Pseudococcidae
ಕೀಟ
ಎಲೆಗಳು, ಕಾಂಡಗಳು, ಹೂವುಗಳು ಮತ್ತು ಹಣ್ಣುಗಳ ಕೆಳಭಾಗದಲ್ಲಿ ತಿಗಣೆಗಳ ಹಿಂಡಿನಿಂದಾದ ಬಿಳಿ ಹತ್ತಿಯಂತಹ ವಸ್ತುವು ಕಾಣಿಸಿಕೊಳ್ಳುತ್ತದೆ. ಸೋಂಕಿನಿಂದಾಗಿ ಚಿಗುರು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಮುರುಟಿಕೊಳ್ಳುತ್ತವೆ. ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಹಣ್ಣುಗಳು ಆರಂಭಿಕ ಹಂತದಲ್ಲಿ ಉದುರಿ ಹೋಗುತ್ತವೆ. ಬೆಳೆದ ಎಲೆಗಳು ಮುರುಟುವ ಅಥವಾ ವಿರೂಪಗೊಳ್ಳುವ ಸಾಧ್ಯತೆ ಕಡಿಮೆ. ಸಾರ ಹೀರುವಾಗ ತಿಗಣೆಗಳು ಸಿಹಿಅಂಟನ್ನು ಸ್ರವಿಸುತ್ತವೆ ಮತ್ತು ಇದು ಅಂಗಾಂಶಗಳನ್ನು ಜಿಗುಟಾಗುವಂತೆ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ನೆಲೆಗೊಳ್ಳಲು ಸಹಾಯಮಾಡುತ್ತವೆ. ಮುಖ್ಯವಾಗಿ ಹಣ್ಣುಗಳು ಆಕ್ರಮಣಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಅವು ವಿರೂಪಗೊಳ್ಳಬಹುದು ಅಥವಾ ಮೇಣದಂತಹ ಸ್ರಾವದಿಂದ ಸಂಪೂರ್ಣವಾಗಿ ಲೇಪಿತವಾಗಬಹುದು. ಇರುವೆಗಳು ಕೀಟ ಸ್ರವಿಸಿದ ದ್ರವ್ಯದಿಂದ ಆಕರ್ಷಿತಗೊಂಡು ಕೀಟವನ್ನು ಇತರ ಸಸ್ಯಗಳಿಗೂ ಹರಡಬಹುದು. ಬೆಳೆದ ಎಲೆಗಳು ವಿರೂಪಗೊಳ್ಳುವ ಅಥವಾ ಹಾಳಾಗುವ ಸಾಧ್ಯತೆ ಕಡಿಮೆ.
ಅಲ್ಪ ಸೋಂಕಿನ ಮೊದಲ ಸಂಕೇತಗಳು ಕಂಡುಬಂದಾಗಲೇ ಎಣ್ಣೆ ಅಥವಾ ಸ್ಪಿರಿಟ್ ನಲ್ಲಿ ಅದ್ದಿದ ಹತ್ತಿಯನ್ನು ಮಲಿಬಗ್ ಗಳ ಗುಂಪಿನ ಮೇಲೆ ಸವರಿ. ನೀವು ಸಸ್ಯಗಳ ಮೇಲೆ ಕೀಟನಾಶಕ ಸೋಪ್ ಗಳನ್ನು ಸಿಂಪಡಿಸಬಹುದು. ತಿಗಣೆಗಳ ಹರಡುವಿಕೆಯನ್ನು ತಡೆಗಟ್ಟಲು ಹತ್ತಿರದ ಸಸ್ಯಗಳಿಗೆ ಬೇವಿನ ಎಣ್ಣೆ ಸಿಂಪಡಿಸಬಹುದು. ಇವುಗಳ ನೈಸರ್ಗಿಕ ವಿರೋಧಿಗಳಲ್ಲಿ ಹಸಿರು ಲೇಸ್ ವಿಂಗ್, ಪ್ಯಾರಾಸಿಟಾಯಿಡ್ ಕಣಜಗಳು, ಹೋವರ್ ಫ್ಲೈಸ್, ಲೇಡಿಬರ್ಡ್ ಜೀರುಂಡೆಗಳು, ಮಲಿಬಗ್ ಡೆಸ್ಟ್ರಾಯರ್ ಮತ್ತು ಪರಭಕ್ಷಕ ಚಿಟ್ಟೆ ಸ್ಪಲ್ಗಿಯಸ್ ಎಪಿಯಸ್ ಸೇರಿವೆ.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳು, ತಡೆಗಟ್ಟುವ ಕ್ರಮಗಳನ್ನು ಒಟ್ಟು ಸೇರಿಸಿದ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮಲಿಬಗ್ ವಿರುದ್ಧ ಚಿಕಿತ್ಸೆಗಳು ಕಷ್ಟ ಏಕೆಂದರೆ, ಅವುಗಳನ್ನು ಮೇಣದ ಪದರಗಳು ಮತ್ತು ನಾರುಗಳು ಪ್ರತಿಕೂಲ ವಾತಾವರಣದಿಂದ ರಕ್ಷಿಸುತ್ತವೆ. ಆದಾಗ್ಯೂ, ಎಸೆಫೇಟ್, ಬೈಫೆಂಥ್ರಿನ್, ಕ್ಲೋರಿಪೈಫೊಸ್, ಥೈಯಾಥೆಡಾಕ್ಸಮ್, ಡೆಲ್ಟಾಮೆಥ್ರಿನ್ ಮತ್ತು ಪೈರೆಥ್ರನ್ಸ್ ಆಧಾರಿತ ದ್ರಾವಣ ಸಿಂಪಡಿಸುವುದು ಮಲಿಬಗ್ ಗಳ ವಿರುದ್ಧ ಪರಿಣಾಮಕಾರಿಯಾಗಿದೆ.
ಮಲಿಬಗ್ ಗಳು ಅಂಡಾಕಾರದ, ಬೆಚ್ಚಗಿನ ಅಥವಾ ಸಮಶೀತೋಷ್ಣ ವಾತಾವರಣದಲ್ಲಿ ಕಂಡುಬರುವ ರೆಕ್ಕೆಗಳಿಲ್ಲದ ಕೀಟಗಳು. ಅವುಗಳ ದೇಹವನ್ನು ತೆಳುವಾದ ಬಿಳಿಪುಡಿಯಂತಹ ಮೇಣದ ಪದರವು ಆವರಿಸಿ ರಕ್ಷಿಸುತ್ತದೆ. ಅದರಿಂದಾಗಿ ಇವುಗಳು ಹತ್ತಿಯಂತೆ ಕಾಣುತ್ತವೆ. ಇವು ತಮ್ಮ ಉದ್ದನೆಯ ಚೂಪಾದ ಮತ್ತು ಹೀರಬಲ್ಲಂತಹ ಬಾಯಿಯ ಭಾಗವನ್ನು (ಸ್ಟೈಲೆಟ್ಸ್) ಸಸ್ಯದ ಅಂಗಾಂಶದೊಳಗೆ ತೂರಿಸಿ ಅವುಗಳ ಸಾರವನ್ನು ಹೀರುತ್ತವೆ. ಸಾರ ಹೀರುವಾಗ ಇವುಗಳು ಸಸ್ಯಗಳ ಒಳಗೆ ಸೇರಿಸುವ ವಿಷಪೂರಿತ ಪದಾರ್ಥಗಳಿಗೆ ಸಸ್ಯದ ಪ್ರತಿಕ್ರಿಯೆಯೇ ಈ ರೋಗಲಕ್ಷಣಗಳು. ಮಲಿಬಗ್ ಮಣ್ಣಿನಲ್ಲಿ ಮೊಟ್ಟೆಗಳನ್ನೂ ಸಹ ಇಡುತ್ತದೆ. ಮೊಟ್ಟೆ ಒಡೆದ ಬಳಿಕ ಎಳೆಯ ಮತ್ತು ಬೆಳೆದ ಕೀಟಗಳು ಹತ್ತಿರದ ಸಸ್ಯಗಳತ್ತ ತೆವಳಬಹುದು. ಅಲ್ಲದೆ, ಇವು ಗಾಳಿ, ಇರುವೆಗಳು, ಪ್ರಾಣಿಗಳು, ಮತ್ತು ಪಕ್ಷಿಗಳಿಂದ ಅಥವಾ ಕೊಯ್ಲು ಮುಂತಾದ ಕೃಷಿ ಚಟುವಟಿಕೆಗಳ ಸಮಯದಲ್ಲಿ ಹೆಚ್ಚು ದೂರದವರೆಗೂ ಹರಡಬಹುದು. ಬಿಳಿಬದನೆ, ಗೆಣಸು ಅನೇಕ ಕಳೆಗಿಡಗಳು ಸೇರಿದಂತೆ ಹಲವಾರು ಸಸ್ಯಗಳು ಇವುಗಳಿಗೆ ಪರ್ಯಾಯ ಆಶ್ರಯದಾತ ಸಸ್ಯಗಳಾಗಿವೆ. ಬೆಚ್ಚಗಿನ ಹವಾಮಾನ ಮತ್ತು ಶುಷ್ಕ ವಾತಾವರಣ ಇವುಗಳ ಜೀವನ ಚಕ್ರಕ್ಕೆ ಅನುಕೂಲಕರವಾಗಿವೆ ಮತ್ತು ರೋಗಲಕ್ಷಣಗಳನ್ನು ತೀವ್ರಗೊಳಿಸುತ್ತವೆ.