ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ನ ಎಲೆ ಚುಕ್ಕೆ ರೋಗ

Pseudocercospora angolensis

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ, ಗಾಢ-ಕಂದು ಅಂಚಿರುವ ಮತ್ತು ಹಳದಿ ವರ್ತುಲವಿರುವ ಬೂದುಬಣ್ಣದಿಂದ ತಿಳಿ-ಕಂದು ಬಣ್ಣದ ವೃತ್ತಾಕಾರದ ಚುಕ್ಕೆಗಳು.
  • ಉಬ್ಬಿದ, ಹಳದಿ ವರ್ತುಲವಿರುವ ಗೆಡ್ಡೆ ರೀತಿಯ ಆಕಾರಗಳು.
  • ಬೆಳೆದ ಹಣ್ಣುಗಳಲ್ಲಿ, ಕೆಲವೊಮ್ಮೆ ಮಧ್ಯದಲ್ಲಿ ಕಂದು ಗುಳಿಯಿರುವ ಸಮತಟ್ಟಾದ ಗಾಯಗಳು ಕಂಡುಬರುತ್ತವೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ವೃತ್ತಾಕಾರದ, ಪ್ರತ್ಯೇಕಿತ ಕಲೆಗಳು ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಅವುಗಳ ವ್ಯಾಸ 10 ಮಿಮೀ ವರೆಗೂ ಇರಬಹುದು. ಇವು ಒಣ ಹವಾಮಾನದಲ್ಲಿ ತೆಳು-ಕಂದು ಅಥವಾ ಬೂದು ಬಣ್ಣದ ಕೇಂದ್ರವಿರುವ, ಕೆಂಪು ಮಿಶ್ರಿತ ಅಂಚಿರುವ ಮತ್ತು ಎದ್ದು ಕಾಣುವಂತಹ ಹಳದಿ ವರ್ತುಲವಿರುವ ಕಲೆಗಳಾಗಿ ಕಾಣುತ್ತವೆ. ಮಳೆ ಆರಂಭವಾದ ನಂತರ, ಇವು ಕಪ್ಪಾಗುತ್ತವೆ ಮತ್ತು ಬೀಜಕಗಳಿಂದ ಆವರಿಸಲ್ಪಡುತ್ತವೆ. ಇದು ಎಲೆಗಳ ಕೆಳಭಾಗದಲ್ಲಿ ನಿರ್ದಿಷ್ಟವಾಗಿ ಗೋಚರಿಸುತ್ತದೆ. ರೋಗ ಹೆಚ್ಚಿದಂತೆ, ಈ ಕಲೆಗಳೆಲ್ಲಾ ಒಗ್ಗೂಡಿ ಎಲೆಗಳು ಹಳದಿ ಬಣ್ಣಕ್ಕೆ (ಕ್ಲೋರೋಸಿಸ್) ತಿರುಗುತ್ತವೆ. ಕೆಲವೊಮ್ಮೆ ಎಲೆಗಳು ಉದುರುತ್ತವೆ. ಕೆಲವೊಮ್ಮೆ, ಕಲೆಯ ಮಧ್ಯಭಾಗ ಬೀಳುತ್ತದೆ ಮತ್ತು ಇದರಿಂದ ಶಾಟ್-ಹೋಲ್ ಪರಿಣಾಮ ಕಂಡುಬರುತ್ತದೆ. ಹಸಿರು ಹಣ್ಣುಗಳಲ್ಲಿ, ಕಲೆಗಳು ಅನಿಯಮಿತವಾಗಿ, ಪ್ರತ್ಯೇಕ ಅಥವಾ ಒಟ್ಟಾಗಿ, ವೃತ್ತಾಕಾರದಲ್ಲಿರುತ್ತವೆ. ಹೆಚ್ಚಾಗಿ ಹಳದಿ ವರ್ತುಲ ಇರುತ್ತದೆ. ಸೋಂಕು ತೀವ್ರವಾದಾಗ ಕಪ್ಪಾದ, ಉಬ್ಬಿದ, ಗೆಡ್ಡೆ-ತರಹದ ಊತ ಕಂಡುಬರುತ್ತದೆ. ನಂತರ ಮಧ್ಯ ಭಾಗ ಕೊಳೆತು, ಬಿದ್ದು ಹೋಗುತ್ತದೆ. ಬೆಳೆದ ಹಣ್ಣಿನ ಮೇಲೆ ಗಾಯಗಳ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ, ಆದರೆ ಸಾಮಾನ್ಯವಾಗಿ ಸಮತಟ್ಟಾಗಿರುತ್ತವೆ. ಇವು ಕೆಲವೊಮ್ಮೆ ಸ್ವಲ್ಪ ಗುಳಿಬಿದ್ದಂತಹ ಕಂದು ಬಣ್ಣದ ಕೇಂದ್ರವನ್ನು ಹೊಂದಿರುತ್ತವೆ. ಕೆಲವೊಮ್ಮೆ ಕಾಂಡದ ಮೇಲೂ, ತೊಟ್ಟಿನಿಂದ ಆರಂಭವಾಗಿ ಗಾಯಗಳು ಕಂಡುಬರುತ್ತವೆ. ಇಂತಹ ಹಲವಾರು ಗಾಯಗಳಿಂದ ಸಸ್ಯವು ಮೇಲಿನಿಂದ ಸಾಯಲು ಆರಂಭಿಸಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸಿಟ್ರಸ್ ಲ್ಯಾಟಿಫೋಲಿಯಾ ಮತ್ತು ಸಿಟ್ರಸ್ ಲೈಮನ್ ಗಳಂತಹ ನಿರೋಧಕ ಜಾತಿಯ ಹಣ್ಣುಗಳಿಂದ ಪಡೆಯಲಾದ ನೈಸರ್ಗಿಕ ತೈಲಗಳನ್ನು ಬಳಸಿದರೆ, ರೋಗಕಾರಕದ ಬೆಳವಣಿಗೆಯನ್ನು ಕಡಿಮೆ ಮಾಡಬಹುದು. ನಿಂಬೆ ಎಲೆಯ ಸಾರ ಮತ್ತು ಸಿಟ್ರಸ್ ಔರಾನ್ಟಿಫೋಲಿಯಾದ ತೈಲಗಳು ಮತ್ತು ಬಾಟಲ್ ಬ್ರಷ್ ಸಸ್ಯಗಳು (ಕ್ಯಾಲಿಸ್ಟೊಮನ್ ಸಿಟ್ರಿನಸ್ ಮತ್ತು ಕ್ಯಾಲಿಸ್ಟೋನ್ ರಿಜಿಡಸ್) ರೋಗಕಾರಕವನ್ನು ಪ್ರತಿಬಂಧಿಸುತ್ತವೆ. ಪ್ರಯೋಗಾಲಯಗಳಲ್ಲಿ ನಿಯಂತ್ರಿತ ಪರಿಸ್ಥಿತಿಗಳಲ್ಲಿ ಮಾತ್ರ ಇದನ್ನು ಪರೀಕ್ಷಿಸಲಾಗಿದೆ. ತಾಮ್ರ ಆಧಾರಿತ ಶಿಲೀಂಧ್ರನಾಶಕಗಳನ್ನು ಸಹ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಸೇರಿಕೊಂಡಿರುವ ಸಮಗ್ರ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ಟ್ರೈಫ್ಲೊಕ್ಸಿಸ್ಟ್ರೋಬಿನ್ ಅಥವಾ ಮನ್ಕೊಜೆಬ್ ಆಧರಿಸಿದ ಶಿಲೀಂಧ್ರನಾಶಕಗಳನ್ನು ಖನಿಜ ಸ್ಪ್ರೇ ಎಣ್ಣೆಯ ಜೊತೆ ಸಂಯೋಜಿಸಿ ಬಳಸಿದರೆ, ಶಿಲೀಂಧ್ರವನ್ನು ನಾಶಪಡಿಸುವುದರಲ್ಲಿ ಪರಿಣಾಮಕಾರಿ ಎಂಬುದು ಕಂಡುಬಂದಿದೆ. ಕ್ಲೋರೊಥಲೋನಿಲ್, ತಾಮ್ರ ಮತ್ತು ಅವುಗಳ ಮಿಶ್ರಣಗಳನ್ನು ಆಧರಿಸಿದ ಶಿಲೀಂಧ್ರನಾಶಕಗಳು ಸಹ ಪರಿಣಾಮಕಾರಿ. ಮಳೆಯ ನಂತರ ಸಿಂಪಡಿಸುವುದು ಉತ್ತಮ. ಏಕೆಂದರೆ, ಮಳೆ ಬೀಜಕಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ.

ಅದಕ್ಕೆ ಏನು ಕಾರಣ

ಸೂಡೊಸೆರ್ಕೋಸ್ಪೋರಾ ಆಂಗೊಲೆನ್ಸಿಸ್ ಎಂಬ ಶಿಲೀಂಧ್ರದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಬೀಜಕಗಳ ಉತ್ಪಾದನೆಗೆ ಪರಿಸ್ಥಿತಿಗಳು ಅನುಕೂಲಕರವಾಗುವವರೆಗೆ, ಸೋಂಕಿತ ಸಸ್ಯದ ಭಾಗಗಳ ಮೇಲಿನ ಗಾಯಗಳಲ್ಲಿ ಇವು ಸುಪ್ತವಾಗಿರುತ್ತವೆ. ದೀರ್ಘಕಾಲದ ಆರ್ದ್ರ ವಾತಾವರಣದ ನಂತರದ ಒಣ ಹವಾಮಾನ ಮತ್ತು ಕೊಂಚ ತಂಪಾದ ವಾತಾವಾರಣ ಅಂದರೆ 22-26 °C ಇದರ ಜೀವನ ಚಕ್ರಕ್ಕೆ ಅನುಕೂಲಕರವಾಗಿದೆ. ಎಲೆಗಳು ರೋಗ ಹರಡುವಿಕೆಯ ಪ್ರಾಥಮಿಕ ಮೂಲವಾಗಿವೆ. ಏಕೆಂದರೆ ಅವುಗಳ ಮೇಲಿನ ಗಾಯಗಳು, ಹಣ್ಣಿನ ಮೇಲಿನ ಇದೇ ರೀತಿಯ ಗಾಯಗಳಿಗಿಂತ ಹೆಚ್ಚು ಬೀಜಕಗಳನ್ನು ಉತ್ಪಾದಿಸುತ್ತವೆ. ಶಿಲೀಂಧ್ರವು ದೂರದವರೆಗೆ ಹರಡುವುದು ಗಾಳಿಯಿಂದಾದರೆ, ಸ್ಥಳೀಯವಾಗಿ ಹರಡುವುದು ಮುಖ್ಯವಾಗಿ ಮಳೆ ಹನಿಗಳು ಅಥವಾ ಮಳೆ ತುಂತುರಿನಿಂದ. ಸೋಂಕಿಗೊಳಗಾದ ವಸ್ತುವನ್ನು ಇತರ ತೋಟಗಳಿಗೆ ಅಥವಾ ಸ್ಥಳಗಳಿಗೆ ವರ್ಗಾಯಿಸುವುದರ ಮೂಲಕ ಮಾನವನೂ ಈ ರೋಗವನ್ನು ಹರಡಬಹುದು.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳು ಲಭ್ಯವಿದ್ದರೆ ಅವನ್ನೇ ನೆಡಿ.
  • ಬಿದ್ದ ಹಣ್ಣು ಮತ್ತು ಎಲೆಗಳನ್ನು ಸಂಗ್ರಹಿಸಿ ನಾಶಮಾಡಿ, ಉದಾಹರಣೆಗೆ ಅವುಗಳನ್ನು ಸುಟ್ಟು ಹಾಕಿ ಅಥವಾ ಹೂತುಬಿಡಿ.
  • ಸೋಂಕು ತಪ್ಪಿಸಲು ತೋಟದ ಸುತ್ತ ಗಾಳಿ ತಡೆಗಳನ್ನು ನಿರ್ಮಿಸಿ.
  • ಮರಗಳ ನಡುವೆ ಅಗಲವಾದ ಜಾಗವನ್ನು ಬಿಡುವ ಮೂಲಕ ತೋಟದಲ್ಲಿ ವಾತಾನುಕೂಲ ವ್ಯವಸ್ಥೆ ಸುಧಾರಿಸಿ.
  • ನಿಯಮಿತವಾಗಿ ಮರಗಳನ್ನು ಕತ್ತರಿಸಿ ಮತ್ತು ಪರ್ಯಾಯ ಆಶ್ರಯದಾತ ಸಸ್ಯಗಳೊಂದಿಗೆ ಅಂತರ್ ಬೇಸಾಯವನ್ನು ಮಾಡಬೇಡಿ.
  • ನೀರಾವರಿ ಮೂಲಕ ಒಂದೇ ಕಾಲದಲ್ಲಿ ಹಣ್ಣು ಬಿಡುವಂತೆ ಮಾಡಲು ಪ್ರಯತ್ನಿಸಿ.
  • ಸೋಂಕಿತ ಪ್ರದೇಶಗಳಿಂದ ಸೋಂಕಿತ ಸಸಿಗಳು, ಮರಗಳು ಅಥವಾ ಹಣ್ಣುಗಳ ಸಾಗಣೆಯನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ