ನಿಗಾವಣೆ
ಈರುಳ್ಳಿ ಗಟ್ಟಿಯಾದ ತಂಪು ಋತುವಿನ ದ್ವೈವಾರ್ಷಿಕ ಬೆಳೆ. ಆದರೆ ಸಾಮಾನ್ಯವಾಗಿ ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಅವು ವಿವಿಧ ಆಕಾರಗಳು, ಗಾತ್ರಗಳು ಮತ್ತು ಬಣ್ಣಗಳಲ್ಲಿ ಬರುತ್ತವೆ. ರೈತರು ಸಾಮಾನ್ಯವಾಗಿ ಬೀಜಗಳಿಂದ ಈರುಳ್ಳಿ ಬೆಳೆಯುತ್ತಾರೆ ಮತ್ತು ಸಸಿಗಳನ್ನು ನಾಟಿ ಮಾಡುತ್ತಾರೆ. ಈರುಳ್ಳಿ ಸೆಟ್ ಗಳನ್ನು ಮುಖ್ಯವಾಗಿ ಬೀಜ ಉತ್ಪಾದನೆಗೆ ಬಳಸಲಾಗುತ್ತದೆ. ಬೆಳೆದ ಪ್ರಭೇದದ ಅವಧಿ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿ, ರೈತರು ವರ್ಷಕ್ಕೆ 3 ಬಾರಿ ಈರುಳ್ಳಿಯನ್ನು ಬೆಳೆಸಬಹುದು.
ಮಣ್ಣು
ಯಶಸ್ವಿ ಈರುಳ್ಳಿ ಕೃಷಿಗೆ ಉತ್ತಮವಾಗಿ ನೀರು ಬಸಿಯುವ, ತೇವಾಂಶವನ್ನು ಹಿಡಿದಿಡುವ ಸಾಮರ್ಥ್ಯವಿರುವ ಮತ್ತು ಸಾಕಷ್ಟು ಸಾವಯವ ಪದಾರ್ಥಗಳನ್ನು ಹೊಂದಿರುವ ಉತ್ತಮವಾದ ಕಲಸು ಮತ್ತು ಮಕ್ಕಲು ಮಣ್ಣು ಒಳ್ಳೆಯದು. ಯಾವುದೇ ಮಣ್ಣಿನ ಪ್ರಕಾರವಾಗಲಿ ಸೂಕ್ತ ಪಿಹೆಚ್ ಶ್ರೇಣಿ 6.0 - 7.5 ಇರಬೇಕು. ಆದರೆ ಈರುಳ್ಳಿಯನ್ನು ಸೌಮ್ಯ ಕ್ಷಾರೀಯ ಮಣ್ಣಿನಲ್ಲಿ ಸಹ ಬೆಳೆಯಬಹುದು. ಈರುಳ್ಳಿಗೆ ಹೇರಳವಾದ ಸೂರ್ಯನ ಬೆಳಕು ಮತ್ತು ಉತ್ತಮ ಒಳಚರಂಡಿಯ ಅಗತ್ಯವಿರುತ್ತದೆ. ಈರುಳ್ಳಿ ಸಸ್ಯಗಳು ಎತ್ತರದ ಪಾತಿಗಳಲ್ಲಿ ಅಥವಾ ಕನಿಷ್ಠ 10 ಸೆಂ.ಮೀ ಎತ್ತರವಿರುವ ದಿಬ್ಬದ ಮಣ್ಣಿನ ಸಾಲುಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ.
ಹವಾಮಾನ
ಈರುಳ್ಳಿ ಸಮಶೀತೋಷ್ಣ ಬೆಳೆಯಾಗಿದೆ. ಆದರೆ ಸಮಶೀತೋಷ್ಣ, ಉಷ್ಣವಲಯ ಮತ್ತು ಉಪೋಷ್ಣವಲಯ ಹವಾಮಾನದಂತಹ ಹಲವು ಹವಾಮಾನ ಪರಿಸ್ಥಿತಿಗಳಲ್ಲಿ ಇದನ್ನು ಬೆಳೆಯಬಹುದು. ಅತೀ ಶೀತ ಮತ್ತು ಅತೀ ಉಷ್ಣತೆ ಮತ್ತು ಅತಿಯಾದ ಮಳೆಯಿಲ್ಲದ ಸೌಮ್ಯ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಆದಾಗ್ಯೂ, ಈರುಳ್ಳಿ ಘನೀಕರಿಸುವ ತಾಪಮಾನವನ್ನು ತಡೆದುಕೊಳ್ಳಬಲ್ಲದು. ಉತ್ತಮ ಬೆಳವಣಿಗೆಗೆ ಸುಮಾರು 70% ಸಾಪೇಕ್ಷ ಆರ್ದ್ರತೆಯ ಅಗತ್ಯವಿರುತ್ತದೆ. ಮಾನ್ಸೂನ್ ಅವಧಿಯಲ್ಲಿ ಉತ್ತಮವಾಗಿ ಹರಡಿರುವಂತಹ ಸರಾಸರಿ ವಾರ್ಷಿಕ ಮಳೆ 650-750 ಮಿ.ಮೀ ಇರುವ ಸ್ಥಳಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಈರುಳ್ಳಿಯ ಸಸ್ಯಕ ಬೆಳವಣಿಗೆಗೆ ಕಡಿಮೆ ತಾಪಮಾನ ಮತ್ತು ಕಡಿಮೆ ಹಗಲು (ಫೋಟೊಪೆರಿಯೊಡ್) ಅಗತ್ಯವಿದ್ದರೆ, ಗೆಡ್ಡೆಯ ಅಭಿವೃದ್ಧಿ ಮತ್ತು ಪಕ್ವತೆಯ ಹಂತದಲ್ಲಿ ಹೆಚ್ಚಿನ ತಾಪಮಾನ ಮತ್ತು ಹೆಚ್ಚಿನ ಹಗಲು ಬೆಳಕು ಬೇಕಾಗುತ್ತದೆ.