ನಿಗಾವಣೆ
ದ್ರಾಕ್ಷಿಯನ್ನು ಯಾವುದಕ್ಕೆ ಬಳಸುತ್ತೀರೆಂಬುದನ್ನ ಅವಲಂಬಿಸಿ ಪ್ರಭೇದವನ್ನು ಆರಿಸುವುದು ಮುಖ್ಯವಾಗುತ್ತದೆ. ಪ್ರಭೇದವನ್ನು ಆರಿಸಿದ ಕೂಡಲೆ ಆದಷ್ಟು ಬೇಗ ಬಳ್ಳಿಗಳನ್ನು ನೆಡಬೇಕು, ಅದರಿಂದ ಗಿಡಗಳಿಗೆ ಚಳಿಗಾಲಕ್ಕೆ ತಯಾರಾಗಲು ಸಮಯ ದೊರಕುತ್ತದೆ. ನೆಡುವ ಮೊದಲು ಗಿಡವನ್ನು 3-4 ಗಂಟೆ ನೀರಿನಲ್ಲಿ ನೆನೆಸಿ. ಬಳ್ಳಿಯ ಬುಡದಲ್ಲಿರುವ ಚಿಗುರು ನೆಲದಿಂದ ಕೊಂಚವೇ ಮೇಲಕ್ಕಿರುವಂತೆ ನೆಡಿ. ನೆಟ್ಟ ಕೂಡಲೇ ನೀರಾವರಿ ಅವಶ್ಯ, ಹಾಗೂ ವಾರಕ್ಕೊಮ್ಮೆ ನೀರಾವರಿ ಮುಂದುವರೆಸಿ ಮಣ್ಣನ್ನು ತೇವವಾಗಿಡಿ. ಬಳ್ಳಿಗಳು ಬೆಳೆಯುವ ಸಮಯದಲ್ಲಿ ನೆಲದಲ್ಲಿ ಅಡ್ಡಕ್ಕೆ ಬೆಳೆಯದೆ ಮೇಲಕ್ಕೆ ಬೆಳೆಯಲು ಯಾವುದಾದದರೊಂದು ರೀತಿಯ ಆಧಾರ ಅವಶ್ಯ.
ಮಣ್ಣು
ದ್ರಾಕ್ಷಿಯು ವಿವಿಧ ರೀತಿಯ ಮಣ್ಣಿನಲ್ಲಿ ಬೆಳೆಯುತ್ತದೆಯಾದರೂ ಮರಳು ಮಿಶ್ರಿತ ಕಳಿಮಣ್ಣು ಪ್ರಶಸ್ತ. ಹದವಾದ ಪೌಷ್ಟಿಕಾಂಶ ಅವಶ್ಯ. ಬೆಳೆಯುವ ಋತುವಿಗೆ ಮುನ್ನ ಮಣ್ಣಿಗೆ ಸಾರಜನಕ ಮತ್ತು ಪೊಟ್ಯಾಷಿಯಮ್ ಸೇರಿಸುವುದರಿಂದ ಕಡಿಮೆ ಪೌಷ್ಟಿಕಾಂಶವಿರುವ ಮಣ್ಣಿಗೆ ಪ್ರಯೋಜನವಾಗುತ್ತದೆ. 5.5ರಿಂದ 7 ರ ನಡುವಿನ ಪಿ ಎಚ್ ಇರುವ ಎಸಿಡಿಕ್ ಸ್ಥಿತಿಯಲ್ಲಿ ದ್ರಾಕ್ಷಿ ಚೆನ್ನಾಗಿ ಬೆಳೆಯುತ್ತದೆ. ಬೇರು ಮೂಡಲು ಹಾಗೂ ಖಾಯಿಲೆ ತಡೆಯಲು ಮಣ್ಣಿನಲ್ಲಿ ನೀರು ನಿಲ್ಲದೆ ಚೆನ್ನಾಗಿ ಹರಿದು ಹೋಗುವುದು ಅವಶ್ಯ.
ಹವಾಮಾನ
ಚಳಿಗಾಲ ತೀವ್ರವಾಗಿಲ್ಲದಿದ್ದು ದೀರ್ಘಕಾಲ ಬೆಚ್ಚಗಿನ ಹವೆಯಲ್ಲಿ ಬೆಳೆಯುವ ಅವಕಾಶವಿದ್ದರೆ ದ್ರಾಕ್ಷಿ ಚೆನ್ನಾಗಿ ಬೆಳೆಯುತ್ತದೆ. ದ್ರಾಕ್ಷಿಗೆ ವರ್ಷಕ್ಕೆ 710 ಎಂಎಂ ಮಳೆ ಬೇಕಾಗುತ್ತದೆ. ಅತಿಯಾದರೂ ತೀರಾ ಕಡಿಮೆಯಾದರೂ ಬೆಳೆಗೆ ಕುತ್ತು. ಬೆಚ್ಚಗಿನ ಒಣ ಹವೆಯ ಕಾರಣದಿಂದ ಮೆಡಿಟೆರಾನಿಯನ್ ಪ್ರದೇಶಗಳಲ್ಲಿ ದ್ರಾಕ್ಷಿ ಚೆನ್ನಾಗಿ ಬೆಳೆಯುತ್ತದೆ. ದ್ರಾಕ್ಷಿ ಬಳ್ಳಿ ಬೆಳೆಯುವ ಪ್ರಕ್ರಿಯೆ ಶುರುವಾಗಲು ಕನಿಷ್ಠ ಪಕ್ಷ 10 ಡಿಗ್ರಿ ಸೆಲ್ಷಿಯಸ್ ಅಥವಾ 50 ಡಿಗ್ರಿ ಫ್ಯಾರನ್ ಹೀಟ್ ಉಷ್ಣಾಂಶ ಬೇಕಾಗುತ್ತದೆ. ದ್ರಾಕ್ಷಿಯ ಸ್ವಾದದ ಮೇಲೆ ಉಷ್ಣಾಂಶ, ಮಳೆ, ಮತ್ತಿತರ ಹವಾಮಾನ ಸಂಬಂಧಿ ಅಂಶಗಳ ಪರಿಣಾಮವಿರುತ್ತದೆ. ಪ್ರಾದೇಶಿಕ ಹವೆಯ ವ್ಯತ್ಯಾಸಗಳಿಂದ ಉತ್ಪನ್ನದ ಸ್ವಾದ ವ್ಯತ್ಯಾಸವಾಗುವ ವೈನ್ ಉದ್ಯಮದಲ್ಲಿ ಇದನ್ನು ವಿಶೇಷವಾಗಿ ಕಾಣಬಹುದು. ಅಲ್ಲದೆ, ಕೆಲವು ಪ್ರಭೇದಗಳು ನಿರ್ದಿಷ್ಟ ಪ್ರದೇಶ ಮತ್ತು ಹವಾಮಾನ ವಲಯಗಳಿಗೆ ಹೆಚ್ಚು ಸೂಕ್ತವಾಗಿರುತ್ತವೆ.