ಇತರೆ

ಮಾವಿನಲ್ಲಿ ಬ್ಯಾಕ್ಟೀರಿಯಲ್ ಬ್ಲಾಕ್ ಸ್ಪಾಟ್

Xanthomonas citri pv. mangiferaeindicae

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ, ನೀರಲ್ಲಿ ನೆನೆಸಿದಂತಹ ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
  • ನಂತರ, ಎಲೆ ಚುಕ್ಕೆಗಳು ಒಣಗಿ ತಿಳಿ ಕಂದು ಅಥವಾ ಬೂದು ಬಣ್ಣಕ್ಕೆ ತಿರುಗುತ್ತವೆ.
  • ಎಲೆಗಳು ಅಕಾಲಿಕವಾಗಿ ಉದುರುತ್ತವೆ.
  • ಹಣ್ಣುಗಳ ಮೇಲೆ ಅಂಟು ಸ್ರವಿಸುವ ಕುಳಿಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಇತರೆ

ರೋಗಲಕ್ಷಣಗಳು

ಎಲೆಗಳು ಮತ್ತು ಹಣ್ಣುಗಳಲ್ಲಿ ಈ ರೋಗದ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯಾದರೂ, ರೋಗ ತೀವ್ರವಾಗಿದ್ದರೆ ರೆಂಬೆ-ಕೊಂಬೆಗಳ ಮೇಲೂ ಪರಿಣಾಮ ಬೀರಬಹುದು. ಆರಂಭದಲ್ಲಿ, ಸಣ್ಣದಾದ ಕಪ್ಪು ಬಣ್ಣದ ನೀರಲ್ಲಿ ನೆನೆಸಿದಂತಹ ಗಾಯಗಳು ಎಲೆಗಳಲ್ಲಿ ಕಾಣಿಸುತ್ತವೆ. ಈ ಕಲೆಗಳಿಗೆ ಕ್ಲೋರೋಟಿಕ್ (ಕ್ಲೋರೋಫಿಲ್ ಅಂಶ ಕಡಿಮೆಯಾಗಿ ಬಣ್ಣಗೆಡುವ ಸ್ಥಿತಿ) ಅಂಚುಗಳಿರುತ್ತವೆ ಮತ್ತು ಎಲೆಯ ನಾಳಗಳಿಂದ ಬೇರ್ಪಡಿಸಲ್ಪಟ್ಟಿರುತ್ತವೆ. ರೋಗವು ಉಲ್ಬಣಿಸಿದಂತೆ, ಚುಕ್ಕೆಗಳು ಒಣಗುತ್ತವೆ ಹಾಗೂ ಎಲೆಗಳು ಬೀಳಬಹುದು. ಇದರಿಂದ ಮರದ ಎಲೆಗಳೆಲ್ಲ ಉದುರಿ ಹೋಗಬಹುದು. ಆರಂಭಿಕ ಹಂತಗಳಲ್ಲಿ ಸೋಂಕಿತ ಹಣ್ಣುಗಳಲ್ಲಿ ನೀರಲ್ಲಿ ನೆನೆಸಿದಂತಹ ತಿಳಿಯಾದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ, ಅವುಗಳು ಗಾಢ ಬಣ್ಣದ ನಕ್ಷತ್ರದ ಆಕಾರದ ಕುಳಿಗಳಾಗಿ ಬದಲಾಗುತ್ತವೆ. ಅಲ್ಲದೆ ಅವಕಾಶಕ್ಕೆ ಹೊಂಚುವ ರೋಗಕಾರಕಗಳನ್ನು ಆಕರ್ಷಿಸಬಹುದಾದ ಅಂಟನ್ನು ಸ್ರವಿಸುತ್ತವೆ. ಸೋಂಕು ಕಡಿಮೆಯಿದ್ದಲ್ಲಿ ಹಣ್ಣಿನ ಗುಣಮಟ್ಟ ಕುಸಿಯುತ್ತದೆ; ತೀವ್ರವಿದ್ದಲ್ಲಿ ಹಣ್ಣುಗಳು ಉದುರಿಹೋಗಬಹುದು. ಗಾಯಗಳಿಂದಾಗಿ ಕಾಂಡ ಮತ್ತು ಕೊಂಬೆಗಳು ಕಪ್ಪು ಬಣ್ಣಕ್ಕೆ ತಿರುಗಿ ಬಿರುಕು ಬಿಡಬಹುದು. ಇದರಿಂದಾಗಿ ಮರ ದುರ್ಬಲವಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ತಾಮ್ರದ ಆಕ್ಸಿಕ್ಲೋರೈಡ್ ಹೊಂದಿರುವ ಉತ್ಪನ್ನಗಳನ್ನು ನಿಯಮಿತವಾಗಿ ಸಿಂಪಡಿಸುವುದರಿಂದ ಸೋಂಕನ್ನು ತಡೆಗಟ್ಟಬಹುದು. ಸೋಂಕಿತ ಮರಗಳ ಮೇಲೆ ಅಸಿನೆಟೊಬ್ಯಾಕ್ಟರ್ ಬೌಮಾನಿಯಂತಹ ಜೈವಿಕ ಕಂಟ್ರೋಲ್ ಏಜೆಂಟ್‌ಗಳು ಕೂಡ ಎಕ್ಸ್. ಸಿಟ್ರಿಯ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಥಿಯೊಫನೇಟ್-ಮೀಥೈಲ್ ಅಥವಾ ಬೆನ್ಝಿಮಿಡಝಾಲನ್ನು ಹೊಂದಿರುವ ಸಿಂಪಡಣೆಗಳನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ಈ ರೋಗವು ಕ್ಸಾಂತೋಮೋನಾಸ್ ಸಿಟ್ರಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಜೀವಂತ ಅಂಗಾಂಶಗಳಲ್ಲಿ ಇದು 8 ತಿಂಗಳವರೆಗೆ ಬದುಕುಳಿಯಬಹುದು. ಇದು ಗಾಯಗಳು ಮತ್ತು ನೈಸರ್ಗಿಕ ಬಿರುಕುಗಳ ಮೂಲಕ ಮರಗಳಿಗೆ ಸೋಂಕು ತಗುಲುವಂತೆ ಮಾಡುತ್ತದೆ. ರೋಗಕಾರಕಗಳು ಮರದಿಂದ ಮರಕ್ಕೆ ಅಥವಾ ತೋಟಗಳ ಮಧ್ಯೆ ಗಾಳಿ ಮಿಶ್ರಿತ ಮಳೆಯಿಂದ, ಅಥವಾ ರೆಂಬೆಗಳನ್ನು ಕತ್ತರಿಸುವುದಕ್ಕೆ ಬಳಸುವ ಉಪಕರಣಗಳ ಮೂಲಕ ಹರಡುತ್ತವೆ. ಪರ್ಯಾಯವಾಗಿ, ಸೋಂಕಿತ ಗಿಡದ ಪದಾರ್ಥಗಳಿಂದ ಅಥವಾ ಹಣ್ಣುಗಳಲ್ಲಿ ಸಂಪರ್ಕದ ಮೂಲಕ ಕೂಡ ರೋಗ ಹರಡುತ್ತದೆ. ಉಷ್ಣತೆಯು 25 °C ಮತ್ತು 30 °C ನಡುವೆ ಇದ್ದಾಗ ಸೋಂಕಿಗೆ ಅತ್ಯಂತ ಅನುಕೂಲಕರ. ಹೆಚ್ಚಿನ ತೇವಾಂಶ ಸಹ ಸೋಂಕಿಗೆ ಇಂಬು ಕೊಡುತ್ತದೆ. ಗಾಳಿಗೆ ತಡೆಗೋಡೆ ಕಟ್ಟುವುದರ ಮೂಲಕ ಅಥವಾ ಹೊಲದ ಸುತ್ತ ದಟ್ಟವಾದ ಎಲೆಗಳುಳ್ಳ ಜಾತಿಯ ಮರಗಳನ್ನು ನೆಡುವುದರಿಂದ ರೋಗ ಹರಡುವುದನ್ನು ಕಡಿಮೆ ಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ನೆಡಲು ಅಥವಾ ಕಸಿ ಮಾಡಲು ಆರೋಗ್ಯಕರ ಸಾಮಗ್ರಿಗಳನ್ನು ಬಳಸಿ.
  • ಕೆಲಸದ ಉಪಕರಣ ಮತ್ತು ಸಲಕರಣೆಗಳನ್ನು ಶುಚಿಯಾಗಿಡಿ, ಅವುಗಳಲ್ಲಿರಬಹುದಾದ ಸೋಂಕಿನ ಅಂಶವನ್ನು ತೆಗೆದು ಹಾಕಿ.
  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬಳಸಿ.
  • ಮರಗಳ ನಡುವೆ ಚೆನ್ನಾಗಿ ಗಾಳಿ ಆಡುವಂತೆ ನೋಡಿಕೊಳ್ಳಿ.
  • ಸೋಂಕಿತ ರೆಂಬೆ-ಕೊಂಬೆಗಳನ್ನು ಮತ್ತು ಹಣ್ಣುಗಳನ್ನು ನಿಯಮಿತವಾಗಿ ತೆಗೆದುಹಾಕಿ.
  • ಕೃಷಿ ಕೆಲಸದ ಸಮಯದಲ್ಲಿ ಮಾವಿನ ಮರಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಿ.
  • ಬಲವಾಗಿ ಬೀಸುವ ಗಾಳಿಯಿಂದ ಹಾಗೂ ಭಾರಿ ಮಳೆಯಿಂದ ರಕ್ಷಿಸಲು ತಡೆ ನಿರ್ಮಿಸಿ.
  • ಸೋಂಕಿತ ಹಣ್ಣುಗಳು ಮತ್ತು ಮರದ ಭಾಗಗಳನ್ನು ನಾಶ ಮಾಡಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ