ಇತರೆ

ಮಸೂರದ ತುಕ್ಕು ರೋಗ

Uromyces viciae-fabae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸಣ್ಣ, ಬಿಳಿ, ಸ್ವಲ್ಪ ಉಬ್ಬಿದ ಚುಕ್ಕೆಗಳು ಎಲೆಗಳ ಮೇಲ್ಮೈಯಲ್ಲಿ ಕಂಡುಬರುತ್ತವೆ.
  • ಅವುಗಳು ದೊಡ್ಡದಾಗುತ್ತಿದ್ದಂತೆ, ಈ ಕಲೆಗಳು ಪುಡಿಪುಡಿಯಾಗಿ, ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ.
  • ಸಾಮಾನ್ಯವಾಗಿ ತೆಳ್ಳನೆಯ ಹೊರ ವೃತ್ತದಿಂದ ಆವೃತವಾಗಿರುತ್ತದೆ.
  • ಎಲೆಗಳು, ಕಾಂಡಗಳು ಮತ್ತು ಬೀಜಕೋಶಗಳ ಮೇಲಿನ ಮತ್ತು ಕೆಳಗಿನ ಭಾಗಗಳಲ್ಲಿ ಈ ಗಂಟುಗಳು ಕಂಡುಬರುತ್ತವೆ.
  • ಸೋಂಕು ಅತಿಯಾದಾಗ ಎಲೆಗಳು ಉದುರುತ್ತವೆ.
  • ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಗಿಡ ಅಕಾಲಿಕವಾಗಿ ಸಾಯುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು
ಕಡಲೆ ಕಾಳು & ಬೇಳೆ
ಮಸೂರ ಅವರೆ
ಬಟಾಣಿ

ಇತರೆ

ರೋಗಲಕ್ಷಣಗಳು

ಎಲೆಗಳು, ಕಾಂಡಗಳು ಮತ್ತು ಬೀಜಕೋಶಗಳು ಸೋಂಕಿಗೆ ಒಳಗಾಗಬಹುದು. ಮೊಟ್ಟಮೊದಲ ಲಕ್ಷಣಗಳೆಂದರೆ ಎಲೆಗಳ ಮೇಲ್ಮೈಯಲ್ಲಿ ಬೆಳೆಯುವ ಚಿಕ್ಕ, ಬಿಳುಪಾದ, ಉಬ್ಬಿದ ಚುಕ್ಕೆಗಳು. ಕಲೆಗಳು ದೊಡ್ಡದಾಗುತ್ತಿದ್ದಂತೆ, ಪುಡಿಯಂತಾಗಿ ಕಿತ್ತಳೆ ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ, ಮತ್ತು ಸಾಮಾನ್ಯವಾಗಿ ತೆಳುವಾದ ಹೊರ ವೃತ್ತದಿಂದ ಆವೃತವಾಗಿರುತ್ತವೆ. ಎಲೆಗಳು, ಕಾಂಡಗಳು ಮತ್ತು ಬೀಜಕೋಶಗಳ ಮೇಲಿನ ಮತ್ತು ಕೆಳಗಿನ ಭಾಗಗಳಲ್ಲಿ ಈ ಗಂಟುಗಳನ್ನು ನೋಡಬಹುದು. ನಂತರದ ಹಂತದಲ್ಲಿ, ದ್ವಿತೀಯಕ ಗಂಟುಗಳು ಪ್ರಾಥಮಿಕ ಗಂಟುಗಳೊಳಗೆ ಬೆಳೆಯುತ್ತವೆ,ಈ ಗಂಟುಗಳ ಮಧ್ಯಬಾಗದಲ್ಲಿ ಒಂದು ಚುಕ್ಕೆ ಇದ್ದು ಇವು O ಆಕಾರದಲ್ಲಿರುತ್ತವೆ. ತುಕ್ಕುರೋಗದ ಲಕ್ಷಣಗಳು ಮತ್ತು ತೀವ್ರತೆಯು ಆಗಿನ ಹವಾಮಾನ ಪರಿಸ್ಥಿತಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ತಾಪಮಾನವು 20ºC ಗಿಂತ ಹೆಚ್ಚಿನದಾಗಿದ್ದರೆ ಅದು ಸಸ್ಯದ ಮೇಲೆ ವೇಗವಾಗಿ ಬೆಳೆಯುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ಆವರಿಸುತ್ತದೆ. ತೀವ್ರ ಸೋಂಕಿನ ಸಂದರ್ಭದಲ್ಲಿ ಎಲೆಗಳು ಉದುರುತ್ತವೆ, ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಅಕಾಲಿಕವಾಗಿ ಸಾಯುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ರೋಗಕಾರಕವನ್ನು ನಿಯಂತ್ರಿಸಲು ಜೈವಿಕ ನಿಯಂತ್ರಣ ಏಜೆಂಟ್ ಗಳಿಲ್ಲ. ಬೇವಿನ ಎಣ್ಣೆ, ಜಟ್ರೊಫಾ ಎಣ್ಣೆ ಅಥವಾ ಸಾಸಿವೆ ಎಣ್ಣೆಯ ರೋಗನಿರೋಧಕ ಸ್ಪ್ರೇಗಳು, ರೋಗದ ತೀವ್ರತೆಯನ್ನು ಕಡಿಮೆ ಮಾಡುವುದಲ್ಲದೆ ಉತ್ತಮ ಧಾನ್ಯದ ಇಳುವರಿಯನ್ನು ನೀಡುತ್ತದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ಬೀಜಗಳ ಮೂಲಕ ಹರಡುವುದನ್ನು ಕಡಿಮೆ ಮಾಡಲು ಫೀನೈಲ್ ಮರ್ಕ್ಯುರಿ ಆಸಿಟೇಟ್ ಮತ್ತು ಡಿಕ್ಲೋಬುಟ್ರಾಜೋಲ್ ನೊಂದಿಗೆ ಬೀಜ ಸಂಸ್ಕರಣೆ ಮಾಡಬಹುದು. ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಶಿಲೀಂಧ್ರನಾಶಕಗಳನ್ನು ಎಲೆಯ ಮೇಲೆ ಸಿಂಪಸಿ, ತದನಂತರ 10 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸುವ ಮೂಲಕ ರೋಗದ ಪ್ರಮಾಣ ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದು. ಮಸೂರದ ತುಕ್ಕುರೋಗ ನಿರ್ವಹಣೆಗಾಗಿ ಫ್ಲುಟ್ರಿಯಾಫೋಲ್, ಮೆಟಲಾಕ್ಸಿಲ್ ಅಥವಾ ಟ್ರೈಡೆಮೊರ್ಫ್ ಅನ್ನು ಶಿಫಾರಸು ಮಾಡಲಾಗಿದೆ. ಮ್ಯಾನ್ಕೊಜೆಬ್, ಕ್ಲೋರೊಥಲೋನಿಲ್ ಮತ್ತು ತಾಮ್ರವನ್ನು ಒಳಗೊಂಡಿರುವ ಉತ್ಪನ್ನಗಳನ್ನೂ ಬಳಸಬಹುದು.

ಅದಕ್ಕೆ ಏನು ಕಾರಣ

ಈ ರೋಗಲಕ್ಷಣವು ಉರೋಮೀಸಸ್ ವೈಸಿಯೇ-ಫ್ಯಾಬೇ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಸಸ್ಯದ ಉಳಿಕೆಗಳು, ತಾವಾಗಿಯೇ ಬೆಳೆಯುವ ಸಸ್ಯಗಳು ಮತ್ತು ಯಾವುದೇ ಬೆಳೆಗಳಿಲ್ಲದಿದ್ದಾಗ ಕಳೆಗಳಲ್ಲಿ ಉಳಿಯುತ್ತವೆ. ಇದು ಏಕಕಾಲದಲ್ಲಿ ಬೀಜಗಳಲ್ಲೂ ಇರಬಹುದು. ಇದರ ಆಶ್ರಯದಾತ ಸಸ್ಯಗಳು ಕಡಿಮೆ. ಮಸೂರ ಬಿಟ್ಟರೆ, ಹುರಳಿಕಾಯಿ ಮತ್ತು ಬಟಾಣಿ ಇದರ ಆಶ್ರಯದಾತ ಸಸ್ಯವಾಗಿದೆ. ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ (17 ರಿಂದ 25 °C ಉಷ್ಣತೆ ಮತ್ತು ಎಲೆಗಳ ಸುದೀರ್ಘ ಆರ್ದ್ರತೆ) ಇದು ಸೋಂಕು ಬೀರುವ ಬೀಜಕಗಳನ್ನು ಉತ್ಪಾದಿಸುತ್ತದೆ ಮತ್ತು ಗಾಳಿಯ ಮುಖಾಂತರ ದೂರದವರೆಗೂ ಸಾಗಿ ಹೊಸ ಸಸ್ಯಗಳು ಅಥವಾ ತೋಟಗಳಿಗೆ ಹರಡುತ್ತದೆ. ಜಮೀನಿನ ನಡುವೆ ಸಸ್ಯದ ಉಳಿಕೆಗಳ ಸಾಗಣೆ, ಸೋಂಕಿತ ಹುಲ್ಲು, ಬಟ್ಟೆ, ಉಪಕರಣಗಳು ಮತ್ತು ಯಂತ್ರಗಳ ಮೂಲಕವೂ ಈ ಸೋಂಕು ಹರಡಬಹುದು. ಇದರ ಹರಡುವ ಸಾಮರ್ಥ್ಯದಿಂದಾಗಿಯೇ ಇದನ್ನು ಆರ್ಥಿಕವಾಗಿ ಭಾರೀ ಹಾನಿಕಾರಕ ಎಂದು ಪರಿಗಣಿಸಲಾಗಿದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಬೀಜಗಳನ್ನು ಬಳಸಲು ಮರೆಯದಿರಿ.
  • ಲಭ್ಯವಿದ್ದರೆ ನಿರೋಧಕ ವಿಧಗಳನ್ನು ಆರಿಸಿ.
  • ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಿ.
  • ಕೃಷಿ ಭೂಮಿಯಿಂದ ಕಳೆ ಗಿಡಗಳು ಮತ್ತು ತಾವಾಗೇ ಬೆಳೆದ ಸಸ್ಯಗಳನ್ನು ಕಿತ್ತು ತೆಗೆಯಿರಿ.
  • ರೋಗದ ಚಿಹ್ನೆಗಳಿಗಾಗಿ ಜಮೀನಿನ ಮೇಲ್ವಿಚಾರಣೆ ಮಾಡಿ.
  • ಜಮೀನು ಅಥವಾ ತೋಟಗಳ ನಡುವೆ ಸೋಂಕಿತ ಸಸ್ಯದ ಉಳಿಕೆಗಳನ್ನು ಸಾಗಿಸದಂತೆ ಎಚ್ಚರಿಕೆ ವಹಿಸಿ.
  • ಕೃಷಿ ಕೆಲಸದ ನಂತರ ಉಪಕರಣಗಳು ಮತ್ತು ಸಾಧನಗಳನ್ನು ಸ್ವಚ್ಛಗೊಳಿಸಿ ಮತ್ತು ಸೋಂಕು ನಿವಾರಿಸಿ.
  • ಸುಗ್ಗಿಯ ನಂತರ ಸೋಂಕಿತ ಸಸ್ಯಗಳನ್ನು ಸುಡುವ ಮೂಲಕ, ಮೇಯಲು ಬಿಡುವ ಮೂಲಕ ಮತ್ತು ಹೂಳುವ ಮೂಲಕ ತೆಗೆದುಹಾಕಿ.
  • ಅತಿ ಹೆಚ್ಚು ರೋಗಲಕ್ಷಣಗಳನ್ನು ತಪ್ಪಿಸಲು ನೆಡುವ ಸಮಯವನ್ನು ಬದಲಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ