ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನಕಾಯಿ ಸೆರ್ಕೊಸ್ಪೊರಾ ಎಲೆಯ ಚುಕ್ಕೆ

Cercospora capsici

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಬಿಳಿ ಕೇಂದ್ರ, ಗಾಢ ಉಂಗುರಗಳು ಮತ್ತು ಹಳದಿ ಅಂಚುಗಳೊಂದಿಗೆ ವೃತ್ತಾಕಾರದ ಕಂದು ಚುಕ್ಕೆಗಳು (’ಕಪ್ಪೆಕಣ್ಣು).
  • ಚುಕ್ಕೆಗಳು ದೊಡ್ಡದಾಗಿ ಗಾಯಗಳಂತಾಗುತ್ತವೆ.
  • ಎಲೆಗಳು ಹಳದಿಯಾಗಿ ಉದುರುತ್ತವೆ.
  • ಹಣ್ಣುಗಳು ಸೂರ್ಯನ ಬಿಸಿಲಿಗೆ ಸುಟ್ಟು ಹಾನಿಯಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ಸೋಂಕಿನ ಆರಂಭಿಕ ಹಂತದಲ್ಲಿ, ಎಲೆಗಳ ಮೇಲೆ ತಿಳಿ-ಬೂದು ಕೇಂದ್ರಗಳು ಮತ್ತು ಕೆಂಪು-ಕಂದು ಅಂಚುಗಳನ್ನು ಹೊಂದಿರುವ ಕಂದು ಬಣ್ಣದ ವೃತ್ತಾಕಾರದ ಕಲೆಗಳು ಕಾಣಿಸುತ್ತವೆ. ನಂತರ, ಅವು 1.5 ಸೆಂ.ಮೀ ಗಾತ್ರದಷ್ಟು ದೊಡ್ಡ ವೃತ್ತಾಕಾರದ ಕಂದು ಬಣ್ಣದ ಕಲೆಗಳಾಗಿ ಬೆಳೆಯುತ್ತವೆ, ಜೊತೆಗೆ ಅವುಗಳ ಮಧ್ಯಭಾಗ ಬಿಳಿ ಬಣ್ಣದ್ದಾಗಿದ್ದು ಅದರ ಸುತ್ತ ಕಪ್ಪು ಉಂಗುರಗಳು ಬೆಳೆಯುತ್ತವೆ ಈ ಕಾರಣದಿಂದಲೇ ಅದು ಕಪ್ಪೆ-ಕಣ್ಣಿನ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಲೆಗಳು ಎಲೆಯ ಬ್ಲೇಡ್ನಲ್ಲಿ ಹೆಚ್ಚು ಸಂಖ್ಯೆಯಲ್ಲಿರುತ್ತವೆ ಮತ್ತು ದೊಡ್ಡ ಗಾಯಗಳನ್ನು ರೂಪಿಸಲು ನಿಧಾನವಾಗಿ ಒಂದಾಗುತ್ತವೆ. ಕೇಂದ್ರಗಳು ಒಣಗಿ ಬಿಡುತ್ತವೆ ಮತ್ತು ಉದುರುತ್ತವೆ, ಈ ರೀತಿಯಲ್ಲಿ ’ಶಾಟ್-ಹೋಲ್’ (ಗುಂಡು ಹೊಡೆದು ತೂತವಾದ ರೀತಿ) ಮಾದರಿಯನ್ನು ತೋರುತ್ತವೆ. ಸೋಂಕಿನ ಅಂತಿಮ ಹಂತದಲ್ಲಿ, ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಬಾಡುತ್ತವೆ ಅಥವಾ ಉದುರುತ್ತವೆ, ಮತ್ತು ಇದರಿಂದ ಹಣ್ಣುಗಳು ಸೂರ್ಯನ ಬಿಸಿಲಿಗೆ ಸುಟ್ಟು ಹಾನಿಯಾಗುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ, ಹಣ್ಣಿನ ಕಾಂಡ ಮತ್ತು ಹೂ ಬಟ್ಟಲಿನಲ್ಲೂ ಕಲೆಗಳನ್ನು ಗಮನಿಸಬಹುದು, ಇದರ ಪರಿಣಾಮವಾಗಿ ಕಾಂಡ-ಬುಡ ಕೊಳೆಯುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

52 °C ನ ಬಿಸಿ ನೀರಿನಿಂದ 30 ನಿಮಿಷಗಳ ಕಾಲ ಬೀಜಗಳನ್ನು ಸಂಸ್ಕರಿಸಿದರೆ ಅದು ಬೀಜಗಳ ಮೇಲೆ ಶಿಲೀಂಧ್ರದ ಉಪಸ್ಥಿತಿಯನ್ನು ಕಡಿಮೆ ಮಾಡುತ್ತದೆ. ಈ ಸಂಸ್ಕರಣೆಯು ಬೀಜ ಮೊಳಕೆಯೊಡೆಯುವುದರ ಮೇಲೂ ಸಹ ಪರಿಣಾಮ ಬೀರಬಹುದು ಎಂಬುದನ್ನು ನೆನಪಿನಲ್ಲಿಡಿ (ಅತಿಯಾದ ಸಮಯ ಅಥವಾ ತಾಪಮಾನ). ತಾಮ್ರದ ಹೈಡ್ರಾಕ್ಸೈಡ್ ಹೊಂದಿರುವ ಉತ್ಪನ್ನಗಳನ್ನು ಎಲೆಗಳ ಮೇಲೆ ಸಿಂಪಡಿಸಬಹುದು, ಕಲೆಗಳು ಮೊದಲು ಕಾಣಿಸಿಕೊಂಡಾಗ ಪ್ರಾರಂಭಮಾಡಿ ಕೊನೆಯ ಸುಗ್ಗಿಯ ಮೊದಲು 10-14 ದಿನಗಳ ಮಧ್ಯಂತರದಲ್ಲಿ 3-4 ವಾರಗಳವರೆಗೆ ಮುಂದುವರಿಯಿರಿ. ಎಲೆಗಳ ಎರಡೂ ಬದಿ ಸಿಂಪಡಿಸುವುದು ಮುಖ್ಯ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಕ್ಯಾಪ್ಟನ್ (3 ಗ್ರಾಂ/ ಕೆಜಿ) ನೊಂದಿಗೆ ಬೀಜ ಸಂಸ್ಕರಣೆ ಮಾಡಿದರೆ ಅದು ರೋಗವನ್ನು ಎದುರಿಸಲು ಉತ್ತಮ ಕೆಲಸ ಮಾಡುತ್ತದೆ. ಮೆಣಸಿನಕಾಯಿ ಸೆರ್ಕೊಸ್ಪೊರಾ ಎಲೆಯ ಚುಕ್ಕೆಯನ್ನು ನಿಯಂತ್ರಿಸಲು ಇತರ ಸಂಸ್ಕರಣೆಗಳೆಂದರೆ ತಾಮ್ರ ಹೈಡ್ರಾಕ್ಸೈಡ್, ಕಾರ್ಬೆಂಡಜೈಮ್ ಅಥವಾ ಮನ್ಕೊಜೆಬ್ ಗಳನ್ನು ಎಲೆಗೊಂಚಲುಗಳ ಮೇಲೆ ಸಿಂಪಡಿಸುವುದು. ಕಲೆಗಳು ಮೊದಲು ಕಾಣಿಸಿಕೊಂಡಾಗ ಚಿಕಿತ್ಸೆಯು ಪ್ರಾರಂಭವಾಗಬೇಕು ಮತ್ತು ಕೊನೆಯ ಸುಗ್ಗಿಯ ಮೊದಲು 10-14 ದಿನಗಳ ಮಧ್ಯಂತರದಲ್ಲಿ 3-4 ವಾರಗಳವರೆಗೆ ಮುಂದುವರಿಯಬೇಕು. ಎಲೆಗಳ ಎರಡೂ ಬದಿ ಸಿಂಪಡಿಸುವುದು ಮುಖ್ಯ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಸೆರ್ಕೊಸ್ಪೊರಾ ಕ್ಯಾಪ್ಸಿಕಿಯಿಂದ ಉಂಟಾಗುತ್ತವೆ, ಇದು ವಿಶೇಷವಾಗಿ ಉಷ್ಣವಲಯದಲ್ಲಿ ಚೇತರಿಸಿಕೊಳ್ಳುವ ಶಿಲೀಂಧ್ರವಾಗಿದ್ದು, ಸಸಿಮಡಿಗಳು ಮತ್ತು ಹೊಲಗಳಲ್ಲಿನ ಸಸ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಒಂದು ಋತುವಿನಿಂದ ಇನ್ನೊಂದಕ್ಕೆ ಬೀಜಗಳಲ್ಲಿ ಅಥವಾ ಮಣ್ಣಿನಲ್ಲಿ ಮತ್ತು ಸೋಂಕಿತ ಸಸ್ಯದ ಉಳಿಕೆಗಳ ಮೇಲೆ ಬದುಕುಳಿಯುತ್ತದೆ. ಇದು ನೀರು, ಮಳೆ, ಗಾಳಿ ಮತ್ತು ಎಲೆಯಿಂದ ಎಲೆ ಸಂಪರ್ಕ ಮತ್ತು ಉಪಕರಣಗಳು, ಸಲಕರಣೆಗಳು ಮತ್ತು ಕಾರ್ಮಿಕರ ಮೇಲೆ ಹರಡುತ್ತದೆ. ಎಲೆಗಳೊಳಗೆ ನೇರವಾಗಿ ನುಗ್ಗುವಿಕೆಯಿಂದ ಎಲೆಗಳ ಸೋಂಕು ಸಂಭವಿಸುತ್ತದೆ ಮತ್ತು ದೀರ್ಘಕಾಲದ ಎಲೆಗಳ ತೇವ ಇದಕ್ಕೆ ಅನುಕೂಲಕರ. ಸೋಂಕಿಗೆ ಅತ್ಯುತ್ತಮ ಪರಿಸ್ಥಿತಿಗಳೆಂದರೆ 23 °C ನಷ್ಟು ಬೆಚ್ಚಗಿನ ತಾಪಮಾನ ಮತ್ತು 77 - 85% ನಷ್ಟು ಆರ್ದ್ರತೆ. ಈ ಪರಿಸ್ಥಿತಿಗಳು ಪೂರೈಸಿದರೆ, ಇದು ಇಳುವರಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ, ವಿಶೇಷವಾಗಿ ಸೋಂಕು ಋತುವಿನ ಆರಂಭದಲ್ಲಿ ಸಂಭವಿಸಿದಲ್ಲಿ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಬೀಜಗಳನ್ನು ನೆಡಿ.
  • ಉತ್ತಮವಾದ ಗಾಳಿಯ ಪ್ರಸರಣವನ್ನು ಅನುಮತಿಸಲು ಮತ್ತು ಎಲೆಗಳು ದೀರ್ಘಾವಧಿಯವರೆಗೆ ತೇವವಾಗಿರುವುದನ್ನು ತಪ್ಪಿಸಲು ಸಸ್ಯಗಳ ಮಧ್ಯ ಸರಿಯಾದ ಅಂತರವಿರುವಂತೆ ವ್ಯವಸ್ಥೆಮಾಡಿ.
  • ಸಸ್ಯ ಮತ್ತು ಶಿಲೀಂಧ್ರಗಳ ನಡುವೆ ಭೌತಿಕ ತಡೆಗೋಡೆಯೊಂದನ್ನು ರಚಿಸಲು ಹಸಿಗೊಬ್ಬರವನ್ನು ಬಳಸಿ.
  • ಸಸ್ಯಗಳನ್ನು ನೆಟ್ಟಗೆ ಇರಿಸಲು ಗೂಟವನ್ನು ಬಳಸಿ.
  • ಎಲೆಗಳು ತೇವವಾಗುವುದನ್ನು ಕಡಿಮೆ ಮಾಡಲು ಹನಿ ನೀರಾವರಿ ವ್ಯವಸ್ಥೆಯನ್ನು ಬಳಸಿ.
  • ರೋಗದ ಯಾವುದೇ ರೋಗಲಕ್ಷಣಗಳಿಗಾಗಿ ಸಸಿಮಡಿಗಳು, ಎಳೆಯ ಸಸ್ಯಗಳು ಅಥವಾ ಕಸಿಗಳನ್ನು ಪರಿಶೀಲಿಸಿ.
  • ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಹೊಲದಿಂದ ದೂರದಲ್ಲಿ ನಾಶಮಾಡಿ.
  • ಹೊಲ ಮತ್ತು ಅದರ ಸುತ್ತಮುತ್ತಲಿರುವ ಕಳೆಗಳನ್ನು ನಿಯಂತ್ರಿಸಿ.
  • ಸಸ್ಯಗಳು ಒದ್ದೆಯಾಗಿದ್ದಾಗ ಹೊಲಗಳಲ್ಲಿ ಕೆಲಸ ಮಾಡಬೇಡಿ.
  • ವಿಶಾಲವಾದ ಸರದಿ ಬೆಳೆಯನ್ನು ಕಾರ್ಯಗತಗೊಳಿಸಿ, ಕನಿಷ್ಠ 3 ವರ್ಷಗಳ ಕಾಲ.
  • ಸುಗ್ಗಿಯ ನಂತರ ಸಸ್ಯದ ಅವಶೇಷಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.
  • ಬೀಜಕ್ಕಾಗಿ ಆಯ್ಕೆಮಾಡಿದ ಹಣ್ಣುಗಳಲ್ಲಿ ಕಾಂಡ-ಬುಡ ಕೊಳೆ ರೋಗವಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ