Macrophomina phaseolina
ಶಿಲೀಂಧ್ರ
ಗೋಚರವಾಗುವ ಮೊದಲ ರೋಗಲಕ್ಷಣವೆಂದರೆ ಗಿಡಗಳು ಬಾಡುವುದು. ತೀವ್ರತರವಾದ ಸಂದರ್ಭಗಳಲ್ಲಿ ಎಲೆಗಳು ಸಂಪೂರ್ಣವಾಗಿ ಉದುರಿ ಹೋಗಬಹುದು ಅಥವಾ ಗಿಡವು ನೆಲಕ್ಕುರುಳಬಹುದು. ಗಿಡವು ಬಲು ಬೇಗನೆ ಬಾಡುತ್ತ ಹೋಗುವುದು ಈ ರೋಗದ ವಿಶೇಷ ಲಕ್ಷಣ. ಇದು ಬೇರು ಕೊಳೆ ರೋಗವನ್ನು ಈ ರೋಗಲಕ್ಷಣವನ್ನು ಉಂಟುಮಾಡುವ ಇತರ ರೋಗಗಳಿಂದ ಪ್ರತ್ಯೇಕಿಸಲು ಬಳಸಬಹುದಾದ ಒಂದು ಲಕ್ಷಣವಾಗಿದೆ. ಆರಂಭದಲ್ಲಿ, ಕೆಲವೊಂದು ಸಸ್ಯಗಳಲ್ಲಿ ಮಾತ್ರ ಕಂಡು ಬಂದರೂ ಕಾಲಾನಂತರದಲ್ಲಿ ಈ ರೋಗವು ಸೋಂಕು ತಗುಲಿದ ಗಿಡಗಳ ಸುತ್ತಲೂ ವೃತ್ತಾಕಾರದಲ್ಲಿ ಹರಡುತ್ತಾ ಹೋಗುತ್ತದೆ. ಗಿಡವು ಬಾಡುವುದು ಕಣ್ಣಿಗೆ ಕಾಣುವ ಲಕ್ಷಣವಾಗಿದ್ದರೂ, ವಾಸ್ತವದಲ್ಲಿ ಅದು ರೋಗದ ತಡವಾದ ಅಭಿವ್ಯಕ್ತಿ. ಇದು ಬೇರುಗಳ ಕೊಳೆತದಿಂದ ನೆಲದ ಮೇಲಿರುವ ಗಿಡದ ಭಾಗಗಳಿಗೆ ಸಾಕಷ್ಟು ನೀರು ಮತ್ತು ಪೋಷಕಾಂಶಗಳು ತಲುಪುತ್ತಿಲ್ಲ ಎನ್ನುವುದರ ಸಂಕೇತವಷ್ಟೆ. ಕೊನೆಯಲ್ಲಿ ಪೀಡಿತ ಗಿಡಗಳು ಸ್ಥಿರತೆ ಕಳೆದುಕೊಂಡು ಬೀಸುವ ಗಾಳಿಗೆ ನೆಲಕ್ಕೊರಗಬಹುದು ಅಥವಾ ಸುಲಭವಾಗಿ ನೆಲದಿಂದ ಕಿತ್ತು ತೆಗೆಯಬಹುದು. ಆರೋಗ್ಯಕರ ಗಿಡಗಳಿಗೆ ಹೋಲಿಸಿದರೆ ಬೇರುಗಳ ತೊಗಟೆ ಹಳದಿ ಬಣ್ಣದಲ್ಲಿರುತ್ತದೆ ಹಾಗೂ ಸಾಮಾನ್ಯವಾಗಿ ಚೂರುಚೂರಾಗಿರುತ್ತದೆ.
ಹತ್ತಿಯಲ್ಲಿ ಬೇರು ಕೊಳೆ ರೋಗಕ್ಕೆ ಪರಿಣಾಮಕಾರಿ ನಿಯಂತ್ರಣವನ್ನು ಒದಗಿಸುವ ಯಾವುದೇ ಸಾವಯವ ಸಾಧನ ಲಭ್ಯವಿಲ್ಲ. ಟ್ರೈಕೋಡರ್ಮಾ ಶಿಲೀಂಧ್ರದ ಕೆಲವು ಪ್ರಭೇದಗಳು ಭರವಸೆಯ ಫಲಿತಾಂಶಗಳನ್ನು ತೋರಿಸಿದ್ದು, ಅವುಗಳಿಂದ ಸಂಸ್ಕರಿಸಿದ ಹತ್ತಿ ಮೊಳಕೆಗಳು ಬದುಕುಳಿಯುವ ಸಂಭವನೀಯತೆಯನ್ನು ಗಣನೀಯವಾಗಿ ಹೆಚ್ಚಿಸಿವೆ. ಇದನ್ನು ವಾಣಿಜ್ಯೀಕರಣಕ್ಕಾಗಿ ಪರಿಗಣಿಸಲಾಗುತ್ತಿದೆ. ಝಿಂಕ್ ಸಲ್ಫೇಟಿನ ಕೆಲವು ಸಾವಯವ ಸೂತ್ರಗಳನ್ನು ರೋಗ ಹರಡುವುದನ್ನು ತಡೆಗಟ್ಟಲು ಸಿಂಪಡಿಸಬಹುದು.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಬೀಜ ಅಥವಾ ಮಣ್ಣಿನ ಮೇಲೆ ಬಳಸುವ ಥೀರಮ್, ಥಿಯೋಫನೇಟ್ ಮೀಥೈಲ್, ಸತು ಸಲ್ಫೇಟ್ ಮತ್ತು ಕ್ಯಾಪ್ಟನ್ಗಳಂತಹ ಶಿಲೀಂಧ್ರನಾಶಕಗಳನ್ನು ಹೊಂದಿರುವ ವಿವಿಧ ಉತ್ಪನ್ನಗಳು ಬೇರು ಕೊಳೆ ರೋಗವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿವೆ.
ಬೀಜ ಮತ್ತು ಮಣ್ಣಿನಿಂದ ಹರಡುವ ಶಿಲೀಂಧ್ರವಾದ, ಮ್ಯಾಕ್ರೊಫೊಮಿನ ಫೇಸೋಲಿನದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಪ್ರಪಂಚದಾದ್ಯಂತ ಹತ್ತಿಗೆ ತಗುಲುವ ಮುಖ್ಯವಾದ ರೋಗ. ಇದು ಮೆಣಸು, ಕಲ್ಲಂಗಡಿ ಅಥವಾ ಸೌತೆಕಾಯಿಗಳನ್ನೊಳಗೊಂಡಂತೆ ಸುಮಾರು 300 ವಿಭಿನ್ನ ಆಶ್ರಯದಾತ ಗಿಡಗಳಿಗೆ ಹಾನಿ ಮಾಡುತ್ತದೆ. ಈ ರೋಗಕಾರಕವು ಮಣ್ಣಿನಲ್ಲಿ ಉಳಿದುಕೊಂಡಿರುತ್ತದೆ ಮತ್ತು ಇದನ್ನು ವಿಶೇಷವಾಗಿ ಹತ್ತಿ ಬೆಳೆಯುವ ಸಮಯದ ಕೊನೆಯಲ್ಲಿ, ಬೇರುಗಳಲ್ಲಿ ಗುರುತಿಸಬಹುದು. ಗಿಡಗಳು ನೀರಿನ ಕೊರತೆ ಅನುಭವಿಸುತ್ತಿರುವಾಗ ಮಣ್ಣಿನಲ್ಲಿ ಈ ಶಿಲೀಂಧ್ರ ಬೆಳೆಯುತ್ತದೆ. ಹಾಗಾಗಿ, ಬೇಸಿಗೆಯ ಮಧ್ಯದಲ್ಲಿ ಹೆಚ್ಚಾಗಿ ರೋಗದ ದಾಳಿಯಾಗಿ ಶರತ್ಕಾಲ ಬರುವಷ್ಟರಲ್ಲಿ ಕಡಿಮೆಯಾಗುತ್ತದೆ ಎನ್ನುವುದರಲ್ಲಿ ಏನೂ ಆಶ್ಚರ್ಯವಿಲ್ಲ. 15-20 % ತೇವಾಂಶ ಇರುವ ಒಣ ಮಣ್ಣು ಮತ್ತು 35 ರಿಂದ 39°C ನಡುವಿನ ಬಿಸಿಯಾದ ತಾಪಮಾನಗಳು ಶಿಲೀಂಧ್ರಕ್ಕೆ ಸೂಕ್ತ ವಾತಾವರಣ ಒದಗಿಸುತ್ತದೆ.