Phytoplasma asteris
ಬ್ಯಾಕ್ಟೀರಿಯಾ
ರೋಗ ಲಕ್ಷಣಗಳು ಫೈಟೋಪ್ಲಾಸ್ಮಾದ ವರ್ಗ, ಸೋಂಕು ತಗುಲಿದಾಗ ಗಿಡದ ವಯಸ್ಸು, ಗಿಡದ ಪ್ರಭೇದ ಮತ್ತು ಉಷ್ಣಾಂಶ ಹಾಗೂ ತೇವಾಂಶಗಳಂಥ ಪ್ರಾಕೃತಿಕ ಅಂಶಗಳು – ಇವುಗಳನ್ನವಲಂಬಿಸಿ ಬದಲಾಗುತ್ತವೆ. ಕಳೆನಾಶಕದಿಂದಾದ ಹಾನಿಯೆಂದು ಸುಲಭವಾಗಿ ತಪ್ಪು ತಿಳಿಯುವ ಹಾಗಿರುವ ರೋಗಲಕ್ಷಣವು ಸಾಮಾನ್ಯವಾಗಿ ಎಲೆ ನಾಳಗಳು ಬಣ್ಣಗೆಡುವುದರೊಂದಿಗೆ ಪ್ರಾರಂಭವಾಗುತ್ತದೆ. ಕ್ರಮೇಣವಾಗಿ ಕ್ಲೋರೋಸಿಸ್ ಎಲೆಯ ಉಳಿದ ಭಾಗಕ್ಕೂ ಹರಡಿ ಪೂರ್ತಿಯಾಗಿ ಆವರಿಸುತ್ತದೆ. ಕೆಲವು ಗಿಡಗಳಲ್ಲಿ ಎಲೆಯು ಕೆಂಪು ಬಣ್ಣಕ್ಕೆ ತಿರುಗುವುದೂ ಕಂಡುಬಂದಿದೆ. ಹೂವು ರೂಪುಗೆಡುವುದು ಮತ್ತು ಹಸಿರು ಬಣ್ಣಕ್ಕೆ ತಿರುಗುವುದು, ಎಲೆಯಂತೆ ಕಾಣುವ ಹೂದಳಗಳು ಮೂಡುವುದು ಮತ್ತು ಗೊಡ್ಡು ಹೂಗಳು ಕಾಣಿಸಿಕೊಳ್ಳುವುದು – ಇವು ಬೇರೆಯ ಕೆಲವು ಲಕ್ಷಣಗಳು. ಒಟ್ಟಾರೆಯಾಗಿ ಗಿಡದ ಬೇರಿನ ವ್ಯವಸ್ಥೆ ಕುಗ್ಗುತ್ತದೆ ಹಾಗೂ ಗಿಡವು ಕುಬ್ಜವಾಗಿ ಗೋಚರವಾಗುತ್ತದೆ.
ಮೆಟಾರೈಝಿಯಮ್ ಆನಿಸೋಪ್ಲಿಯೇ, ಬ್ಯೂವೆರಿಯಾ ಬಾಸಿಯಾನಾ, ಪೀಸಿಲೋಮೈಸಿಸ್ ಫೂಮೋಸೊರೋಸಿಯಸ್ ಮತ್ತು ವರ್ಟಿಸಿಲಿಯಮ್ ಲೆಸಾನೈ ಮುಂತಾದ ಪರಾವಲಂಬಿ ಶಿಲೀಂಧ್ರಗಳುಳ್ಳ ಜೈವಿಕ ಕೀಟನಾಶಕಗಳನ್ನು ಬಳಸಿ. ಜಿಗಿ ಹುಳುಗಳ ಸಂಖ್ಯೆಯನ್ನು ಮಿತಿಯಲ್ಲಿಡಲು ಅನಾಗ್ರಸ್ ಅಟೋಮಸ್ ಮುಂತಾದ ಪರಾವಲಂಬಿ ಕೀಟಗಳನ್ನು ಬಳಸಿ. ಲೇಡಿ ಬಗ್ ಮತ್ತು ಲೇಸ್‍ವಿಂಗ್ ರೀತಿಯ ಪ್ರಯೋಜನಕಾರಿ ಕೀಟಗಳು ಜಿಗಿ ಹುಳುಗಳ ಲಾರ್ವಾ ಮತ್ತು ಮೊಟ್ಟೆಗಳನ್ನು ತಿನ್ನುತ್ತವೆ, ಇವುಗಳನ್ನು ಬಳಸಿ. ಕೀಟನಾಶಕ ಮಾರ್ಜಕಗಳು ಕೂಡ ಕೆಲಸ ಮಾಡುತ್ತವೆ.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಲ್ಯಾಂಬ್ಡಾ-ಸೈಹಾಲತ್ರಿನ್, ಡೈಮೀಥೋವೇಟ್ ಮತ್ತು ಇಂಡೋಕ್ಸಾಕಾರ್ಬ್ – ಇವುಗಳನ್ನಾಧರಿಸಿದ ಉತ್ಪನ್ನಗಳು ಜಿಗಿ ಹುಳುಗಳ ಮೇಲೆ ಹೆಚ್ಚು ಕೆಲಸ ಮಾಡುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಉಪಯೋಗಕ್ಕೆ ಬರುತ್ತವೆ.
ಫೈಟೋಪ್ಲಾಸ್ಮಾ ಆಸ್ಟೆರಿಸ್ ಹೆಸರಿನ ಪರಾವಲಂಬಿ ಬ್ಯಾಕ್ಟೀರಿಯಾವೇ ಈ ರೋಗಕ್ಕೆ ಕಾರಣ. ಇದು ತನ್ನ ಜೀವನಚಕ್ರವನ್ನು ಮುಂದುವರೆಸಲು ಗಿಡದ ನಾಳೀಯ ಅಂಗಾಂಶದ ಮೇಲೆ ಅವಲಂಬಿಸುವ ಪರಾವಲಂಬಿ ಬ್ಯಾಕ್ಟೀರಿಯಾ. ಸೋಂಕು ಗಿಡದಿಂದ ಗಿಡಕ್ಕೆ ಹರಡುವುದು ಹೆಚ್ಚೂ ಕಡಿಮೆ ಕೀಟಗಳ ಮೂಲಕ, ಮುಖ್ಯವಾಗಿ ಎಲೆ ಜಿಗಿ ಹುಳುಗಳ ಮೂಲಕ. ಹೊಲದಲ್ಲಿ ಸಂಚರಿಸಲು ಹಾಗೂ ಆಹಾರ ಪಡೆಯಲು ಅನುಕೂಲಕರವಾದ ಪರಿಸ್ಥಿತಿ ಇದ್ದರೆ ಸೋಂಕು ಸುಲಭವಾಗಿ ಹರಡುತ್ತದೆ. ಉದಾಹರಣೆಗೆ, ಗಾಳಿ ಮತ್ತು ಮಳೆ ಅಥವಾ 15°C ಗಿಂತ ಕಡಿಮೆ ಉಷ್ಣಾಂಶ ಇರುವ ಪರಿಸ್ಥಿತಿಯಲ್ಲಿ ಕೀಟಗಳ ಸಂಚಾರ ಕಡಿಮೆಯಾಗುವುದರಿಂದ ಸೋಂಕು ಹರಡುವುದು ಕೂಡ ತಾತ್ಕಾಲಿಕವಾಗಿ ತಡವಾಗಬಹುದು. ಆ ಪ್ರದೇಶದ ಹವಾಮಾನ ಕೂಡ ಈ ಕೀಟಗಳ ಆಹಾರ ಪದ್ಧತಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೇರಳ ಮಳೆಯಾಗುವ ಋತುಗಳಲ್ಲಿ ಗಿಡಗಳು ಪುಷ್ಕಳವಾಗಿ ಬೆಳೆದು ಕೀಟಗಳನ್ನು ಆಕರ್ಷಿಸುತ್ತವೆ. ಎಲೆಗಳುದುರುವ ಸಮಯದಲ್ಲಿ ಚಳಿಗಾಲ ಕಳೆಯುವ ಸ್ಥಳಕ್ಕೆ ವಲಸೆ ಹೋಗುವವರೆಗೂ ಕೀಟಗಳು ಈ ಎಲೆಗಳನ್ನು ತಿಂದು ಬದುಕುತ್ತವೆ.