Stromatinia cepivora
ಶಿಲೀಂಧ್ರ
ಬೆಳವಣಿಗೆಯ ಯಾವುದೇ ಹಂತದಲ್ಲಿ ಸೋಂಕು ತಗುಲಬಹುದಾದರೂ ಇದು ಹಳೆಯ ಗಿಡಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಎಲೆಗಳು ತುದಿಯಿಂದ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿ ಇದು ಕೆಳಮುಖವಾಗಿ ಮುಂದುವರೆಯುತ್ತದೆ. ಬಾಡುವುದೂ ತುದಿಯಿಂದ ಹಿಂದಕ್ಕೆ ಗಿಡವು ಸಾಯುವುದೂ ಉಂಟಾಗಬಹುದು. ನೆಲದ ಮೇಲೆ ಈ ಲಕ್ಷಣಗಳು ಸ್ಪಷ್ಟವಾಗಿ ಕಂಡುಬಂದರೆ, ರೋಗಕಾರಕಗಳು ಈಗಾಗಲೇ ಬೇರು, ಗಡ್ಡೆ, ಕಾಂಡ ಮತ್ತು ಎಲೆಯ ಪೊರೆಗಳನ್ನು ಆಕ್ರಮಿಸಿಕೊಂಡಿರುತ್ತವೆ. ಸಾಮಾನ್ಯವಾಗಿ ಮಣ್ಣಿನ ಸಾಲಿನಲ್ಲಿ ಬಿಳಿ ಶಿಲೀಂಧ್ರಗಳ ಬೆಳವಣಿಗೆಯು ಗೋಚರಿಸುತ್ತದೆ ಹಾಗೂ ಇದು ಬೇರುಗಳು ಕೊಳೆಯುತ್ತಿರುವುದರ ಕುರುಹಾಗಿದೆ. ಹೊರಗೆಳೆದು ನೋಡಿದರೆ ಗಡ್ಡೆಯ ಮೇಲೆ ಬಿಳಿಯ ಬಣ್ಣದ ತುಪ್ಪುಳದಂತಹ ಶಿಲೀಂಧ್ರದ ಬೆಳವಣಿಗೆಯನ್ನು ಕಾಣಬಹುದು ಹೆಚ್ಚೂ ಕಡಿಮೆ ಇದು ಗಡ್ಡೆಯ ಬುಡದಲ್ಲಿ ಕಂಡು ಬರುತ್ತದೆ, ಇದು ತೀವ್ರ ಸೋಂಕಿನ ಲಕ್ಷಣ. ಸಣ್ಣ, ಕಪ್ಪು ಬಣ್ಣದ, ದುಂಡಗಿನ ಕಲೆಗಳು ಬಿಳಿಯ ಬೂಷ್ಟಿನ ನಡುವೆ ಮೂಡುತ್ತದೆ. ಪ್ರಧಾನ ಬೇರುಗಳು ನಿಧಾನವಾಗಿ ನಾಶವಾಗುತ್ತವೆ ಹಾಗೂ ಕಾಣದೆ ಹೋಗುತ್ತವೆ. ಹೆಚ್ಚುವರಿ ಬೇರುಗಳು ಬೆಳೆಯಬಹುದು ಹಾಗೂ ಅಡ್ಡಕ್ಕೆ ವಿಸ್ತರಿಸಬಹುದು. ಇದರಿಂದ ಇತರ ಗಿಡಗಳಿಗೆ ಸೋಂಕು ಹರಡಲು ನೇರ ಹಾದಿ ಒದಗಿಸಬಹುದು. ಕೆಲವೇ ದಿನಗಳಲ್ಲಿ ಅಥವಾ ಒಂದು ವಾರದಲ್ಲಿ ಗಿಡಗಳು ನಾಶವಾಗಬಹುದು. ಹೊಲದಲ್ಲಿ ಗುಂಪುಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಕಾರಣವನ್ನು ಇದು ವಿವರಿಸುತ್ತದೆ.
ಸಾವಯವ ವಿಧಾನಗಳನ್ನು ಬಳಸಿಕೊಂಡು ಹಲವಾರು ಹಂತಗಳ ನಿಯಂತ್ರಣಗಳಿವೆ, ಮುಖ್ಯವಾಗಿ ಎದುರಾಳಿ ಶಿಲೀಂಧ್ರಗಳನ್ನು ಬಳಸುವ ವಿಧಾನ. ಟ್ರೈಕೋಡರ್ಮಾ, ಫುಸರಿಯಮ್, ಗ್ಲಿಯೊಕ್ಲಾಡಿಯಮ್ ಅಥವಾ ಕೀಟೊಮಿಯಮ್ನ ಜಾತಿಗಳು ಬಿಳಿ ಕೊಳೆ ರೋಗದ ಶಿಲೀಂಧ್ರದ ಪರಾವಲಂಬಿಗಳಾಗಿದ್ದು ಅದರ ಬೆಳವಣಿಗೆಯನ್ನು ಕಡಿಮೆ ಮಾಡಲು ಬಳಸಬಹುದು. ಇತರ ಶಿಲೀಂಧ್ರಗಳು, ಉದಾಹರಣೆಗೆ ಟ್ರೈಕೋಡರ್ಮಾ ಹಾರ್ಜಿಯೇನಮ್, ಟೆರಾಟೊಸ್ಪೆರ್ಮಾ ಆಲಿಗೊಕ್ಲಾಡಮ್ ಅಥವಾ ಲೇಟೆರಿಸ್ಪೋರಾ ಬ್ರೀವೀರಮಾ ಕೂಡ ಬಹಳ ಪರಿಣಾಮಕಾರಿ. ಹೊಲದಲ್ಲಿ ಬೆಳೆಯಿಲ್ಲದಿದ್ದಾಗ ಬೆಳ್ಳುಳ್ಳಿ ಸಾರವನ್ನು ಬಳಸಿ ಶಿಲೀಂಧ್ರಗಳ ಬೆಳವಣಿಗೆಯನ್ನು ಉತ್ತೇಜಿಸಬಹುದು; ಇದರಿಂದ ನಂತರ ಬೆಳೆ ತೆಗೆಯುವಾಗ ರೋಗ ಬರುವ ಸಾಧ್ಯತೆಯನ್ನು ತಗ್ಗಿಸಬಹುದು. ಬೆಳ್ಳುಳ್ಳಿ ಗಡ್ಡೆಯನ್ನು ಬಿಚ್ಚಿ, ಪುಡಿಮಾಡಿ 10 ಲೀಟರ್ ನೀರಿನಲ್ಲಿ ಬೆರೆಸಬೇಕು. ನಂತರ ಅದನ್ನು 2 ಚದರ ಮೀಟರಿಗೆ 10 ಲೀಟರ್ ದರದಲ್ಲಿ ಹೊಲಕ್ಕೆ ಸೇರಿಸಬಹುದು. ಇದಕ್ಕೆ ಸೂಕ್ತ ತಾಪಮಾನವು ಸುಮಾರು 15-18 ಡಿಗ್ರಿ ಸೆಲ್ಸಿಯಸ್ ಆಗಿದೆ; ಏಕೆಂದರೆ ಇದು ಶಿಲೀಂಧ್ರಕ್ಕೆ ಅನುಕೂಲಕರವಾಗಿರುತ್ತದೆ.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ವಿಶೇಷವಾಗಿ ಬಿಳಿ ಕೊಳೆ ರೋಗಕ್ಕೆ ಸಂಬಂಧಿಸಿದಂತೆ ಕೃಷಿ ಮತ್ತು ಸಾವಯವ ವಿಧಾನಗಳು ಸೋಂಕನ್ನು ಕಡಿಮೆ ಮಾಡಲು ಬಹಳ ಮಹತ್ವದ್ದಾಗಿರುತ್ತವೆ. ಶಿಲೀಂಧ್ರನಾಶಕಗಳ ಅಗತ್ಯವಿದ್ದರೆ, ಟೆಬುಕೋನಝಾಲ್, ಪೆಂಟಿಯೊಪೈರಾಡ್, ಫ್ಲೂಡಿಯೊಕ್ಸಾನಿಲ್ ಅಥವಾ ಐಪ್ರೊಡಿಯಾನ್ಗಳನ್ನು ಹೊಂದಿರುವ ಉತ್ಪನ್ನಗಳನ್ನು ಗಿಡ ನೆಡುವ ಮೊದಲು ಮಣ್ಣಿನ ಮೇಲೆ ಬಳಸಬಹುದು, ಅಥವಾ ನೆಟ್ಟ ಮೇಲೆ ಎಲೆಗಳಿಗೆ ಸಿಂಪಡಿಸಬಹುದು. ಬಳಸುವ ವಿಧಾನವು ಬಳಸುತ್ತಿರುವ ಸಕ್ರಿಯ ಪದಾರ್ಥದ ಮೇಲೆ ಅವಲಂಬಿಸಿರುವುದರಿಂದ ಬಳಕೆಗೆ ಮೊದಲು ಪರಿಶೀಲಿಸಬೇಕು.
ಬಿಳಿ ಕೊಳೆ ರೋಗವು ಮಣ್ಣಿನಲ್ಲಿ ಬದುಕುವ ಶಿಲೀಂಧ್ರವಾದ ಸ್ಕ್ಲೆರೋಟಿಯಂ ಸೆಪಿವೊರಮ್ನಿಂದ ಉಂಟಾಗುತ್ತದೆ. ಗಿಡಗಳು ಸಾಮಾನ್ಯವಾಗಿ ಮಣ್ಣಿನ ಮೂಲಕ ಸೋಂಕಿಗೆ ಒಳಗಾಗುತ್ತವೆ, ಅಲ್ಲಿ ಸುಪ್ತ ರೋಗಕಾರಕವು 20 ವರ್ಷಗಳ ಅವಧಿಯವರೆಗೆ ಬದುಕಬಲ್ಲದು. ರೋಗದ ತೀವ್ರತೆಯು ಮಣ್ಣಿನಲ್ಲಿರುವ ಶಿಲೀಂಧ್ರದ ಪ್ರಮಾಣದ ಮೇಲೆ ಅವಲಂಬಿಸಿದೆ. ಒಮ್ಮೆ ಸೇರಿಕೊಂಡರೆ, ರೋಗಕಾರಕವನ್ನು ತೊಡೆದುಹಾಕುವುದು ಅಸಾಧ್ಯವಾದ ಕೆಲಸ. ಶಿಲೀಂಧ್ರದ ಜೀವನ ಚಕ್ರ ಮತ್ತು ಬೆಳವಣಿಗೆಯು ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಆಲಿಯಮ್ ಜಾತಿಯ ಗಿಡಗಳ ಬೇರಿನ ರಸದಿಂದ ಉತ್ತೇಜನ ಪಡೆಯುತ್ತದೆ. ಈ ರೋಗ ಕಾಣಿಸಿಕೊಳ್ಳುವುದಕ್ಕೆ ತಂಪಾದ (10-24 °C) ಮತ್ತು ತೇವಾಂಶ ಹೊಂದಿದ ಮಣ್ಣು ಬಲವಾದ ಕಾರಣ. ರೋಗವು ಶಿಲೀಂಧ್ರ ಭೂಗತ ಬೂಷ್ಟಿನ ಜಾಲ, ಪ್ರವಾಹದ ನೀರು, ಉಪಕರಣಗಳು ಮತ್ತು ಸಸ್ಯ ಪದಾರ್ಥಗಳಿಂದ ಹರಡಬಹುದು. ಬಿಳಿ ಕೊಳೆ ರೋಗವು ಈರುಳ್ಳಿಗೆ ಎರಗುವ ಪ್ರಮುಖ ರೋಗಗಳಲ್ಲಿ ಒಂದಾಗಿದೆ ಮತ್ತು ಭಾರೀ ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ. ಮತ್ತೊಂದು ಹೊಲದಲ್ಲಿ ಕೆಲಸ ಮಾಡುವ ಮೊದಲು ಉಪಕರಣ ಮತ್ತು ಸಲಕರಣೆಗಳಿಂದ ಸೋಂಕಿನ ಅಂಶವನ್ನು ನಿರ್ಮೂಲನೆ ಮಾಡಿ.