ಬದನೆ

ಬಿಳಿಬದನೆಯ ಸೆರ್ಕೊಸ್ಪೋರಾ ಎಲೆ ಚುಕ್ಕೆ

Cercospora melongenae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸಣ್ಣ, ವೃತ್ತಾಕಾರದ, ಹಳದಿ ಬಣ್ಣದ, ಸ್ವಲ್ಪ ಗುಳಿಬಿದ್ದಂತಹ ಕಲೆಗಳು ಎಲೆಗಳ ಮೇಲಿನ ಭಾಗದಲ್ಲಿ ಕಾಣಿಸುತ್ತವೆ.
  • ಕಲೆಗಳು ದೊಡ್ಡದಾಗಿ ಬೆಳೆಯುತ್ತವೆ ಮತ್ತು ಕಂದು ಬಣ್ಣದ, ಹಳದಿ ಹೊರವೃತ್ತವನ್ನು ಹೊಂದಿರುವ ಅನಿಯಮಿತ ತೇಪೆಗಳಾಗುತ್ತವೆ.
  • ಎಲೆಗಳು ಸುರುಳಿ ಸುತ್ತುತ್ತವೆ ಮತ್ತು ಉದುರುತ್ತವೆ.
  • ಇಳುವರಿಯಲ್ಲಿ ಕಡಿತ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬದನೆ

ರೋಗಲಕ್ಷಣಗಳು

ಬೆಳವಣಿಗೆಯ ಯಾವುದೇ ಹಂತದಲ್ಲೂ ಸೋಂಕು ತಗುಲಬಹುದು ಮತ್ತು ಎಲೆಗಳು, ತೊಟ್ಟುಗಳು ಮತ್ತು ಕಾಂಡಗಳಲ್ಲಿ ಅದು ಗೋಚರಿಸಬಹುದು. ಆರಂಭಿಕ, ರೋಗಲಕ್ಷಣಗಳೆಂದರೆ ಸಣ್ಣ, ದುಂಡನೆಯ, ಮತ್ತು ಕೊಂಚ ಗುಳಿ ಬಿದ್ದಂತಹ ಚುಕ್ಕೆಗಳು ಕೆಳ ಎಲೆಗಳ ಮೇಲಿನ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಕಾಲಾನಂತರದಲ್ಲಿ, ಚುಕ್ಕೆಗಳು ದೊಡ್ಡದಾಗುತ್ತವೆ, ಹೆಚ್ಚು ಅನಿಯಮಿತವಾಗುತ್ತವೆ ಮತ್ತು ಹಳದಿ ಹೊರವೃತ್ತದಿಂದ ಆವೃತವಾಗುತ್ತವೆ. ನಂತರ, ಚುಕ್ಕೆಗಳು ಎಲೆಯ ಎರಡೂ ಬದಿಗಳಲ್ಲಿ ಗೋಚರಿಸುತ್ತವೆ. ಎಲೆಗಳ ಮೇಲಿರುವ ಹಳೆಯ ಚುಕ್ಕೆಗಳು ತಾವಿರುವ ಸ್ಥಳವನ್ನು ಅವಲಂಬಿಸಿ ವಿಲೀನಗೊಳ್ಳುತ್ತವೆ ಮತ್ತು ವಿಭಿನ್ನ ಆಕಾರಗಳನ್ನು ಪಡೆಯುತ್ತವೆ. ಅವುಗಳು ಕಂದು ಬಣ್ಣದಿಂದ ಬೂದು ಬಣ್ಣದವರೆಗೆ (ಮೇಲ್ಭಾಗದಲ್ಲಿ) ಮತ್ತು ತಿಳಿ ಕಂದು (ಕೆಳಭಾಗದಲ್ಲಿ) ಬಣ್ಣದಲ್ಲಿ ಇರುತ್ತವೆ. ಸೋಂಕು ಹೆಚ್ಚಾಗಿದ್ದರೆ ಎಲೆಗಳು ಸುರುಳಿಯಾಗುತ್ತದೆ ಮತ್ತು ಉದುರುತ್ತವೆ. ಶಿಲೀಂಧ್ರಗಳು ನೇರವಾಗಿ ಹಣ್ಣುಗಳಲ್ಲಿ ಸೋಂಕು ಉಂಟು ಮಾಡದಿದ್ದರೂ, ಸಸ್ಯಗಳ ಉತ್ಪಾದಕತೆ ಕಡಿಮೆಯಾಗುವ ಕಾರಣದಿಂದಾಗಿ ಹಣ್ಣಿನ ಬೆಳವಣಿಗೆ ಕಡಿಮೆಯಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೋಂಕನ್ನು ನಿಯಂತ್ರಿಸಲು ಜೈವಿಕ ಏಜೆಂಟ್ ಗಳು ಸಹಾಯ ಮಾಡಬಹುದು. ಸೆರ್ಕೋಸ್ಪೋರಾ ಮೆಲೊಂಗಿನೆಯೊಂದಿಗೆ ಪೈಪೋಟಿ ಮಾಡಲು ಬ್ಯಾಕ್ಟೀರಿಯಾ ಬ್ಯಾಸಿಲಸ್ ಸಬ್ಟಿಲೀಸ್ ಸ್ಟ್ರೆನ್ ಕ್ಯೂಎಸ್ಟಿ 713 ಅನ್ನು ಆಧರಿಸಿದ ಜೈವಿಕ-ಶಿಲೀಂಧ್ರನಾಶಕಗಳನ್ನು ಎಲೆಗಳ ಮೇಲೆ ಸಿಂಪಡಿಸಬಹುದು, ಆಜಾಡಿರಾಕ್ಟ ಇಂಡಿಕಾ (ಬೇವಿನ ಎಣ್ಣೆ)ದ ಸಾರವೂ ಸಹ ಸೋಂಕು ನಿಯಂತ್ರಿಸಲು ಸಹಾಯಕವಾಗಬಹುದು.

ರಾಸಾಯನಿಕ ನಿಯಂತ್ರಣ

ರೋಗವನ್ನು ನಿಯಂತ್ರಿಸಲು ಯಾವಾಗಲೂ ಸಮಗ್ರ ವಿಧಾನವನ್ನು ಪರಿಗಣಿಸಬೇಕು. ಶಿಲೀಂಧ್ರನಾಶಕಗಳ ಅಗತ್ಯವಿದ್ದಲ್ಲಿ, ಕ್ಲೋರೊಥಲೋನಿಲ್, ಮನ್ಕೊಜೆಬ್ ಅಥವಾ ಆಕ್ಟಾನೊನಿಕ್ ಆಮ್ಲವನ್ನು ಹೊಂದಿರುವ ಉತ್ಪನ್ನಗಳನ್ನು ತಾಮ್ರದ ಉಪ್ಪಿನೊಂದಿಗೆ ಸಂಯೋಜಿಸಿ ಎಲೆಗಳ ಮೇಲೆ ಸಿಂಪಡಿಸಬಹುದು ಮತ್ತು ಮಣ್ಣಿಗೆ ಹಾಕಬಹುದು.

ಅದಕ್ಕೆ ಏನು ಕಾರಣ

ಸೆರ್ಕೊಸ್ಪೋರಾ ಮೆಲೊಂಜಿನೆ ಎಂಬುದು ಸಸ್ಯ-ರೋಗಕಾರಕ ಶಿಲೀಂಧ್ರವಾಗಿದೆ. ಈ ಶಿಲೀಂಧ್ರಗಳ ಬೀಜಕಗಳು ಕನಿಷ್ಠ ಒಂದು ವರ್ಷದ ಕಾಲ ಸಸ್ಯದ ಉಳಿಕೆಗಳಲ್ಲಿ ಮತ್ತು ಮಣ್ಣಿನಲ್ಲಿ ಬದುಕಬಲ್ಲವು. ನಂತರ ಅವುಗಳು ಹಲವು ರೀತಿಯಲ್ಲಿ ಕೆಳಗಿನ ಮತ್ತು ಹಳೆಯ ಎಲೆಗಳಿಗೆ ಸಾಗಿಸಲ್ಪಡುತ್ತವೆ. ಸಾಮಾನ್ಯವಾಗಿ ಅವು ಗಾಳಿ ಮತ್ತು ನೀರಿನಿಂದ ಹರಡುತ್ತವೆ (ಮಳೆ ಮತ್ತು ನೀರಾವರಿ). ಆದರೆ ಅವುಗಳು ಸೋಂಕಿತ ಉಪಕರಣಗಳು ಮತ್ತು ವ್ಯಕ್ತಿಗಳಿಂದಲೂ ಹರಡಬಹುದು. ನಂತರ ಅವುಗಳು ಕಾಂಡದ ಮೇಲ್ಭಾಗಕ್ಕೆ ಚಲಿಸಿ ಎಳೆಯ ಎಲೆಗಳನ್ನು ತಲುಪುತ್ತದೆ. ತೇವಾಂಶ ಮತ್ತು ಹೆಚ್ಚಿನ ಸಾಪೇಕ್ಷ ಆರ್ದ್ರತೆಯು ಸೋಂಕು ಮತ್ತು ರೋಗದ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ. ಆದ್ದರಿಂದ ಮಳೆಗಾಲದಲ್ಲಿ (ಆರ್ದ್ರ ಹವಾಮಾನ, ನಿರಂತರ ಸಸ್ಯದ ಆರ್ದ್ರತೆ) ಇದು ಹೆಚ್ಚು ಸಾಮಾನ್ಯವಾಗಿದೆ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ನೆಡಿ.
  • ಆರೋಗ್ಯಕರ ಅಥವಾ ಪ್ರಮಾಣೀಕೃತ ರೋಗ-ಮುಕ್ತ ಬೀಜಗಳನ್ನು ಮತ್ತು ಸಸ್ಯ ಪದಾರ್ಥಗಳನ್ನು ಬಳಸಿ.
  • ಉತ್ತಮ ಗಾಳಿ ಮತ್ತು ರೋಗದ ಹರಡುವಿಕೆ ತಪ್ಪಿಸಲು ಸಸ್ಯಗಳ ನಡುವೆ ಹೆಚ್ಚು ಜಾಗವಿರುವಂತೆ ನೋಡಿಕೊಳ್ಳಿ.
  • ಸಾಕಷ್ಟು ಫಲವತ್ತತೆ ಇರುವಂತೆ ನೋಡಿಕೊಳ್ಳಿ.
  • ಆರ್ದ್ರತೆಯನ್ನು ತಗ್ಗಿಸಲು ಅತಿಯಾಗಿ ನೀರು ಹಾಕುವುದನ್ನು ತಪ್ಪಿಸಿ ಮತ್ತು ಓವರ್ಹೆಡ್ ಸಿಂಪರಿಕೆಗಳ ಬಳಕೆ ತಪ್ಪಿಸಿ.
  • ಸಂಜೆಯ ಬದಲಿಗೆ ಬೆಳಿಗ್ಗೆ ನೀರುಣಿಸಿ.
  • ಸಸ್ಯಗಳು ತೇವವಾಗಿದ್ದಾಗ ಕೆಲಸ ಮಾಡುವುದನ್ನು ತಪ್ಪಿಸಿ.
  • ಕಳೆ ಗಿಡಗಳು ಅತಿಯಾಗಿ ಬೆಳೆಯುವುದನ್ನು ತಡೆಗಟ್ಟಿ.
  • ಸೋಂಕಿತ ಸಸ್ಯಗಳು ಮತ್ತು ತ್ಯಾಜ್ಯಗಳನ್ನು ಸುಟ್ಟು ಬಿಡಿ ಅಥವಾ ಉಳುಮೆ ಮಾಡುವ ಮೂಲಕ ಅದನ್ನು ತೆಗೆದುಹಾಕಿ.
  • ನಿರ್ದಿಷ್ಟ ಅವಧಿಗೆ ಆಶ್ರಯದಾತವಲ್ಲದ ಬೆಳೆಗಳನ್ನು ಸರದಿ ಬೆಳೆಯಾಗಿ ಬೆಳೆಯಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ