ನಿಗಾವಣೆ
ಆಲೂಗಡ್ಡೆ ಮೂಲತಃ ದಕ್ಷಿಣ ಅಮೆರಿಕದ ಆಂಡಿಸ್ ನ ಬೆಳೆ. ಇದನ್ನು ಭಾರತದಲ್ಲಿ ಕಳೆದ 300 ವರ್ಷಗಳಿಂದ ಬೆಳೆಯುತ್ತಿದ್ದಾರೆ ಹಾಗೂ ಇಲ್ಲಿನ ಪ್ರಸಿದ್ಧ ಬೆಳೆಗಳಲ್ಲಿ ಇದೂ ಒಂದಾಗಿದೆ. ಈ ಗಿಡವನ್ನು ಗಡ್ಡೆಗೋಸ್ಕರವೇ ಬೆಳೆಸುತ್ತಾರೆ. ಆಲೂಗಡ್ಡೆಯು ಕಡಿಮೆ ಖರ್ಚಿನಲ್ಲಿ ಹೆಚ್ಚು ಶಕ್ತಿ ಕೊಡುವ ತರಕಾರಿ. ಪಿಷ್ಟ, ಜೀವಸತ್ವಗಳು (ವಿಟಮಿನ್, ವಿಶೇಷವಾಗಿ ಸಿ ಹಾಗೂ ಬಿ1) ಮತ್ತು ಖನಿಜಾಂಶಗಳಿಂದಾಗಿ ಪೌಷ್ಟಿಕಾಂಶವೂ ಹೇರಳವಾಗಿದೆ. ಆಲೂಗಡ್ಡೆಯನ್ನು ಸ್ಟಾರ್ಚ್ ಮತ್ತು ಆಲ್ಕೋಹಾಲ್ ತಯಾರಿಕೆ ಮುಂತಾದ ಔದ್ಯಮಿಕ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ.
ಮಣ್ಣು
ಲವಣಯುಕ್ತ ಮತ್ತು ಕ್ಷಾರಯುಕ್ತ ಮಣ್ಣುಗಳನ್ನು ಹೊರತುಪಡಿಸಿ ಬೇರೆ ಎಲ್ಲ ಬಗೆಯ ಮಣ್ಣಿನಲ್ಲೂ ಆಲೂಗಡ್ಡೆ ಬೆಳೆಯುತ್ತದೆ. ಗಡ್ಡೆ ಬೆಳೆಯಲು ಅಡ್ಡಿಯೊಡ್ಡದ ಸಡಿಲ ಮಣ್ಣು ಉತ್ತಮ. ನೀರು ಚೆನ್ನಾಗಿ ಹರಿದು ಹೋಗುವಂಥ, ಗಾಳಿ ಚೆನ್ನಾಗಿ ಆಡುವಂಥ ಹಾಗೂ ಸಾವಯವ ಪದಾರ್ಥ ಹೇರಳವಾಗಿರುವ ಕಳಿಮಣ್ಣು ಮತ್ತು ಮರಳು ಮಿಶ್ರಿತ ಕಳಿಮಣ್ಣು ಆಲೂಗಡ್ಡೆ ಬೆಳೆಯಲು ಹೆಚ್ಚು ಸೂಕ್ತ. 5.2ರಿಂದ 6.4 ರವರೆಗಿನ ಪಿ ಎಚ್ ಶ್ರೇಣಿ ಅತ್ಯುತ್ತಮ.
ಹವಾಮಾನ
ಆಲೂಗಡ್ಡೆಯು ಸಮಶೀತೋಷ್ಣ ಹವೆಯ ಬೆಳೆಯಾದರೂ ಕೂಡ ಭಿನ್ನ ಶ್ರೇಣಿಯ ಹವಾಮಾನ ಪರಿಸ್ಥಿತಿಯಲ್ಲಿ ಬೆಳೆಯುವ ಸಾಮರ್ಥ್ಯ ಅದಕ್ಕಿದೆ. ಬೆಳೆಯುವ ಋತುವಿನ ಉಷ್ಣಾಂಶವು ಕೊಂಚ ತಣ್ಣಗಿರುವ ಸ್ಥಳಗಳಲ್ಲಿ ಮಾತ್ರವೇ ಇದನ್ನು ಬೆಳೆಸಲಾಗುತ್ತದೆ. ಕಾಂಡ, ಬೇರು ಮತ್ತು ಎಲೆಗಳು 24°ಸೆ ಉಷ್ಣಾಂಶದಲ್ಲಿ ಚೆನ್ನಾಗಿ ಬೆಳೆದರೆ ಗಡ್ಡೆ ಬೆಳೆಯಲು 20°ಸೆ ಉಷ್ಣಾಂಶ ಪ್ರಶಸ್ತ. ಹೀಗಾಗಿ ಆಲೂಗಡ್ಡೆಯನ್ನು ಬೆಟ್ಟ ಪ್ರದೇಶಗಳಲ್ಲಿ ಬೇಸಗೆಯ ಬೆಳೆಯಾಗಿಯೂ ಉಷ್ಣವಲಯ ಹಾಗೂ ಉಪೋಷ್ಣವಲಯದ ಪ್ರದೇಶಗಳಲ್ಲಿ ಚಳಿಗಾಲದ ಬೆಳೆಯಾಗಿಯೂ ಬೆಳೆಸುತ್ತಾರೆ. ಸಮುದ್ರ ಮಟ್ಟದಿಂದ ಸುಮಾರು 3000 ಮೀಟರಿನಷ್ಟು ಎತ್ತರದಲ್ಲಿ ಕೂಡ ಈ ಬೆಳೆಯನ್ನು ತೆಗೆಯಬಹುದು.