ನಿಗಾವಣೆ
ಗಿಡದ ಬುಡದ ಕಡೆಗಿರುವ ಒಣ ಮತ್ತು ಹಸಿರೆಲೆಗಳನ್ನು ನಿಯಮಿತ ಅವಧಿಗಳಲ್ಲಿ ತೆಗೆದು ಹಾಕುವುದು ಮುಖ್ಯ ಪರಿಪಾಠ, ಏಕೆಂದರೆ ದ್ಯುತಿ ಸಂಶ್ಲೇಷಣೆಗೆ ಬೇಕಾಗುವುದು ಮೇಲಿನ ಎಂಟು ಹತ್ತು ಎಲೆಗಳು ಮಾತ್ರವೇ. ನೆಟ್ಟ 150 ದಿನಗಳ ಬಳಿಕ, ಜಲ್ಲೆ ಮೂಡಿದ ಬಳಿಕ ಬೇಡದ ಎಲೆಗಳನ್ನು ತೆಗೆಯಬೇಕು ಹಾಗೂ ಆ ಬಳಿಕ ತಿಂಗಳಿಗೆರಡು ಸಲ ಇದನ್ನು ಮಾಡಬೇಕು. ಕಬ್ಬನ್ನು ಒಮ್ಮೆ ನೆಟ್ಟು ಬಹಳ ಸಲ ಕಟಾವು ಮಾಡಬಹುದು. ಪ್ರತಿಸಲ ಕಟಾವಾದ ಮೇಲೂ ಜಲ್ಲೆಯಲ್ಲಿ ಹೊಸ ಚಿಗುರು ಮೂಡುತ್ತದೆ. ಪ್ರತಿ ಕಟಾವಿನ ಬಳಿಕವೂ ಫಸಲು ಕಡಿಮೆಯಾಗುತ್ತ ಹೋಗುತ್ತದೆ, ಹಾಗಾಗಿ ಸ್ವಲ್ಪ ಸಮಯದ ಬಳಿಕ ಮತ್ತೆ ನೆಡಬೇಕಾಗುತ್ತದೆ. ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಸುವಾಗ ಸಾಮಾನ್ಯವಾಗಿ ಎರಡು ಅಥವಾ ಮೂರು ಸಲ ಕಟಾವಾದ ಬಳಿಕ ಮತ್ತೆ ನೆಡಲಾಗುತ್ತದೆ. ಕಟಾವು ಕೈಯಿಂದ ಅಥವಾ ಯಂತ್ರಗಳನ್ನುಪಯೋಗಿಸಿ ಮಾಡಲಾಗುತ್ತದೆ.
ಮಣ್ಣು
ಕಬ್ಬನ್ನು ವಿವಿಧ ಬಗೆಯ ಮಣ್ಣಲ್ಲಿ ಬೆಳೆಯಬಹುದಾದರೂ ನೀರು ಚೆನ್ನಾಗಿ ಬಸಿದ, ಆಳಕ್ಕಿರುವ ತಳಿಮಣ್ಣು ಪ್ರಶಸ್ತ. ಮಣ್ಣಿನ ಪಿಎಚ್ 5ರಿಂದ 8.5 ನಡುವೆ ಇರಬೇಕು, 6.5 ಅತಿ ಪ್ರಶಸ್ತ.
ಹವಾಮಾನ
ಕಬ್ಬು ಭೂಮಧ್ಯರೇಖೆಯಿಂದ 36.7° ಉತ್ತರ ಹಾಗೂ 31.0° ದಕ್ಷಿಣದ ಅಕ್ಷಾಂಶ ರೇಖೆಗಳ ನಡುವಿನ ಉಷ್ಣವಲಯ ಅಥವಾ ಉಪೋಷ್ಣವಲಯದ ಹವೆಯಲ್ಲಿ ಬೆಳೆಯಲು ಮಾರ್ಪಾಡಾಗಿರುವ ಸಸ್ಯ. ಜಲ್ಲೆಯ ತುಂಡುಗಳು ಚಿಗುರೊಡೆಯಲು 32° - 38°ಸಿ ಉಷ್ಣಾಂಶ ಪ್ರಶಸ್ತ. 100 ರಿಂದ 1500 ಎಂಎಂ ಮಳೆಯಾದರೆ ಕಬ್ಬು ಬೆಳೆಗೆ ಒಳ್ಳೆಯದು, ಏಕೆಂದರೆ ಕಬ್ಬಿಗೆ ಆರೇಳು ತಿಂಗಳುಗಳಿಗಿಂತಲೂ ಹೆಚ್ಚಿನ ಕಾಲ ಎಡೆಬಿಡದೆ ನೀರಿನ ಪೂರೈಕೆ ಇರಬೇಕು. ತೇವಾಂಶ ಅಧಿಕವಿದ್ದರೆ (80-85%) ಜಲ್ಲೆಗಳು ತ್ವರಿತಗತಿಯಲ್ಲಿ ಉದ್ದಕ್ಕೆ ಬೆಳೆಯುತ್ತವೆ.