ಮೆಕ್ಕೆ ಜೋಳ

ಮೆಕ್ಕೆಜೋಳದ ಸಾಮಾನ್ಯ ಬೂಷ್ಟು

Puccinia sorghi

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಬರುವ ಅತೀ ಸಣ್ಣ ಕಲೆಗಳು ನಿಧಾನವಾಗಿ ಕಂದಾಗಿ, ಸ್ವಲ್ಪ ಉಬ್ಬಿದ ಕಲೆಗಳಾಗಿ ಬೆಳೆಯುತ್ತವೆ.
  • ನಂತರ ಈ ಕಲೆಗಳು ಸುವರ್ಣ-ಕಂದು ಗಂಟುಗಳಾಗಿ ಬದಲಾಗುತ್ತವೆ ಮತ್ತು ಎಲೆಗಳ ಮೇಲ್ಭಾಗ ಮತ್ತು ಕೆಳಭಾಗದ ಪಾರ್ಶ್ವಗಳ ಮೇಲೆ ನಿಧಾನವಾಗಿ ಹರಡುತ್ತವೆ.
  • ಇದರ ರೋಗಲಕ್ಷಣಗಳು ಸಾಮಾನ್ಯವಾಗಿ ಇತರ ಸಸ್ಯ ಭಾಗಗಳಲ್ಲಿ ಕಂಡುಬರುವುದಿಲ್ಲ.
  • ಕಾಂಡಗಳು ದುರ್ಬಲವಾಗಿ ಮೆತ್ತಗಾಗುತ್ತಾ ಹೋಗುತ್ತವೆ ಮತ್ತು ನೆಲಕ್ಕೆ ಬಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಮೆಕ್ಕೆ ಜೋಳ

ರೋಗಲಕ್ಷಣಗಳು

ಎಲೆಗಳ ಎರಡೂ ಬದಿಗಳಲ್ಲಿಯೂ ಅತೀಸಣ್ಣ ಕಲೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಅವು ನಿಧಾನವಾಗಿ ಕಂದಾದ, ಸ್ವಲ್ಪ ಉಬ್ಬಿದ ಕಲೆಗಳಾಗಿ ಬೆಳೆಯುತ್ತವೆ. ಈ ವೃತ್ತಾಕಾರದ ಕಲೆಗಳು ನಂತರ ಪುಡಿ ರೀತಿಯ, ಸುವರ್ಣ-ಕಂದು ಗಂಟುಗಳಾಗಿ ಬದಲಾಗುತ್ತವೆ ಮತ್ತು ಎಲೆಗಳ ಮೇಲ್ಭಾಗ ಮತ್ತು ಕೆಳಭಾಗಗಳ ಮೇಲೆ ನಿಧಾನವಾಗಿ ಹರಡುತ್ತವೆ. ಸಸ್ಯವು ಬೆಳೆದಂತೆ ಬಣ್ಣವು ಕಪ್ಪು ಬಣ್ಣಕ್ಕೆ ಬದಲಾಗಬಹುದು. ಇತರ ತುಕ್ಕು ರೋಗಗಳಲ್ಲಿ ಬರುವ ಹಾಗೆ, ಇದರ ರೋಗಲಕ್ಷಣಗಳು ಕಾಂಡಗಳು, ಪೊರೆ ಎಲೆಗಳು ಅಥವಾ ತೊಗಟೆಗಳು ಮತ್ತು ಇತರ ಸಸ್ಯ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಅದಾಗ್ಯೂ, ಕಾಂಡಗಳು ದುರ್ಬಲವಾಗಿ ಮೆತ್ತಗಾಗುತ್ತ ಹೋಗುತ್ತವೆ ಮತ್ತು ಬಾಗಲು ಪ್ರಾರಂಭವಾಗುತ್ತವೆ. ದೊಡ್ಡ ಎಲೆಗಳಿಗಿಂತ ಎಳೆಯ ಎಲೆಗಳ ಅಂಗಾಂಶವು ಶಿಲೀಂಧ್ರಗಳ ಸೋಂಕಿಗೆ ಬೇಗ ತುತ್ತಾಗುತ್ತದೆ. ಆರಂಭಿಕ ಹಂತಗಳಲ್ಲಿ ಸಸ್ಯಗಳಿಗೆ ಸೋಂಕಾದರೆ ಎಲೆಗಳ ಕ್ಲೋರೋಸಿಸ್ ಮತ್ತು ನಿರ್ಜೀವ ಸ್ಥಿತಿ ಕಂಡುಬರುತ್ತವೆ. ಇದು ಮೇಲಿನ ಎಲೆಗಳಿಗೂ ಹರಡಿದರೆ ಇಳುವರಿಯ ನಷ್ಟ ಹೆಚ್ಚಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪಕ್ಸಿನಿಯಾ ಸೋರ್ಗಿ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆ ಲಭ್ಯವಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರೋಗಕ್ಕೆ ಬೇಗ ತುತ್ತಾಗುವ ಪ್ರಭೇದಗಳ ಮೇಲೆ ಶಿಲೀಂಧ್ರನಾಶಕಗಳ ಬಳಕೆ ಪ್ರಯೋಜನಕಾರಿಯಾಗಿರುತ್ತದೆ. ಹವಾಮಾನ ಪರಿಸ್ಥಿತಿಗಳ ಕಾರಣದಿಂದ ಬೂಷ್ಟು ತೀವ್ರವಾಗಿ ಹರಡುವ ಲಕ್ಷಣ ಕಂಡುಬಂದರೆ ಋತುವಿನ ಆರಂಭದಲ್ಲಿ ಶಿಲೀಂಧ್ರನಾಶಕವನ್ನು ಎಲೆಗೊಂಚಲುಗಳ ಮೇಲೆ ಸಿಂಪಡಿಸಿ. ಬೂಷ್ಟು ನಿಯಂತ್ರಣಕ್ಕೆ ಹಲವಾರು ಶಿಲೀಂಧ್ರನಾಶಕಗಳು ಲಭ್ಯವಿದೆ. ಮನ್ಕೋಜೆಬ್, ಪೈರಾಕ್ಲೊಸ್ಟ್ರಿಬಿನ್, ಪೈರಾಕ್ಲೊಸ್ಟ್ರಿಬಿನ್+ಮೆಟಾಕನಝೋಲ್, ಪೈರಾಕ್ಲೊಸ್ಟ್ರಿಬಿನ್+ಫ್ಲುಕ್ಸಾಪೈರೆಕ್ಸಡ್, ಅಝೋಕ್ಸಿಸ್ಟ್ರೊಬಿನ್+ಪ್ರಾಪಿಕೋನಝೋಲ್, ಟ್ರೈಫ್ಲ್ಯಾಕ್ಸಿಸ್ಟ್ರೊಬಿನ್+ಪ್ರೊಥಿಯೊಕೋನಝೋಲ್ ಇರುವ ಉತ್ಪನ್ನಗಳನ್ನು ಬಳಸಿ ಈ ರೋಗವನ್ನು ನಿಯಂತ್ರಿಸಬಹುದು. ಈ ಚಿಕಿತ್ಸೆಯ ಉದಾಹರಣೆ ಎಂದರೆ: ಗಂಟುಗಳು ಕಂಡುಬಂದ ಕೂಡಲೇ 2.5 ಗ್ರಾಮ್/ಲಿ ಮನಕೋಜೆಬಿನ ಸಿಂಪಡಣೆ ಮಾಡಬೇಕು ಮತ್ತು ಇದನ್ನು 10 ದಿನಗಳದ ಅಂತರದಲ್ಲಿ ಹೂವು ಬರುವವರೆಗೂ ಪುನರಾವರ್ತಿಸಬೇಕು.

ಅದಕ್ಕೆ ಏನು ಕಾರಣ

ಈ ರೋಗವು ಪಕ್ಸಿನಿಯಾ ಸೋರ್ಗಿ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಶಿಲೀಂಧ್ರವು ಪರ್ಯಾಯ ಆಶ್ರಯದಾತ ಸಸ್ಯದಲ್ಲಿ ( ಆಕ್ಸಲಿಸ್ ವರ್ಗಕ್ಕೆ ಸೇರಿದ) ಚಳಿಗಾಲವನ್ನು ಕಳೆಯುತ್ತದೆ ಮತ್ತು ವಸಂತಕಾಲದಲ್ಲಿ ಬೀಜಕಗಳನ್ನು ಬಿಡುಗಡೆ ಮಾಡುತ್ತದೆ. ಗಾಳಿ ಮತ್ತು ಮಳೆಯ ಮೂಲಕ ಬೀಜಕಗಳನ್ನು ಅಧಿಕ ದೂರದವರೆಗೆ ಸಾಗಿಸಬಹುದು. ಎಲೆಗಳ ಮೇಲೆ ಕೂತಾಗ ಅವುಗಳು ಸೋಂಕಿನ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ. ಸೋಂಕು ಗಾಳಿ ಮತ್ತು ಮಳೆಯ ಕಾರಣದಿಂದಲೂ ಸಹ ಸಸ್ಯದಿಂದ ಸಸ್ಯಕ್ಕೆ ಹರಡಬಹುದು. ಈ ರೋಗವು ಹೆಚ್ಚಿನ ಸಾಪೇಕ್ಷ ಆರ್ದ್ರತೆ (ಸುಮಾರು 100%), ಇಬ್ಬನಿ, ಮಳೆ ಮತ್ತು 15 ರಿಂದ 20 ° C ತಂಪಾದ ತಾಪಮಾನಗಳಲ್ಲಿ (ಪ್ರದೇಶದ ಆಧಾರದ ಮೇಲೆ ಬದಲಾಗಬಹುದು) ಹೆಚ್ಚು ಹರಡುತ್ತದೆ. ಉಷ್ಣ, ಶುಷ್ಕ ಹವಾಮಾನವು ಶಿಲೀಂಧ್ರ ಮತ್ತು ರೋಗದ ಸಂಭವನೀಯ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಅಥವಾ ತಡೆಗಟ್ಟುತ್ತದೆ. ಬೀಜ ಉತ್ಪಾದನೆಗೆ ಮತ್ತು ಸಿಹಿ ಜೋಳಕ್ಕೆ ಬಳಸುವ ಸಸ್ಯಗಳಲ್ಲಿ ಇದರ ಸಮಸ್ಯೆ ಹೆಚ್ಚಾಗಿರುತ್ತದೆ. ಜಾನುವಾರುಗಳ ಆಹಾರಕ್ಕಾಗಿ, ಕೈಗಾರಿಕಾ ಉತ್ಪನ್ನಗಳಿಗೆ, ಅಥವಾ ಸಂಸ್ಕರಿಸಿದ ಆಹಾರವನ್ನು ತಯಾರಿಸಲು ಬೆಳೆಸಿದ ಸಸ್ಯಗಳಿಗೆ ಇದರ ತೊಂದರೆ ಇಲ್ಲ. ಸಸ್ಯ ಉತ್ಪಾದಕತೆಯಲ್ಲಿ ಕಡಿತ ಮತ್ತು ಸಸ್ಯ ಬಾಗುವಿಕೆಯ ಕಾರಣದಿಂದ ಇಳುವರಿ ಕಡಿಮೆಯಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸ್ಥಳೀಯವಾಗಿ ಲಭ್ಯವಿರುವ ರೋಗ ನಿರೋಧಕ ಪ್ರಭೇದಗಳನ್ನು ನೆಡಿ.
  • ಸೋಂಕಿಗೆ ಸೂಕ್ತ ಸ್ಥಿತಿಗಳು ಬರದ ಹಾಗೆ ನೋಡಿಕೊಳ್ಳಲು ಬೇಗ ಸಸ್ಯಗಳ ನಾಟಿ ಮಾಡಿ.
  • ಬೇಗ ಪರಿಪಕ್ವವಾಗುವ ಅಲ್ಪಕಾಲಿಕ ಋತುವಿನ ಪ್ರಭೇದಗಳನ್ನು ಬಳಸಿ.
  • ಸಮತೋಲಿತ ರಸಗೊಬ್ಬರ ಬಳಕೆ ಮಾಡಿ.
  • ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ