ಮೈ ಒಳಗೆ ಎಲೆ ಅಂಗಾಂಶಗಳನ್ನು ಮರಿಹುಳುಗಳು ತಿನ್ನುತ್ತವೆ.
  • ಬಾಧಿತ ಎಲೆಗಳು ಕಂದು ಬಣ್ಣದಲ್ಲಿ, ಬಾಡಿದಂತೆ ಮತ್ತು ಒಣಗಿದಂತೆ ಕಾಣಿಸಿಕೊಳ್ಳುತ್ತವೆ.
  • ಭಾರಿ ಮುತ್ತುವಿಕೆ ಎಲೆ ಉದುರುವಿಕೆಗೆ ಕಾರಣವಾಗುತ್ತದೆ.
  • ಇದರಿಂದಾಗಿ ಗಮನಾರ್ಹ ಇಳುವರಿ ನಷ್ಟವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬದನೆ

ರೋಗಲಕ್ಷಣಗಳು

ಮರಿಹುಳುಗಳು ಮಾತ್ರ ಎಲೆಗಳಿಗೆ ಹಾನಿ ಉಂಟು ಮಾಡುತ್ತವೆ. ಮರಿಹುಳುಗಳು ನೆಲೆಗೊಂಡಿರುವ ಉದ್ದವಾದ ಸುತ್ತಿದ ಎಲೆಗಳು ಆರಂಭಿಕ ಲಕ್ಷಣಗಳಾಗಿವೆ. ಅಲ್ಲಿಂದ, ಅವು ಎಲೆಗಳ ಆಂತರಿಕ ಹಸಿರು ಅಂಗಾಂಶವನ್ನು ಜಗಿಯುತ್ತವೆ. ಬಹುತೇಕ ಹಾನಿ ಸಸ್ಯದ ಮೇಲಿನ ಭಾಗಗಳಲ್ಲಿ ಕಂಡುಬರುತ್ತದೆ. ಸುತ್ತಿದ ಎಲೆಗಳು ಕಂದು ಬಣ್ಣಕ್ಕೆ ತಿರುಗಿ, ಬಾಡಿದಂತೆ ಮತ್ತು ಒಣಗಿದಂತೆ ಕಾಣಿಸಿಕೊಳ್ಳುತ್ತವೆ. ಹಾನಿಯು ಹೆಚ್ಚಾದಾಗ ಕಂದು ಬಣ್ಣ ಸಸ್ಯದ ಎಲ್ಲಾ ಭಾಗಗಳಿಗೆ ಹರಡುತ್ತದೆ ಮತ್ತು ಎಲೆ ಉದುರುವಿಕೆಗೆ ಕಾರಣವಾಗುತ್ತದೆ. ಕೀಟಗಳ ಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಇದು ಗಮನಾರ್ಹ ಇಳುವರಿ ನಷ್ಟಕ್ಕೆ ಕಾರಣವಾಗಬಹುದು. ಆದರೂ, ಈ ಕೀಟ ಸಸ್ಯದ ಬೆಳವಣಿಗೆ ಮತ್ತು ಇಳುವರಿಗೆ ಪ್ರಮುಖ ಹಾನಿ ಮಾಡುವುದು ಅಪರೂಪ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕೋಟೆಸಿಯಾ ಜಾತಿಗಳು ಮುಂತಾದ ಪರಾವಲಂಬಿ ಕಣಜ ಜಾತಿಗಳಿಂದ ಜೈವಿಕ ನಿಯಂತ್ರಣ ಮಾಡಬಹುದು. ಇದು ಮುತ್ತುವಿಕೆ ತಗ್ಗಿಸಲು ಸಹಾಯ ಮಾಡುತ್ತದೆ. ಮೆಂಟಿಸ್ ಅಥವಾ ಪ್ರಯೋಜನಕಾರಿ ಲೇಡಿಬರ್ಡ್ ಜೀರುಂಡೆ ಜಾತಿಗಳಂತಹ ಪರಭಕ್ಷಕ ಕೀಟಗಳು ಸಹ ಕೀಟವನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಸ್ಟೆಇನರ್ನನೆಮಾ ಜಾತಿಗಳಂತಹ ನೆಮಟೋಡ್ ಗಳು ಸಹ ಕೀಟ ನಿಯಂತ್ರಿಸುವಲ್ಲಿ ಸಹಾಯ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಮೊದಲು ಸಮಗ್ರವಾದ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕೀಟನಾಶಕಗಳ ಅಗತ್ಯವಿದ್ದಲ್ಲಿ, ಬಿಳಿಬದನೆ ಎಲೆ ಸುರುಳಿ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮ್ಯಾಲಥಿಯಾನ್ ಹೊಂದಿರುವ ಸ್ಪ್ರೇ ಉತ್ಪನ್ನಗಳನ್ನು ಬಳಸಿ.

ಅದಕ್ಕೆ ಏನು ಕಾರಣ

ವಯಸ್ಕ ಕೀಟಗಳು ಮಧ್ಯಮ ಗಾತ್ರದ, ತಿಳಿ ಕಂದು ಬಣ್ಣದಿಂದ ಆಲಿವ್ ಹಸಿರು ಬಣ್ಣದ ಪತಂಗವಾಗಿದ್ದು, ಮುಂದಿನ ರೆಕ್ಕೆಗಳ ಹೊರ ಪ್ರದೇಶದ ಮೇಲೆ ದೊಡ್ಡ ಮೂರು-ಬದಿಯಿರುವ ಗಾಢ ಬಣ್ಣದ ತೇಪೆ ಹೊಂದಿರುತ್ತವೆ. ಹಿಂದಿನ ರೆಕ್ಕೆಗಳು ಅರೆಪಾರದರ್ಶಕ ಬಿಳಿಯಾಗಿರುತ್ತವೆ. ಹೆಣ್ಣು ಪತಂಗಗಳು ಎಲೆಗಳ ಮೇಲಿನ ಭಾಗದಲ್ಲಿ, ಸಾಮಾನ್ಯವಾಗಿ ಎಳೆಯ ಎಲೆಗಳಲ್ಲಿ. ಸುಮಾರು 8-22 ಗುಂಪುಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಸುಮಾರು 3-5 ದಿನಗಳ ನಂತರ ಮೊಟ್ಟೆ ಒಡೆದು ಮರಿಹುಳು ಹೊರಬರುತ್ತದೆ. ಅವು ಕೆನ್ನೇರಳೆ-ಕಂದು ಬಣ್ಣದ್ದಾಗಿದ್ದು, ಹಳದಿ ಅಥವಾ ಕೆನೆ ಬಣ್ಣದ ಟೊಳ್ಳಾದ ಉಬ್ಬುಗಳು ಮತ್ತು ಹಿಂಭಾಗದಲ್ಲಿ ಉದ್ದ ಕೂದಲಿನೊಂದಿಗೆ ದೃಢವಾಗಿರುತ್ತವೆ. ಮರಿಹುಳದ ಬೆಳವಣಿಗೆಯ ಅವಧಿಯು ಸುಮಾರು 4 ವಾರಗಳಷ್ಟಿರುತ್ತದೆ. ನಂತರ ಅವು ಸುತ್ತಿಕೊಂಡ ಎಲೆಯ ಒಳಗೆ ಕೋಶಾವಸ್ಥೆಯನ್ನು ಕಳೆಯುತ್ತವೆ. 7-10 ದಿನಗಳ ಹೆಚ್ಚುವರಿ ಅವಧಿಯ ನಂತರ ಹೊಸ ಪೀಳಿಗೆಯ ವಯಸ್ಕ ಪತಂಗಗಳು ಹೊರಬರುತ್ತವೆ. ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ವರ್ಷಕ್ಕೆ 3-4 ತಲೆಮಾರುಗಳು ಇರಬಹುದು.


ಮುಂಜಾಗ್ರತಾ ಕ್ರಮಗಳು

  • ಋತುವಿನಲ್ಲಿ ತಡವಾಗಿ ನಾಟಿ ಮಾಡುವುದನ್ನು ಶಿಫಾರಸು ಮಾಡಲಾಗುತ್ತದೆ.
  • ಉತ್ತಮ ರಸಗೊಬ್ಬರ ಕಾರ್ಯಕ್ರಮದೊಂದಿಗೆ ಆರೋಗ್ಯಕರ ಸಸ್ಯಗಳನ್ನು ಬೆಳೆಯಿರಿ.
  • ರೋಗ ಅಥವಾ ಕೀಟದ ಯಾವುದೇ ಚಿಹ್ನೆಗಾಗಿ ನಿಮ್ಮ ಸಸ್ಯಗಳು ಅಥವಾ ಜಮೀನನ್ನು ಪರಿಶೀಲಿಸಿ.
  • ಮುತ್ತಿಕೊಂಡಿರುವ ಎಲೆಗಳು ಮತ್ತು ಮರಿಹುಳುಗಳನ್ನು ಕೈಯಿಂದ ಹೆಕ್ಕಿ ತೆಗೆಯಿರಿ.
  • ಮುತ್ತಿಕೊಂಡಿರುವ ಎಲೆಗಳು, ಮರಿಹುಳುಗಳು ಮತ್ತು ತ್ಯಾಜ್ಯವನ್ನು ತೆಗೆದುಹಾಕಿ ಅಥವಾ ನಾಶಮಾಡಿ.
  • ಕೀಟದ ನೈಸರ್ಗಿಕ ಶತ್ರುಗಳನ್ನು ನಾಶಪಡಿಸುವ ವಿವೇಚನಾರಹಿತ ಕೀಟನಾಶಕ ಬಳಕೆಯನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ