Rhizoctonia solani
ಶಿಲೀಂಧ್ರ
ರೋಗವು ಹೂಬಿಡುವ ಪೂರ್ವ ಹಂತದಲ್ಲಿ 40-50 ದಿನಗಳಷ್ಟು ಹಳೆಯ ಸಸ್ಯಗಳಲ್ಲಿ ಕಾಣಿಸಿಕೊಳ್ಳುತ್ತದೆ ಆದರೆ ಕಿರಿಯ ಗಿಡಗಳಲ್ಲೂ ಸಹ ಕಂಡು ಬರಬಹುದು. ಎಲೆಗಳು, ತೆನೆ ಕವಚಗಳು ಮತ್ತು ಕಾಂಡಗಳ ಮೇಲೆ ರೋಗ ಲಕ್ಷಣಗಳು ಬೆಳೆಯುತ್ತವೆ ಮತ್ತು ನಂತರ ತೆನೆಗೆ ಹರಡಬಹುದು. ಎಲೆಗಳು ಮತ್ತು ತೆನೆ ಕವಚಗಳ ಮೇಲೆ ನೆನೆಸಿದ, ಬಣ್ಣ ಕಳೆದುಕೊಂಡ ಕೇಂದ್ರೀಕೃತ ಪಟ್ಟೆಗಳು ಮತ್ತು ಉಂಗುರಗಳು ಗೋಚರಿಸುತ್ತವೆ. ಸಾಮಾನ್ಯವಾಗಿ ಕಂದು, ಕಪ್ಪು ಅಥವಾ ಬೂದು ಬಣ್ಣದಲ್ಲಿರುತ್ತವೆ. ಸಾಮಾನ್ಯವಾಗಿ, ಈ ಲಕ್ಷಣಗಳು ಮೊದಲಿಗೆ ನೆಲದ ಮೇಲಿನ ಮೊದಲ ಮತ್ತು ಎರಡನೇ ಎಲೆ ಕವಚಗಳ ಮೇಲೆ ಕಂಡುಬರುತ್ತವೆ. ಕಾಲಾನಂತರದಲ್ಲಿ, ಸಣ್ಣ, ದುಂಡನೆಯ, ಕಪ್ಪು ಚುಕ್ಕೆಗಳಿರುವ ಎದ್ದುಕಾಣುವ ಹಗುರವಾದ ಕಂದು ಹತ್ತಿಯಂತಹ ಬೆಳವಣಿಗೆ ಸೋಂಕಿತ ಅಂಗಾಂಶಗಳ ಮೇಲೆ ಬೆಳೆಯುತ್ತದೆ ಮತ್ತು ನಂತರ ತೆನೆಗೂ ಹರಡಬಹುದು. ಅಭಿವೃದ್ಧಿ ಹೊಂದುತ್ತಿರುವ ಜೊಂಡು ಸಂಪೂರ್ಣವಾಗಿ ಹಾನಿಗೊಳಗಾಗುತ್ತದೆ. ಮತ್ತು ಸಿಪ್ಪೆಯ ಎಲೆಗಳು ಬಿರುಕು ಬಿಡುವ ಮೂಲಕ ಅಕಾಲಿಕವಾಗಿ ಒಣಗುತ್ತವೆ. ರೋಗದ ತೀವ್ರತೆಯು, ಸೋಂಕಿನ ಸಮಯದಲ್ಲಿ ತೆನೆಯ ಬೆಳವಣಿಗೆಯ ಹಂತದ ಮೇಲೆ ಅವಲಂಬಿತವಾಗಿರುತ್ತದೆ. ಸಸಿ ಬಾಧಿತವಾಗಿದ್ದರೆ, ಬೆಳೆಯುವ ಬಿಂದುಗಳು ಸಾಯುತ್ತವೆ ಮತ್ತು ಇಡೀ ಸಸ್ಯ ಒಂದು ವಾರದೊಳಗೆ ನಾಶವಾಗುತ್ತದೆ.
ರೋಗದ ಸಂಭವನೀಯತೆಯನ್ನು ಮತ್ತು ತೀವ್ರತೆಯನ್ನು ಕಡಿಮೆ ಮಾಡಲು, ಮೆಕ್ಕೆಜೋಳದ ಬೀಜಗಳನ್ನು 10 ನಿಮಿಷಗಳ ಕಾಲ 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಮತ್ತು 5% ನಷ್ಟು ಎಥೆನಾಲ್ ನಲ್ಲಿ ಸೋಂಕು ರಹಿತವಾಗಿಸಿ, ಮೂರು ಬಾರಿ ನೀರಿನಿಂದ ತೊಳೆದು ಒಣಗಿಸಬಹುದು. ಬ್ಯಾಸಿಲಸ್ ಸಬ್ಟಿಲೀಸ್ ಹೊಂದಿರುವ ಸೂತ್ರೀಕರಣಗಳೊಂದಿಗೆ ಒಂದು ಹೆಚ್ಚುವರಿ ಚಿಕಿತ್ಸೆಯು ಇದರ ಪರಿಣಾಮವನ್ನು ಹೆಚ್ಚಿಸುತ್ತದೆ. ಶಿಲೀಂಧ್ರ ಟ್ರೈಕೋಡರ್ಮಾ ಹಾರ್ಜಿಯಾನಂ ಅಥವಾ ಟಿ. ವಿರಿಡಿಯನ್ನು ಒಳಗೊಂಡಿರುವ ಉತ್ಪನ್ನಗಳು ಸಹ ರೋಗದ ಹರಡುವಿಕೆಯನ್ನು ಸೀಮಿತಗೊಳಿಸಲು ಯಶಸ್ವಿಯಾಗಿ ಬಳಸಲ್ಪಟ್ಟಿವೆ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮೆಕ್ಕೆಜೋಳದ ಬೀಜಗಳನ್ನು ಕ್ಯಾಪ್ಟಾನ್, ಥೀರಮ್ ಅಥವಾ ಮೆಟಲಾಕ್ಸಿಲ್ ನೊಂದಿಗೆ ಚಿಕಿತ್ಸೆಗೆ ಒಳಪಡಿಸಿ, ಮೂರು ಬಾರಿ ಸೋಂಕುರಹಿತ ಡಿಸ್ಟಿಲ್ಡ್ ವಾಟರ್ ನಲ್ಲಿ ತೊಳೆದು ಮತ್ತು ಗಾಳಿಯಲ್ಲಿ ಒಣಗಿಸಿ ರೋಗ ತಡೆಗಟ್ಟುವ ಕ್ರಮ ಕೈಗೊಳ್ಳಬಹುದು. ಶಿಲೀಂಧ್ರನಾಶಕ ಸಿಂಪಡಿಸುವಿಕೆಯು ರೋಗಕ್ಕೆ ತುತ್ತಾಗುವ ಪ್ರಭೇದಗಳನ್ನು ಬೆಳೆಸಿದಾಗ ಮತ್ತು ಹವಾಮಾನ ಪರಿಸ್ಥಿತಿಗಳು ರೋಗದ ತೀವ್ರತೆಗೆ ಅನುಗುಣವಾಗಿದ್ದಾಗ ಆರ್ಥಿಕವಾಗಿ ಕಾರ್ಯಸಾಧ್ಯವಾಗಬಹುದು. ಪ್ರೊಪಿಕಾನಜೋಲ್ ಹೊಂದಿರುವ ಉತ್ಪನ್ನಗಳು ಕೆಟ್ಟ ರೋಗಲಕ್ಷಣಗಳನ್ನು ತಪ್ಪಿಸುವಲ್ಲಿ ಪರಿಣಾಮಕಾರಿಯಾಗುತ್ತವೆ.
ಮಣ್ಣಿನಿಂದ ಹುಟ್ಟುವ ಶಿಲೀಂಧ್ರ ರೈಜೊಕ್ಟೊನಿಯಾ ಸೊಲಾನಿಯಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮಣ್ಣಿನಲ್ಲಿ, ಸೋಂಕಿತ ಬೆಳೆಯ ಅವಶೇಷಗಳ ಮೇಲೆ ಅಥವಾ ಹುಲ್ಲು ಕಳೆಗಳ ಮೇಲೆ ಬದುಕಬಲ್ಲದು. ಬೆಳವಣಿಗೆಯ ಋತುವಿನ ಆರಂಭದಲ್ಲಿ ಅನುಕೂಲಕರ ಆರ್ದ್ರತೆ ಮತ್ತು ಉಷ್ಣತೆಗಳಿಗೆ (15 ರಿಂದ 35 °C, ಸೂಕ್ತವಾದುದು 30 °C) ಪ್ರತಿಕ್ರಿಯೆಯಾಗಿ, ಶಿಲೀಂಧ್ರಗಳು ಬೆಳವಣಿಗೆ ಪುನರಾರಂಭಿಸುತ್ತವೆ ಮತ್ತು ಹೊಸದಾಗಿ ನೆಟ್ಟ ಆಶ್ರಯದಾತ ಬೆಳೆಗಳನ್ನು ಗುರಿಯಾಗಿಸಿಕೊಳ್ಳುತ್ತವೆ. 70% ರಷ್ಟು ತೇವಾಂಶವಿದ್ದಾಗ, ರೋಗ ಅಭಿವೃದ್ಧಿಯು ಕಡಿಮೆ / ಇರುವುದೇ ಇಲ್ಲ. ಆದರೆ 90-100% ಸಾಪೇಕ್ಷ ಆರ್ದ್ರತೆ, ಹೆಚ್ಚಿನ ಮಟ್ಟದಲ್ಲಿ ರೋಗವನ್ನು ಪ್ರಚೋದಿಸುತ್ತದೆ. ನೀರಾವರಿ ನೀರು, ಪ್ರವಾಹ ಅಥವಾ ಸೋಂಕಿತ ಮಣ್ಣುಗಳನ್ನು ಹೊತ್ತ ಉಪಕರಣಗಳು ಅಥವಾ ಬಟ್ಟೆಗಳಿಂದ ಶಿಲೀಂಧ್ರಗಳು ಹರಡುತ್ತವೆ. ಉಷ್ಣವಲಯ ಮತ್ತು ಉಪೋಷ್ಣವಲಯದ ಆರ್ದ್ರತೆ ಮತ್ತು ಬೆಚ್ಚಗಿನ ವಾತಾವರಣದಲ್ಲಿ ಈ ರೋಗ ಹೆಚ್ಚು ಪ್ರಚಲಿತವಾಗಿದೆ. ಶಿಲೀಂಧ್ರನಾಶಕಗಳನ್ನು ಬಳಸಿ ನಿಯಂತ್ರಿಸುವುದು ತುಂಬಾ ಕಷ್ಟ. ಆದ್ದರಿಂದ ನಿರ್ವಹಣಾ ಪದ್ಧತಿಗಳ ಸರಿಯಾದ ಸಂಯೋಜನೆ ಅಗತ್ಯವಾಗಿದೆ.