ಗೋಧಿ

ಫ್ಯುಸಾರಿಯಮ್ ಶಿರ ಅಂಗಮಾರಿ

Fusarium graminearum

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಈ ರೋಗವು ಎರಡು ವಿಧದ ಲಕ್ಷಣಗಳನ್ನು ತೋರಿಸುತ್ತದೆ: ಸಸಿಯ ಅಂಗಮಾರಿ ಮತ್ತು ಶಿರದ ಅಂಗಮಾರಿ.
  • ಕಾಂಡದ ಕೆಳಭಾಗದಲ್ಲಿ ತೆಳು ಕಂದು ಬಣ್ಣದ ಗಾಯಗಳು, ನೀರಿನಲ್ಲಿ ನೆನಸಿದಂತಹ ಗಾಯಗಳು, ಸಸಿಗಳ ಕೊಳೆತ ಮತ್ತು ಅಂಗಮಾರಿ, ಮೊದಲನೆಯದರ ಲಕ್ಷಣಗಳು.
  • ನೀರಿನಲ್ಲಿ -ನೆನೆಸಿದಂತಹ ಕಿರಿಕದಿರುಗಳು ಮತ್ತು ಬಿಳುಚಿಕೊಂಡ ಒಣಹುಲ್ಲು ಶಿರ ಅಂಗಮಾರಿಯ ಎರಡು ಪ್ರಮುಖ ಲಕ್ಷಣಗಳು.
  • ಬೆಚ್ಚಗಿನ, ತೇವಭರಿತ ವಾತಾವರಣದಲ್ಲಿ, ಸಮೃದ್ಧವಾದ ಶಿಲೀಂಧ್ರಗಳ ಬೆಳವಣಿಗೆಯಿಂದಾಗಿ ಅವು ಗುಲಾಬಿ ಬಣ್ಣದಿಂದ ತಿಳಿ-ಕಂದು ಬಣ್ಣಕ್ಕೆ ತಿರುಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಗೋಧಿ

ರೋಗಲಕ್ಷಣಗಳು

ರೋಗಲಕ್ಷಣಗಳ ತೀವ್ರತೆಯು, ಬೆಳೆಯ ವಿಧ (ಗಮನಾರ್ಹ ಆಶ್ರಯದಾತ ಸಸ್ಯಗಳೆಂದರೆ ಗೋಧಿ, ಓಟ್ ಮತ್ತು ಬಾರ್ಲಿ ), ಸೋಂಕಿನ ಸಮಯ ಮತ್ತು ಪರಿಸರ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ರೋಗವು ಎರಡು ವಿಧದ ಗುಣಲಕ್ಷಣಗಳನ್ನು ಹೊಂದಿದೆ: ಸಸಿಯ ಅಂಗಮಾರಿ ಮತ್ತು ಶಿರ ಅಂಗಮಾರಿ. ಮೊದಲನೆಯದರಲ್ಲಿ ತೆಳು ಕಂದು ಬಣ್ಣದ, ನೀರಿನಲ್ಲಿ ನೆನೆಸಿದಂತಹ ಗಾಯಗಳು ಕಾಂಡದ ತಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಮೊಳಕೆಯೊಡೆಯುವ ಸಮಯದಲ್ಲಿ ಸಸಿ ಕೊಳೆತಂತಾಗುತ್ತದೆ. ಸೋಂಕಿತ ಬೀಜಗಳನ್ನು ತಂಪಾದ, ತೇವಭರಿತ ಮಣ್ಣಿನಲ್ಲಿ ಬಿತ್ತನೆ ಮಾಡಿದರೆ ಇದು ವಿಶೇಷವಾಗಿ ಕಂಡುಬರುತ್ತದೆ. ಸಸ್ಯದ ಬೆಳವಣಿಗೆಯ ನಂತರದ ಹಂತಗಳಲ್ಲಿ, ಶಿರ ಮತ್ತು ಕಾಂಡದ ತಳಭಾಗದ ಕೊಳೆತ ಸಾಮಾನ್ಯವಾಗಿ ಕಂಡುಬರುತ್ತದೆ. ನೀರಿನಲ್ಲಿ ನೆನೆಸಿದಂತಹ ಕಿರಿಕದಿರುಗಳು ಮತ್ತು ಬಿಳುಚಿಕೊಂಡ ಒಣಹುಲ್ಲು ಶಿರ ಅಂಗಮಾರಿಯ ಎರಡು ಪ್ರಮುಖ ಲಕ್ಷಣಗಳು. ಬೆಚ್ಚಗಿನ, ತೇವಭರಿತ ವಾತಾವರಣದಲ್ಲಿ, ಶಿಲೀಂಧ್ರಗಳು ಸಮೃದ್ಧವಾಗಿ ಬೆಳೆಯುವ ಕಾರಣ ಇವು ಗುಲಾಬಿ ಬಣ್ಣದಿಂದ ತಿಳಿ-ಕಂದು ಬಣ್ಣಕ್ಕೆ ತಿರುಗುತ್ತವೆ. ಕಾಳು ಗಟ್ಟಿ ಮತ್ತು ಒರಟಾಗಿರುತ್ತವೆ. ಸಾಮಾನ್ಯವಾಗಿ, ಸೋಂಕು ಕಿರಿಕದಿರಿನಿಂದ ಕಿರಿಕದಿರಿಗೆ ಹರಡಿ ಇಡೀ ಕದಿರು ಕೊನೆಗೆ ಸೋಂಕಿತವಾಗುತ್ತದೆ. ಕೆಲವು ಬೆಳೆಗಳಲ್ಲಿ, ಇಳುವರಿ ನಷ್ಟ 70% ವರೆಗೆ ಆಗಿರುವುದು ಕಂಡುಬಂದಿದೆ.

Recommendations

ಜೈವಿಕ ನಿಯಂತ್ರಣ

ಫುಸಾರಿಯಮ್ ಗ್ರಮಿನೀರಮ್ ಸೋಂಕನ್ನು ಕಡಿಮೆಮಾಡಲು ಹಲವಾರು ಜೈವಿಕ ನಿಯಂತ್ರಣ ಏಜೆಂಟ್ ಗಳನ್ನು ಸಫಲವಾಗಿ ಪರೀಕ್ಷಿಸಲಾಗಿದೆ. ಗೋಧಿಯಲ್ಲಿ ಬ್ಯಾಕ್ಟೀರಿಯಾಗಳಾದ ಸ್ಯೂಡೋಮೊನಸ್ ಫ್ಲೋರಸೆನ್ಸ್, ಬ್ಯಾಸಿಲಸ್ ಮೆಗಥೇರಿಯಂ ಮತ್ತು ಬ್ಯಾಸಿಲಸ್ ಸಬ್ಟಿಲೀಸ್ ಗಳನ್ನು ಹೊಂದಿರುವ ವಿವಿಧ ಉತ್ಪನ್ನಗಳನ್ನು ರೋಗ, ಅದರ ತೀವ್ರತೆ ಮತ್ತು ಇಳುವರಿ ನಷ್ಟವನ್ನು ಕಡಿಮೆಮಾಡಲು ಹೂ ಬಿಡುವ ಸಮಯದಲ್ಲಿ ಬಳಸಲಾಗಿದೆ. ಬಹುತೇಕ ಈ ಪ್ರಯೋಗಗಳು ಕ್ಷೇತ್ರ ನಿಯಂತ್ರಿತ ಸ್ಥಿತಿಯಲ್ಲಿ ಮಾಡಲಾಗಿದೆ. ಸ್ಪರ್ಧಾತ್ಮಕ ಶಿಲೀಂಧ್ರವಾದ ಟ್ರೈಕೋಡರ್ಮಾ ಹರ್ಝಿಯಾನಂ ಮತ್ತು ಕ್ಲೋನೋಸ್ಟಾಚಿಸ್ ರೋಸಿಯಾ ಗಳನ್ನೂ ಕೂಡ ಬಳಸಿ ಸ್ವಲ್ಪ ಯಶಸ್ಸು ಸಾಧಿಸಲಾಗಿದೆ. 5 ದಿನಗಳ ಕಾಲ 70 °C ಯಲ್ಲಿ ಒಣ ಶಾಖ ಚಿಕಿತ್ಸೆ ಗೋಧಿ ಮತ್ತು ಜವೆಗೋಧಿ ಬೀಜಗಳಿಂದ, ಈ ಶಿಲೀಂಧ್ರ ಹಾಗೂ ಇತರ ಬೀಜಕಗಳಿಂದ ಮುಕ್ತಗೊಳಿಸುವ ಪರಿಣಾಮಕಾರಿ ವಿಧಾನವೆಂದು ಕಂಡುಬಂದಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಫ್ಯುಸೇರಿಯಮ್ ಶಿರ ಅಂಗಮಾರಿಯ ನಿಯಂತ್ರಣಕ್ಕೆ ಶಿಲೀಂಧ್ರನಾಶಕವನ್ನು ಬಳಸುವ ಸಮಯ ಬಹಳ ಮುಖ್ಯವಾದುದು. ಟ್ರೈಝೋಲ್ ಕುಟುಂಬ (ಮೆಟ್ಕಾನ್ಝೋಲ, ಟೆಬ್ಯುಕಾನ್ಝೋಲ, ಪ್ರೋಥಿಯೋಕಾನ್ಝೋಲ್ ಮತ್ತು ಥಿಯಾನ್ಡಝೋಲ್)ದ ಶಿಲೀಂಧ್ರನಾಶಕಗಳನ್ನು ಹೂ ಬಿಡುವ ಸಮಯದಲ್ಲಿ ಎಲೆಗಳಿಗೆ ಸಿಂಪಡಿಸಿದರೆ ರೋಗದ ಸೋಂಕು ಮತ್ತು ಧಾನ್ಯದಲ್ಲಿರುವ ಮೈಕೊಟಾಕ್ಸಿನ್ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಈ ಉತ್ಪನ್ನಗಳಿಗೆ ಸುಗ್ಗಿ ಕಾಲ ನಿರ್ಬಂಧದ ಅವಧಿಗಳಿವೆ ಎಂಬುದನ್ನು ಗಮನಿಸಿ.

ಅದಕ್ಕೆ ಏನು ಕಾರಣ

ಧಾನ್ಯಗಳಲ್ಲಿ ಶಿರ ಅಂಗಮಾರಿ ಲಕ್ಷಣಗಳು ಫುಸಾರಿಯಮ್ ಗ್ರಮಿನೀರಂ ಎಂಬ ಶಿಲೀಂಧ್ರದಿಂದ ಉಂಟಾಗುತ್ತವೆ. ಇವು ಋತುಗಳ ನಡುವಿನ ಕಾಲವನ್ನು ಪರ್ಯಾಯ ಆಶ್ರಯದಾತ ಸಸ್ಯಗಳು ಅಥವಾ ಮಣ್ಣಿನಲ್ಲಿರುವ ಬೆಳೆಯ ಉಳಿಕೆಗಳ ಮತ್ತು ಸಾವಯವ ವಸ್ತುಗಳ ಮೇಲೆ ಸುಪ್ತಾವಸ್ಥೆಯಲ್ಲಿ ಕಳೆಯುತ್ತವೆ. ಅನುಕೂಲಕರ ಪರಿಸ್ಥಿತಿಗಳಲ್ಲಿ, ದೂರದವರೆಗೆ ಗಾಳಿಯಲ್ಲಿ ಸಾಗಿಸಬಹುದಾದ ಬೀಜಕಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಕೆಲವು ಕೀಟ ಪ್ರಭೇದಗಳೂ ಇವುಗಳು ಹರಡಲು ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ. ಧಾನ್ಯಗಳು ಈ ಶಿಲೀಂಧ್ರದ ಸೋಂಕಿಗೆ ಒಳಗಾಗುವ ಅತ್ಯಂತ ಪ್ರಮುಖ ಕಾಲವೆಂದರೆ ಹೂ ಬಿಡುವ ಅವಧಿಯಾಗಿದೆ. ಒಮ್ಮೆ ಅದು ಸಸ್ಯ ಅಂಗಾಂಶದ ಮೇಲೆ ಕುಡಿಯೊಡೆದ ನಂತರ, ನೇರವಾಗಿ ಹೊರಪೊರೆಯಲ್ಲಿರುವ ನೈಸರ್ಗಿಕ ರಂಧ್ರಗಳ ಮೂಲಕ ಒಳ ಸೇರಬಲ್ಲದು. ಇದು ನಾಳೀಯ ಅಂಗಾಂಶಗಳಲ್ಲಿ ಬೆಳೆಯುವುದರಿಂದ ಸಾಮಾನ್ಯವಾಗಿ ಕದಿರಿಗೆ ನೀರು ಮತ್ತು ಪೋಷಕಾಂಶಗಳ ಪೂರೈಕೆಗೆ ಅಡಚಣೆ ಮಾಡುತ್ತದೆ. ಪರಿಣಾಮವಾಗಿ ಕಿರಿಕದಿರುಗಳು ಬಿಳುಚಿಕೊಳ್ಳುತ್ತವೆ ಮತ್ತು ಕಾಳುಗಳು ಬಾಡುತ್ತವೆ. ಇದಲ್ಲದೆ, ವಿಷವಸ್ತುಗಳ ಉತ್ಪಾದನೆಯಿಂದ ಧಾನ್ಯದ ಮಾರುಕಟ್ಟೆ ಮೌಲ್ಯ ಕುಸಿಯುತ್ತದೆ. ಬೆಳಕು, ಪ್ರಖರತೆ, ತಾಪಮಾನ, ಆರ್ದ್ರತೆ, ಇಬ್ಬನಿ ಮತ್ತು ಎಲೆ ಆರ್ದ್ರತೆ ಮುಂತಾದ ಪರಿಸರ ಅಂಶಗಳು ಇದರ ಜೀವನ ಚಕ್ರವನ್ನು ಪ್ರಭಾವಿಸುತ್ತವೆ. 20-32 °C ತಾಪಮಾನ ಮತ್ತು ದೀರ್ಘಕಾಲದ ಎಲೆ ಆರ್ದ್ರತೆಯು ಹೆಚ್ಚು ಅನುಕೂಲಕರವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬಳಸಿ.
  • ಸೂರ್ಯನ ಬೆಳಕಿಗೆ ಒಡ್ಡಿರುವ ಮತ್ತು ಉತ್ತಮ ಗಾಳಿಯಾಡುವ ಸ್ಥಳಗಳನ್ನು ಆರಿಸಿ.
  • ಬೆಳೆಗಳಿಗೆ ಉತ್ತಮ ಗಾಳಿಯಾಡಲು ಅವಕಾಶವಾಗುವಂತೆ ಬಿತ್ತನೆ ಸಮಯದಲ್ಲಿ ಬೀಜಗಳ ನಡುವಿನ ಅಂತರವನ್ನು ಹೆಚ್ಚಿಸಿ.
  • ಆಶ್ರಯದಾತವಲ್ಲದ ಜಾತಿಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.
  • ಸಾರಜನಕದ ಅತಿಯಾದ ಬಳಕೆ ತಪ್ಪಿಸಿ.
  • ಉಳುಮೆ ಮಾಡುವುದು ಶಿಲೀಂಧ್ರದ ಜೀವನ ಚಕ್ರಕ್ಕೆ ಅನುಕೂಲವಾಗುವುದರಿಂದ ಅಗತ್ಯವಿದ್ದರೆ ಮಾತ್ರ ಮಾಡಿ.
  • ಜಮೀನು ಮತ್ತು ಅದರ ಸುತ್ತಲೂ ಕಳೆ ಮತ್ತು ಪರ್ಯಾಯ ಆಶ್ರಯದಾತ ಸಸ್ಯಗಳನ್ನು ತೆಗೆದುಹಾಕಿ.
  • ಸುಗ್ಗಿಯ ನಂತರ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಹೂತು ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ